ಟೆಸ್ಟ್ ಚಾಂಪಿಯನ್ ಪಟ್ಟಕ್ಕೆ ಭಾರತ-ಆಸ್ಟ್ರೇಲಿಯಾ ಫೈಟ್ಮೊದಲ ದಿನದ ಮೊದಲ ಸೆಷನ್‌ನಲ್ಲೇ ಉಭಯ ತಂಡಗಳ ದಿಟ್ಟ ಹೋರಾಟಲಂಚ್ ಬ್ರೇಕ್‌ ವೇಳೆಗೆ 2 ವಿಕೆಟ್ ಕಳೆದುಕೊಂಡು 73 ರನ್ ಬಾರಿಸಿದ ಆಸ್ಟ್ರೇಲಿಯಾ

ಲಂಡನ್‌(ಜೂ.07): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತಾದರೂ, ಆ ಬಳಿಕ ದಿಟ್ಟ ಆರಂಭವನ್ನು ಪಡೆದಿದೆ. ಮೊದಲ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಆಸ್ಟ್ರೇಲಿಯಾ ತಂಡವು ಎರಡು ವಿಕೆಟ್ ಕಳೆದುಕೊಂಡು 73 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲು ಹಾಕುವ ಮುನ್ಸೂಚನೆ ನೀಡಿದೆ.

ಹೌದು, ಇಲ್ಲಿನ ದಿ ಓವಲ್‌ ಮೈದಾನವು ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಎಡಗೈ ಬ್ಯಾಟರ್ ಉಸ್ಮಾನ್ ಖವಾಜ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಎಸೆದ ಇನಿಂಗ್ಸ್‌ನ 4ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಖವಾಜ ಬ್ಯಾಟ್ ಅಂಚು ಸವರಿದ ಚೆಂಡು ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ಕೈ ಸೇರಿತು. ಆಸ್ಟ್ರೇಲಿಯಾ ಕೇವಲ 2 ರನ್ ಗಳಿಸುವಷ್ಟರಲ್ಲೇ ಖವಾಜ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು.

WTC Final: ಶತಮಾನದ ರೈಲ್ವೇ ದುರಂತಕ್ಕೆ ಮಿಡಿದ ಮನ, ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಟೀಂ ಇಂಡಿಯಾ..!

ವಾರ್ನರ್-ಲಬುಶೇನ್ ಆಸರೆ: ಕೇವಲ 2 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಎರಡನೇ ವಿಕೆಟ್‌ಗೆ ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಬುಶೇನ್ ಜೋಡಿ 69 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ನಿಧಾನವಾಗಿ ರನ್‌ ಗಳಿಸುತ್ತಾ ಸಾಗಿದರು. ಕಳೆದ ಕೆಲ ಪಂದ್ಯಗಳಲ್ಲಿ ರನ್ ಬರ ಅನುಭವಿಸುತ್ತಾ ಬಂದಿದ್ದ ಡೇವಿಡ್ ವಾರ್ನರ್ 60 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 43 ರನ್ ಬಾರಿಸಿ, ಶಾರ್ದೂಲ್ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದರು. ಲಂಚ್ ಬ್ರೇಕ್‌ಗೆ ಕೆಲವೇ ನಿಮಿಷಗಳು ಬಾಕಿ ಇದ್ದಾಗ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ವಿಕೆಟ್ ಹೊರಹೋಗುತ್ತಿದ್ದ ಚೆಂಡನ್ನು ಪುಲ್ ಮಾಡುವ ಯತ್ನದಲ್ಲಿ ವಿಕೆಟ್‌ ಕೀಪರ್ ಭರತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Scroll to load tweet…

ಸದ್ಯ ಮಾರ್ನಸ್‌ ಲಬುಶೇನ್ 61 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 26 ರನ್ ಬಾರಿಸಿದ್ದರೆ, ಮತ್ತೊಂದು ತುದಿಯಲ್ಲಿ ಸ್ಟೀವ್ ಸ್ಮಿತ್ 2 ರನ್ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಭಾರತ ಪರ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್‌ಗಳಾಗಿ ಹೊರಹೊಮ್ಮಿದ್ದಾರೆ.

ಅಶ್ವಿನ್‌ಗೆ ನಿರಾಸೆ: ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಭಾರತದ ನಂಬರ್ 1 ಸ್ಪಿನ್ನರ್ ಎನಿಸಿಕೊಂಡಿರುವ ಅಶ್ವಿನ್ ಅವರನ್ನು ಕೈಬಿಡುವುದು ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಪಿಚ್‌ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಓರ್ವ ಸ್ಪಿನ್ನರ್ ಹಾಗೂ ನಾಲ್ವರು ವೇಗಿಗಳೊಂದಿಗೆ ನಾವು ಕಣಕ್ಕಿಳಿಯುತ್ತಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ವೇಳೆ ತಿಳಿಸಿದರು. ಭಾರತ ತಂಡವು ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಹಾಗೂ ಉಮೇಶ್ ಯಾದವ್ ಅವರನ್ನು ವೇಗದ ಬೌಲರ್‌ಗಳ ರೂಪದಲ್ಲಿ ಕಣಕ್ಕಿಳಿಸಿದರೆ, ಸ್ಪಿನ್ ಆಲ್ರೌಂಡರ್ ರೂಪದಲ್ಲಿ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ.