Asianet Suvarna News Asianet Suvarna News

3 ಮಾದರಿಯ ವಿಶ್ವಕಪ್‌ ಫೈನಲ್‌ ಆಡಲಿರುವ ಮೊದಲ ತಂಡ ಭಾರತ..!

* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಅಪರೂಪದ ದಾಖಲೆ ಬರೆಯಲಿರುವ ಟೀಂ ಇಂಡಿಯಾ

* ಮೂರು ಮಾದರಿಯ ಐಸಿಸಿ ಟೂರ್ನಿಯಲ್ಲಿ ಫೈನಲ್ ಪಂದ್ಯವನ್ನಾಡಲಿರುವ ಏಕೈಕ ತಂಡ ಭಾರತ

* ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿಂದು ಭಾರತ-ನ್ಯೂಜಿಲೆಂಡ್ ಮುಖಾಮುಖಿ

WTC Final Team India Only Team to compete ICC all 3 format Cricket Final kvn
Author
Southampton, First Published Jun 18, 2021, 1:24 PM IST

ಸೌಥಾಂಪ್ಟನ್‌(ಜೂ.18): ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವ ಸಾಧ್ಯತೆಯಿದೆ. ಈ ಪಂದ್ಯವು ಟೀಂ ಇಂಡಿಯಾ ಪಾಲಿಗೆ ದಾಖಲೆಯ ಪಂದ್ಯ ಕೂಡಾ ಎನಿಸಲಿದೆ.

ಹೌದು, ಏಕದಿನ, ಟಿ20 ವಿಶ್ವಕಪ್‌ಗಳ ಫೈನಲ್‌ನಲ್ಲಿ ಆಡಿ, ಟ್ರೋಫಿಯನ್ನು ಗೆದ್ದಿರುವ ಟೀಂ ಇಂಡಿಯಾ ಇದೀಗ ಟೆಸ್ಟ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಆಡುವ ಮೂಲಕ ಹೊಸ ದಾಖಲೆ ಬರೆಯಲಿದೆ. ಮೂರೂ ಮಾದರಿಯ ಫೈನಲ್‌ನಲ್ಲಿ ಆಡಲಿರುವ ವಿಶ್ವದ ಮೊದಲ ತಂಡ ಭಾರತ. ನ್ಯೂಜಿಲೆಂಡ್‌ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಷ್ಟೇ ಆಡಿದೆ. ಟಿ20 ವಿಶ್ವಕಪ್‌ನಲ್ಲಿ ತಂಡ ಫೈನಲ್‌ಗೇರಿಲ್ಲ.

ಭಾರತದ ಫೈನಲ್‌ ಹಾದಿ

ಕೋವಿಡ್‌ನಿಂದಾಗಿ ಹಲವು ಸರಣಿಗಳು ನಡೆಯಲಿಲ್ಲ. ಫೈನಲ್‌ಗೇರಲು ಐಸಿಸಿ ಹೊಸ ಮಾನದಂಡ ರೂಪಿಸಿತು. ಅಂಕ ಪ್ರತಿಶತವನ್ನು ಪರಿಗಣಿಸಿ ಮೊದಲೆರಡು ತಂಡಗಳನ್ನು ನಿರ್ಧಾರ ಮಾಡುವುದಾಗಿ ತಿಳಿಸಿತು. ಟೀಂ ಇಂಡಿಯಾ ಒಟ್ಟು 6 ಸರಣಿಗಳಲ್ಲಿ 17 ಪಂದ್ಯಗಳನ್ನಾಡಿತು. 12ರಲ್ಲಿ ಗೆದ್ದರೆ, 4ರಲ್ಲಿ ಸೋಲು ಕಂಡಿತು. 1 ಪಂದ್ಯ ಡ್ರಾಗೊಂಡಿತು. ಒಟ್ಟು 720 ಅಂಕಗಳಿಗೆ ಸ್ಪರ್ಧಿಸಿ 520 ಅಂಕಗಳನ್ನು ಗಳಿಸಿದ ಭಾರತ ಶೇ.72.2 ಅಂಕ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು, ಫೈನಲ್‌ ಪ್ರವೇಶಿಸಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಟೆಸ್ಟ್ ಕ್ರಿಕೆಟ್‌ಗೆ ಯಾರು ಬಾಸ್‌..?

ನ್ಯೂಜಿಲೆಂಡ್‌ನ ಫೈನಲ್‌ ಹಾದಿ

ನ್ಯೂಜಿಲೆಂಡ್‌ 5 ಸರಣಿಗಳಲ್ಲಿ ಒಟ್ಟು 11 ಪಂದ್ಯಗಳನ್ನಾಡಿತು. ಈ ಪೈಕಿ 7ರಲ್ಲಿ ಜಯ, 4ರಲ್ಲಿ ಸೋಲು ಕಂಡಿತು. 600 ಅಂಕಗಳಿಗೆ ಸ್ಪರ್ಧಿಸಿದ್ದ ನ್ಯೂಜಿಲೆಂಡ್‌ ಕ್ರಿಕೆಟ್ ತಂಡವು, 420 ಅಂಕ ಕಲೆಹಾಕಿತು. ತಂಡ ಶೇ.70ರಷ್ಟುಅಂಕ ಪ್ರತಿಶತ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿ ಫೈನಲ್‌ಗೇರಿತು. ಭಾರತ ವಿರುದ್ಧ 2ನೇ ಟೆಸ್ಟ್‌ನಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕಾಗಿ ಆಸ್ಪ್ರೇಲಿಯಾಕ್ಕೆ 4 ಅಂಕ ಕಡಿತಗೊಳಿಸಲಾಯಿತು. ಇದರಿಂದಾಗಿ ಆಸೀಸ್‌ನ ಅಂಕ ಪ್ರತಿಶತ ಶೇ.69.2ಕ್ಕೆ ಕುಸಿಯಿತು. ಆಸೀಸ್‌ 3ನೇ ಸ್ಥಾನ ಪಡದು ಫೈನಲ್‌ ರೇಸ್‌ನಿಂದ ಹೊರಬಿತ್ತು.

ವಿಶ್ವಕಪ್‌ ಗೆಲ್ಲುವ ತಂಡಕ್ಕೆ 12 ಕೋಟಿ ರು. ಬಹುಮಾನ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಗೆಲ್ಲುವ ತಂಡಕ್ಕೆ 1.6 ಮಿಲಿಯನ್‌ ಡಾಲರ್‌ (ಅಂದಾಜು 11.73 ಕೋಟಿ ರು.) ಹಾಗೂ ಸೋಲುವ ತಂಡಕ್ಕೆ 800000 ಅಮೆರಿಕನ್‌ ಡಾಲರ್‌ (ಅಂದಾಜು 5.86 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ ಒಟ್ಟು 2.4 ಮಿಲಿಯನ್‌ ಡಾಲರ್‌ ಬಹುಮಾನ ಮೊತ್ತವನ್ನು ಉಭಯ ತಂಡಗಳು ಹಂಚಿಕೊಳ್ಳಲಿವೆ. ಅಂದರೆ ಪ್ರತಿ ತಂಡಕ್ಕೆ 1.2 ಮಿಲಿಯನ್‌ ಡಾಲರ್‌ (ಅಂದಾಜು 8.79 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ಬಹುಮಾನ ಮೊತ್ತದ ಜೊತೆಗೆ ಗೆಲ್ಲುವ ತಂಡಕ್ಕೆ ಮೇಸ್‌ (ಗದೆ) ಕೂಡ ಸಿಗಲಿದೆ. ಪ್ರತಿ ವರ್ಷ ಅಗ್ರ ಸ್ಥಾನ ಪಡೆಯುವ ತಂಡಕ್ಕೆ ಸಿಗುತ್ತಿದ್ದ ಮೇಸ್‌ ಇನ್ಮುಂದೆ ವಿಶ್ವ ಚಾಂಪಿಯನ್‌ಶಿಪ್‌ ಗೆಲ್ಲುವ ತಂಡಕ್ಕೆ ಸಿಗಲಿದೆ.
 

Follow Us:
Download App:
  • android
  • ios