WTC Final: ಆಂಗ್ಲರ ನಾಡಿನಲ್ಲಿ ರಾರಾಜಿಸಿದ ಭಾರತದ ತ್ರಿವರ್ಣ ಧ್ವಜ..!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಚಾಲನೆ
ಇಂಗ್ಲೆಂಡ್‌ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಟ
ಚಾಂಪಿಯನ್ ಪಟ್ಟಕ್ಕಾಗಿ ಭಾರತ-ಅಸ್ಟ್ರೇಲಿಯಾ ಫೈಟ್

WTC Final Splash of tricolour at The Oval as fans gear up for historic Ind vs Aus clash kvn

- ಡಾ. ಕೃಷ್ಣ ಕಿಶೋರ್, ಏಷ್ಯಾನೆಟ್‌ ನ್ಯೂಸ್ ಚೀಫ್ ಕರೆಸ್ಪಾಂಡೆಂಟ್, ನ್ಯೂಯಾರ್ಕ್‌

ಲಂಡನ್‌(ಜೂ.07): ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ಇಲ್ಲಿನ ದಿ ಓವಲ್ ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಚಾಂಪಿಯನ್ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡುತ್ತಿವೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಐತಿಹಾಸಿಕ ಪಂದ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ದಿ ಓವಲ್‌ ಮೈದಾನದತ್ತ ಧಾವಿಸಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವಿಲ್ಲದೇ ಮೊದಲ ಬಾರಿಗೆ ದಿ ಓವಲ್ ಮೈದಾನದಲ್ಲಿ ಈ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ನಾಡಿನಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.

ನೂತನ ಟೆಸ್ಟ್ ಚಾಂಪಿಯನ್‌ ಪಟ್ಟಕ್ಕಾಗಿ ಅಲ್ಟಿಮೇಟ್‌ ಟೆಸ್ಟ್ ಕದನವು ಐತಿಹಾಸಿಕ ದಿ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ತ್ರಿವರ್ಣ ಧ್ವಜ ಹಿಡಿದು ಸಾಗರೋಪಾದಿಯಲ್ಲಿ ದಿ ಓವಲ್ ಮೈದಾನಕ್ಕೆ ಬಂದಿದ್ದು, ಈ ಐತಿಹಾಸಿಕ ಮೈದಾನದಲ್ಲಿ ಭಾರತ ತಂಡವು ಮೂರನೇ ಟೆಸ್ಟ್ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ದಿ ಓವಲ್ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೂ 14 ಟೆಸ್ಟ್ ಪಂದ್ಯಗಳನ್ನಾಡಿ ಕೇವಲ 2 ಗೆಲುವು, 5 ಸೋಲು ಹಾಗೂ 7 ಡ್ರಾ ಸಾಧಿಸಿದೆ. 2021ರಲ್ಲಿ ಇದೇ ಮೈದಾನದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 157 ರನ್‌ಗಳ ಸ್ಮರಣೀಯ ಗೆಲುವು ಸಾಧಿಸಿತ್ತು. 

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರನ್ನೊಳಗೊಂಡ ತಂಡವನ್ನು ಹೊಂದಿದ್ದು, ಪ್ಯಾಟ್ ಕಮಿನ್ಸ್ ನೇತೃತ್ವದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದೆ. ಕಳೆದೆರಡು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅವತರಣಿಕೆಯಲ್ಲಿ ಟೀಂ ಇಂಡಿಯಾ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ಟೀಂ ಇಂಡಿಯಾ ಕಳೆದೊಂದು ದಶಕದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಆದರೆ 2013ರ ಬಳಿಕ ಇದುವರೆಗೂ ಐಸಿಸಿ ಟ್ರೋಫಿ ಗೆಲ್ಲಲು ಭಾರತ ಕ್ರಿಕೆಟ್ ತಂಡಕ್ಕೆ ಸಾಧ್ಯವಾಗಿಲ್ಲ.

WTC Final: ಆರಂಭಿಕ ಆಘಾತದ ಬಳಿಕ ಆಸ್ಟ್ರೇಲಿಯಾ ದಿಟ್ಟ ಆರಂಭ

ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಿತ್ತು. ಇಂಗ್ಲೆಂಡ್‌ನಲ್ಲಿಯೇ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಆತಿಥೇಯ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ನಡೆದ ಐಸಿಸಿ ಟೂರ್ನಿಗಳ ಪೈಕಿ ಟೀಂ ಇಂಡಿಯಾ ಮೂರು ಬಾರಿ ಫೈನಲ್‌ನಲ್ಲಿ ಹಾಗೂ 4 ಬಾರಿ ಸೆಮಿಫೈನಲ್‌ನಲ್ಲಿ ಸೋಲು ಕಾಣುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಇನ್ನು 2021ರಲ್ಲಿ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲಿಯೇ ಹೊರಬಿದ್ದು ನಿರಾಸೆ ಅನುಭವಿಸಿತ್ತು. 

ಪ್ರತಿಷ್ಠಿತ ಟೆಸ್ಟ್ ಚಾಂಪಿಯನ್‌ಶಿಪ್‌ ಗೆಲ್ಲಬಲ್ಲ ಸಾಮರ್ಥ್ಯವನ್ನು ಹೊಂದಿದ ತಂಡವಾಗಿ ಟೀಂ ಇಂಡಿಯಾ ಗುರುತಿಸಿಕೊಂಡಿದೆ. ಈ ಬಾರಿ ಟೀಂ ಇಂಡಿಯಾ, ಟೆಸ್ಟ್‌ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಟೀಂ ಇಂಡಿಯಾ ಮೆಟ್ಟಿ ನಿಲ್ಲಲಿದೆ ಎನ್ನುವ ವಿಶ್ವಾಸವನ್ನು ರಾಹುಲ್ ದ್ರಾವಿಡ್ ವ್ಯಕ್ತಪಡಿಸಿದ್ದಾರೆ. 

ನೀವಿಂದು ನೋಡುತ್ತಿರುವ ಟೀಂ ಇಂಡಿಯಾ ಯಶಸ್ಸಿನ ಹಿಂದೆ ಎರಡು ವರ್ಷಗಳ ಕಠಿಣ ಪರಿಶ್ರಮವಿದೆ. ಕಳೆದೆರಡು ವರ್ಷಗಳಲ್ಲಿ ತೋರಿದ ಪರಿಶ್ರಮದ ಫಲವಾಗಿ ನಾವಿಂದು ಇಲ್ಲಿಗೆ ತಲುಪಿದ್ದೇವೆ ಎಂದು ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೂ ಮುನ್ನ ರಾಹುಲ್ ದ್ರಾವಿಡ್ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios