Asianet Suvarna News Asianet Suvarna News

WTC Final ಸೋಲು: ತಂಡಕ್ಕೂ ನಾಚಿಕೆಯಿಲ್ಲ, ನಮಗೂ ನಾಚಿಕೆಯಿಲ್ಲವೆಂದು ರೋಹಿತ ಪಡೆ ಮೇಲೆ ಟೀಕಾ ಪ್ರಹಾರ

* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಸೀಸ್ ಎದುರು ಟೀಂ ಇಂಡಿಯಾಗೆ ಸೋಲು
* ಒಂದು ತಂಡವಾಗಿ ಆಸ್ಟ್ರೇಲಿಯಾ ಎದುರು ನೀರಸ ಪ್ರದರ್ಶನ ತೋರಿದ ರೋಹಿತ್ ಶರ್ಮಾ ಪಡೆ
* ಟೀಂ ಇಂಡಿಯಾ ಪ್ರದರ್ಶನದ ಮೇಲೆ ಕಿಡಿಕಾರಿದ ಕ್ರಿಕೆಟ್ ಫ್ಯಾನ್ಸ್

Team India choking in another ICC Final triggers massive outrage on social media after WTC Final loss kvn
Author
First Published Jun 12, 2023, 3:13 PM IST

ಲಂಡನ್‌(ಜೂ.12): ಐಸಿಸಿ ಟ್ರೋಫಿ ಗೆಲ್ಲಬೇಕೆನ್ನುವ ದಶಕದ ಟೀಂ ಇಂಡಿಯಾ ಕನಸು ಮತ್ತೊಮ್ಮೆ ಭಗ್ನವಾಗಿದೆ. ಆಸ್ಟ್ರೇಲಿಯಾ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಟೀಂ ಇಂಡಿಯಾ209 ರನ್ ಅಂತರದ ಸೋಲು ಕಾಣುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ. ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿದ್ದ ಟೀಂ ಇಂಡಿಯಾ, ಇದೀಗ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ ಫೈನಲ್‌ನಲ್ಲಿ ಕಾಂಗರೂ ಪಡೆ ಎದುರು ಮುಗ್ಗರಿಸಿದೆ. ಟೀಂ ಇಂಡಿಯಾ ಈ ರೀತಿ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಶರ್ಮಾ ಪಡೆ ಮೇಲೆ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

ಹೌದು, ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗೆಲ್ಲಲು 444 ರನ್‌ಗಳ ಕಠಿಣ ಗುರಿ ಪಡೆದ ಟೀಂ ಇಂಡಿಯಾ, ಗೆಲುವಿನ ಗೆರೆ ದಾಟಲು ವಿಫಲವಾಯಿತು. ಭಾರತ ಪರ ಯಾವೊಬ್ಬ ಬ್ಯಾಟರ್ ಸಹಾ ಎರಡು ಇನಿಂಗ್ಸ್‌ನಲ್ಲೂ ಮೂರಂಕಿ ಮೊತ್ತ ದಾಖಲಿಸಲು ಸಫಲವಾಗಲಿಲ್ಲ. ಇನ್ನು ಎರಡನೇ ಇನಿಂಗ್ಸ್‌ ವಿರಾಟ್ ಕೊಹ್ಲಿ 49 ರನ್ ಬಾರಿಸಿದ್ದೇ, ಭಾರತ ಪರ ದಾಖಲಾದ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು. ಇನ್ನು ಅಜಿಂಕ್ಯ ರಹಾನೆ(46) ಹಾಗೂ ನಾಯಕ ರೋಹಿತ್ ಶರ್ಮಾ(43) ಉತ್ತಮ ಆರಂಭವನ್ನು ಪಡೆದರಾದರೂ, ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಇದು ಪಂದ್ಯದ ಫಲಿತಾಂಶದ ಮೇಲೂ ಪರಿಣಾಮ ಬೀರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು 76 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ 295 ರನ್ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 469 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ಟೀಂ ಇಂಡಿಯಾ 152 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಫಾಲೋ ಆನ್ ಭೀತಿಗೆ ಒಳಗಾಗಿತ್ತು. ಆದರೆ 7ನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಕೊಂಚ ಆಸರೆಯಾದರು. ಅಂತಿಮವಾಗಿ ಟೀಂ ಇಂಡಿಯಾ 296 ರನ್‌ಗಳಿಗೆ ಸರ್ವಪತನ ಕಂಡಿತು.  

WTC Final ಸೋಲಿನ ಬೆನ್ನಲ್ಲೇ ಕಿಡಿಕಾರಿದ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್..!

ಈ ಮೂಲಕ ಆಸ್ಟ್ರೇಲಿಯಾ ತಂಡವು 173 ರನ್‌ಗಳ ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಅಲೆಕ್ಸ್ ಕ್ಯಾರಿ ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 270 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಭಾರತಕ್ಕೆ 444 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಐಸಿಸಿ ಕಪ್ ಗೆಲ್ಲುವ ಆಸೆಯನ್ನು ಕೈಚೆಲ್ಲಿತು.

ಇನ್ನು ಐಸಿಸಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಲು ವಿಫಲವಾದ ಬೆನ್ನಲ್ಲೇ ನೆಟ್ಟಿಗರು ಟೀಂ ಇಂಡಿಯಾದ ಮೇಲೆ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ. ನಾಚಿಕೆಯಿಲ್ಲದ ತಂಡ, ಇಂತಹ ತಂಡದಿಂದ ಐಸಿಸಿ ಟ್ರೋಫಿ ನಿರೀಕ್ಷೆ ಮಾಡುತ್ತಿರುವ ನಮ್ಮಂತ ಅಭಿಮಾನಿಗಳಿಗೆ ಇನ್ನೂ ನಾಚಿಕೆಯಿಲ್ಲ ಎಂದು ನೆಟ್ಟಿಗರೊಬ್ಬರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ಇನ್ನೋರ್ವ ನೆಟ್ಟಿಗ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೀಂ ಇಂಡಿಯಾ ಗೆಲ್ಲಲಿದೆ ಎನ್ನುವ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ, ನೆಮ್ಮದಿಯಿಂದ ಮಲಗಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೋರ್ವ ನೆಟ್ಟಿಗ ಈ ಸೋಲಿಗೆ ಹೊಣೆ ಯಾರು ಪ್ರಶ್ನಿಸಿದ್ದಾರೆ. 

Follow Us:
Download App:
  • android
  • ios