WTF Final ಸೋಲಿನ ಬೆನ್ನಲ್ಲೇ ಟೆಸ್ಟ್ ತಂಡಕ್ಕೆ ಯುವಶಕ್ತಿ ತುಂಬಲು ಒತ್ತಡ! ಹಿರಿಯರ ಆಟ ಈಗ ಮುಗಿದ ಅಧ್ಯಾಯ
2023-25ರ ವಿಶ್ವ ಚಾಂಪಿಯನ್: ಭಾರತ ತಂಡದಲ್ಲಿ ಬದಲಾವಣೆಗೆ ತಜ್ಞರ ಆಗ್ರಹ
ಮುಂಬರುವ ವಿಂಡೀಸ್ ಸರಣಿಗೇ ಯುವಕರ ಆಯ್ಕೆಗೆ ಕರೆ
ಆಯ್ಕೆ ರೇಸ್‌ನಲ್ಲಿ ಯಶಸ್ವಿ ಜೈಸ್ವಾಲ್, ಋುತುರಾಜ್ ಗಾಯಕ್ವಾಡ್
ನವದೆಹಲಿ(ಜೂ.13): ಸತತ 2ನೇ ಬಾರಿಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡ ಸೋಲನುಭವಿಸಿದ ಬೆನ್ನಲ್ಲೇ, ತಂಡದಲ್ಲೀಗ ಸಂಕ್ರಮಣ ಕಾಲ ಆರಂಭಗೊಳ್ಳಬೇಕು, ತಂಡಕ್ಕೆ ಯುವ ಶಕ್ತಿಯ ಅಗತ್ಯವಿದೆ ಎಂದು ಕ್ರಿಕೆಟ್ ತಜ್ಞರು ಒತ್ತಾಯಿಸಲು ಆರಂಭಿಸಿದ್ದಾರೆ. 2023-25ರ ವಿಶ್ವ ಚಾಂಪಿಯನ್‌ಶಿಪ್ ಮುಂದಿನ ತಿಂಗಳಿನಿಂದಲೇ ಶುರುವಾಗಲಿದ್ದು, ತಕ್ಷಣವೇ ಕೆಲ ಮಹತ್ವದ ಬದಲಾವಣೆಗಳು ಆಗಬೇಕು ಎಂದು ಹಲವು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.
ಪ್ರಮುಖವಾಗಿ ಭಾರತ ತಂಡದ ಬ್ಯಾಟಿಂಗ್ ಪಡೆಗೆ ಹೊಸ ಮುಖಗಳ ಅಗತ್ಯವಿರುವಂತೆ ಕಾಣುತ್ತಿದೆ. ರೋಹಿತ್ ಶರ್ಮಾ ಸ್ಥಿರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ 2025ರ ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಭಾರತ ಒಂದು ವೇಳೆ ಪ್ರವೇಶಿಸಿದರೂ ಆ ಹೊತ್ತಿಗೆ ಅವರಿಗೆ 38 ವರ್ಷ ವಯಸ್ಸಾಗಿರಲಿದೆ. ಅಲ್ಲಿಯ ತನಕ ಅವರು ಟೆಸ್ಟ್‌ನಲ್ಲಿ ಮುಂದುವರಿಯಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಎದ್ದಿವೆ. ಇನ್ನು ವಿರಾಟ್ ಕೊಹ್ಲಿ ಜ.1, 2019ರಿಂದ ಈಚೆಗೆ ತವರಿನಾಚೆ ಕೇವಲ 27.41ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರಿಂದ ಒಂದೂ ಶತಕ ಮೂಡಿಬಂದಿಲ್ಲ.
ಚೇತೇಶ್ವರ್ ಪೂಜಾರ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ರಾಶಿ ರಾಶಿ ರನ್ ಹೊಡೆದರೂ, ಅಸಲಿ ಸವಾಲು ಎದುರಾದಾಗ ಅವರ ಮೇಲೆ ಇನ್ನು ನಿರೀಕ್ಷೆ ಇಡಲು ಸಾಧ್ಯವಿಲ್ಲ ಎನ್ನುವುದು ಆಸೀಸ್ ವಿರುದ್ಧದ ಫೈನಲ್‌ನಲ್ಲಿ ಸಾಬೀತಾಗಿದೆ. 2 ವರ್ಷ ತಂಡದಿಂದಲೇ ಹೊರಬಿದ್ದಿದ್ದ ರಹಾನೆ ದಿಢೀರನೆ ಟೆಸ್ಟ್ ತಂಡಕ್ಕೆ ಮರಳಿದ್ದರೂ ದೀರ್ಘ ಕಾಲದ ಪರಿಹಾರವಲ್ಲ ಎನ್ನುವ ಅಭಿಪ್ರಾಯಗಳು ಕ್ರಿಕೆಟ್ ವಲಯದಲ್ಲಿವೆ. ಹೀಗಿರುವಾಗ ಬಿಸಿಸಿಐ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಆಯ್ಕೆ ಸಮಿತಿ ಮುಂದೆ ಹಲವು ಆಯ್ಕೆಗಳಿವೆ.
ಜೈಸ್ವಾಲ್, ಋುತುರಾಜ್ ರೆಡಿ
ವಿಶ್ವಕಪ್ ಫೈನಲ್‌ಗೆ ಮೀಸಲು ಪಡೆಯಲ್ಲಿದ್ದ ಯಶಸ್ವಿ ಜೈಸ್ವಾಲ್, ವೈಯಕ್ತಿಕ ಕಾರಣಕ್ಕೆ ಮೀಸಲು ಪಡೆಯಿಂದ ಹೊರಬಿದ್ದಿದ್ದ ಋುತುರಾಜ್ ಗಾಯಕ್ವಾಡ್ ಮುಂದಿನ ತಿಂಗಳು ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೇ ಆಯ್ಕೆಯಾಗಬಹುದು. ಜೈಸ್ವಾಲ್ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 80.21ರ ಸರಾಸರಿಯಲ್ಲಿ 1845 ರನ್ ಕಲೆಹಾಕಿದ್ದಾರೆ. ಈಗಾಗಲೇ 9 ಶತಕ, 2 ಅರ್ಧಶತಕ ಸಹ ದಾಖಲಿಸಿದ್ದಾರೆ. ಇನ್ನು ಗಾಯಕ್ವಾಡ್ 28 ಪ್ರ.ದರ್ಜೆ ಪಂದ್ಯಗಳಲ್ಲಿ 42.19ರ ಸರಾಸರಿಯಲ್ಲಿ 1941 ರನ್ ಗಳಿಸಿದ್ದು, 6 ಶತಕ, 9 ಅರ್ಧಶತಕ ಬಾರಿಸಿದ್ದಾರೆ. ಅಭಿಮನ್ಯು ಈಶ್ವರನ್ ಈಗಾಗಲೇ ತಂಡದೊಳಕ್ಕೆ ಪ್ರವೇಶಿಸಿದರೂ ಪಾದಾರ್ಪಣೆಯ ಅವಕಾಶ ಸಿಗಲಿಲ್ಲ. ಪ್ರ.ದರ್ಜೆ ಕ್ರಿಕೆಟ್‌ನಲ್ಲಿ ಅವರ ದಾಖಲೆ ಅತ್ಯುತ್ತಮವಾಗಿದೆ. 87 ಪಂದ್ಯಗಳಲ್ಲಿ 6,556 ರನ್ ಕಲೆಹಾಕಿದ್ದು, 22 ಶತಕ, 26 ಅರ್ಧಶತಕ ಬಾರಿಸಿದ್ದಾರೆ. ಕರ್ನಾಟಕದ ಆರ್.ಸಮಥ್‌ರ್ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಮಧ್ಯಮ ಕ್ರಮಾಂಕಕ್ಕೆ ರಿಂಕು ಸಿಂಗ್ ಸೂಕ್ತ ಆಯ್ಕೆ ಎನಿಸಿದ್ದು ಟಿ20ಯಲ್ಲಿ ಮಾತ್ರವಲ್ಲದೇ ಪ್ರ.ದರ್ಜೆ ಕ್ರಿಕೆಟ್‌ನಲ್ಲೂ ಉ.ಪ್ರದೇಶ ಆಟಗಾರ ಉತ್ತಮ ದಾಖಲೆ ಹೊಂದಿದ್ದಾರೆ. 40 ಪಂದ್ಯದಲ್ಲಿ ರಿಂಕು 59.89ರ ಸರಾಸರಿಯಲ್ಲಿ 2875 ರನ್ ಗಳಿಸಿದ್ದು, 7 ಶತಕ, 19 ಅರ್ಧಶತಕ ಸಿಡಿಸಿದ್ದಾರೆ. ಮ.ಪ್ರದೇಶದ ರಜತ್ ಪಾಟೀದಾರ್ ಸಹ ದೇಸಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಮತ್ತೊಬ್ಬ ಬ್ಯಾಟರ್. ಶ್ರೇಯಸ್ ಅಯ್ಯರ್ ಗಾಯದಿಂದ ಚೇತರಿಸಿಕೊಂಡು ವಾಪಸಾದರೆ ಬಲ ತಂಡದ ಬಲ ಹೆಚ್ಚಬಹುದು.
WTC Final ಸೋಲು: ತಂಡಕ್ಕೂ ನಾಚಿಕೆಯಿಲ್ಲ, ನಮಗೂ ನಾಚಿಕೆಯಿಲ್ಲವೆಂದು ರೋಹಿತ ಪಡೆ ಮೇಲೆ ಟೀಕಾ ಪ್ರಹಾರ
ರಿಷಭ್ ಪಂತ್ ತಂಡಕ್ಕೆ ಮರಳುವ ವರೆಗೂ ಹಾಗೂ ಆ ಬಳಿಕವೂ ದ್ವಿತೀಯ ಆಯ್ಕೆಯ ಕೀಪರ್ ಆಗಿ ಉ.ಪ್ರದೇಶದ ಉಪೇಂದ್ರ ಯಾದವ್‌ರನ್ನು ಬಳಸಬಹುದು. ಉತ್ತಮ ಕೀಪಿಂಗ್ ಕೌಶಲ್ಯಗಳ ಜೊತೆ ಬ್ಯಾಟಿಂಗ್ ಸಾಮರ್ಥ್ಯವೂ ಇದೆ.
ತುರ್ತಾಗಿ ಸ್ಪಿನ್ನರ್‌ಗಳೂ ಬೇಕು
36 ವರ್ಷದ ಆರ್.ಅಶ್ವಿನ್ ವಿಶ್ವ ನಂ.1 ಸ್ಪಿನ್ನರ್ ಆಗಿದ್ದರೂ ಅವರು ಹೆಚ್ಚೆಂದರೆ ಒಂದೆರಡು ವರ್ಷ ಆಡಬಹುದು. ರವೀಂದ್ರ ಜಡೇಜಾ ವಿದೇಶಿ ಪಿಚ್‌ಗಳಲ್ಲಿ ಮೊನಚು ಕಳೆದುಕೊಂಡಂತೆ ಕಾಣುತ್ತಿದೆ. ಹೀಗಾಗಿ ಭಾರತ ತಂಡ ತುರ್ತಾಗಿ ಯುವ ಹಾಗೂ ಯಾವುದೇ ವಾತಾವರಣದಲ್ಲಿ ಪರಿಣಾಮಕಾರಿಯಾಗಬಲ್ಲ ಸ್ಪಿನ್ನರ್‌ಗಳನ್ನು ಗುರುತಿಸಿ ಆಯ್ಕೆ ಮಾಡಬೇಕು ಎನ್ನುವ ಸಲಹೆಗಳೂ ತಜ್ಞರಿಂದ ಕೇಳಿಬರುತ್ತಿವೆ. ಸಾಯಿ ಕಿಶೋರ್, ರವಿ ಬಿಷ್ಣೋಯ್ ಸೇರಿ ಕೆಲ ಹೆಸರುಗಳು ಈಗಾಗಲೇ ಚಾಲ್ತಿಯಲ್ಲಿವೆ.
ವೇಗಿಗಳ ಪಡೆ ಇರುವುದರಲ್ಲಿ ಉತ್ತಮ
ಭಾರತದ ವೇಗದ ಬೌಲಿಂಗ್ ಪಡೆ ಇರುವುದರಲ್ಲಿ ಸಮತೋಲನದಿಂದ ಕೂಡಿದೆ. ಮೊಹಮದ್ ಶಮಿ, ಮೊಹಮದ್ ಸಿರಾಜ್ ಜೊತೆಗೆ ಜಸ್‌ಪ್ರೀತ್ ಬುಮ್ರಾ, ಪ್ರಸಿದ್‌್ಧ ಕೃಷ್ಣ ಸೇರಿಕೊಂಡರೆ ಮತ್ತಷ್ಟು ಬಲ ಬಂದಂತಾಗುತ್ತದೆ. ಮುಕೇಶ್ ಕುಮಾರ್, ಅಶ್‌ರ್‍ದೀಪ್, ಉಮ್ರಾನ್ ಮಲಿಕ್, ಕಾರ್ತಿಕ್ ತ್ಯಾಗಿ, ಆವೇಶ್ ಖಾನ್‌ರಂತಹ ಪ್ರತಿಭಾನ್ವಿತರು ಸರತಿ ಸಾಲಿನಲ್ಲಿದ್ದಾರೆ.
2021ರ ಇಂಗ್ಲೆಂಡ್ ಪ್ರವಾಸ ಮುಕ್ತಾಯಗೊಂಡಾಗ ಆಗಿನ ನಾಯಕ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಬದಲಾವಣೆ ತರುವ ಬಗ್ಗೆ ಪದೇಪದೇ ಹೇಳುತ್ತಿದ್ದರು. ಅವರು ನಾಯಕತ್ವ ಕಳೆದುಕೊಂಡು ಹೊಸ ನಾಯಕ ನೇಮಕಗೊಂಡ ಬಳಿಕವೂ ಭಾರತದ ಸ್ಥಿತಿ ಬದಲಾದಂತೆ ಕಾಣುತ್ತಿಲ್ಲ. ಬಿಸಿಸಿಐ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ ಎನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯ.