WTC Final: ಶತಮಾನದ ರೈಲ್ವೇ ದುರಂತಕ್ಕೆ ಮಿಡಿದ ಮನ, ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಟೀಂ ಇಂಡಿಯಾ..!
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದಿ ಓವಲ್ ಮೈದಾನದಲ್ಲಿ ಚಾಲನೆ
ತೋಳಿಗೆ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದ ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು
ಬಾಲಸೋರ್ ರೈಲ್ವೇ ದುರಂತಕ್ಕೆ ಮಿಡಿದ ಕ್ರಿಕೆಟ್ ಹೃದಯ
ಲಂಡನ್(ಜೂ.07): ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಆಸ್ಟ್ರೇಲಿಯಾ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ಟೆಸ್ಟ್ ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್ ಜಗತ್ತು ಭಾರತದ ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಶತಮಾನದ ರೈಲ್ವೇ ದುರಂತಕ್ಕೆ ಸಂತಾಪ ಸೂಚಿಸಿದೆ. ಇದರ ಜತೆಗೆ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಸಂತಾಪ ವ್ಯಕ್ತಪಡಿಸಿವೆ.
ಹೌದು, ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಇಲ್ಲಿನ ದಿ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಪ್ರತಿಷ್ಠಿತ ಟೆಸ್ಟ್ ವಿಶ್ವಕಪ್ ಗೆಲ್ಲಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ. ಈ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಬಾಲಸೋರ್ ರೈಲ್ವೇ ದುರಂತದಲ್ಲಿ ಕೊನೆಯುಸಿರೆಳೆದವರಿಗೆ ಸಂತಾಪ ಸೂಚಿಸಲಾಯಿತು. ಇದಷ್ಟೇ ಅಲ್ಲದೇ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರು ತಮ್ಮ ಎಡಗೈ ತೋಳಿಗೆ ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ತಮ್ಮ ಶೋಕಾಚರಣೆಯನ್ನು ವ್ಯಕ್ತಪಡಿಸಿವೆ.
ಒಡಿಶಾದ ಬಾಲಸೋರ್ ಬಳಿ ಕಳೆದ ಶುಕ್ರವಾರ ಸಂಜೆ ಸಂಭವಿಸಿದ ರೈಲು ದುರಂತ ಈ ಶತಮಾನದಲ್ಲೇ ಭೀಕರ ದುರಂತವಾಗಿ ಹೊರಹೊಮ್ಮಿದ್ದು, 288 ಜನರ ಜೀವ ಬಲಿ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಅಪಘಾತ ಬಲು ಅಪರೂಪ ಎನ್ನುವ ಹೊತ್ತಿನಲ್ಲೇ ಬಾಹಾನಗರ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ಮೂರು ರೈಲುಗಳನ್ನು ಒಳಗೊಂಡ ಘೋರ ದುರಂತ ಇಡೀ ದೇಶವನ್ನೇ ಅಘಾತಕ್ಕೆ ಈಡುಮಾಡಿದೆ.
WTC FInal: ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ಯಾರಿಗೆಲ್ಲಾ ಸ್ಥಾನ?
ದುರ್ಘಟನೆಯಲ್ಲಿ ಒಟ್ಟು 1175 ಜನರು ಗಾಯಗೊಂಡಿದ್ದು, ಈ ಪೈಕಿ 793 ಜನರು ಚಿಕಿತ್ಸೆ ಪಡೆದು ಮರಳಿದ್ದರೆ, 382 ಜನರು ಇನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದಲ್ಲಿ ಸಂಭವಿಸಿದ ಸಾವು-ನೋವು ಇದನ್ನು ಭಾರತ ಕಂಡ 3ನೇ ಅತಿದೊಡ್ಡ ಮತ್ತು 21ನೇ ಶತಮಾನದ ಅತ್ಯಂತ ಭೀಕರ ರೈಲು ದುರಂತ ಎಂಬ ಕುಖ್ಯಾತಿಗೆ ಪಾತ್ರ ಮಾಡಿದೆ. ಘಟನೆಗೆ ಜಗತ್ತಿನ ಅನೇಕ ಕಡೆಗಳಿಂದ ಆಘಾತ ವ್ಯಕ್ತವಾಗಿದೆ.
ಭಾರತಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟ ಸಿರಾಜ್..!
ಟೆಸ್ಟ್ ಕ್ರಿಕೆಟ್‌ನ ಎರಡು ಬಲಿಷ್ಠ ತಂಡಗಳ ನಡುವಿನ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಭರ್ಜರಿ ಆರಂಭವನ್ನೇ ಪಡೆದಿದೆ. ಇನಿಂಗ್ಸ್‌ನ 4ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವೇಗಿ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಅವರನ್ನು ಬಲಿ ಪಡೆಯುವ ಮೂಲಕ ಭಾರತಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟಿದ್ದಾರೆ. ಸಿರಾಜ್ ಬೌಲಿಂಗ್‌ನಲ್ಲಿ ಖವಾಜ ಬ್ಯಾಟ್ ಅಂಚು ಸವರಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಕೆ ಎಸ್ ಭರತ್ ಕೈ ಸೇರಿತು. ಆಸ್ಟ್ರೇಲಿಯಾ ತಂಡವು 2 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಖವಾಜ ಶೂನ್ಯ ಸುತ್ತಿ ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಸದ್ಯ ಮೊದಲ 10 ಓವರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 22 ರನ್ ಬಾರಿಸಿದ್ದು, ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಬುಶೇನ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ತಂಡಗಳು ಹೀಗಿವೆ:
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆ ಎಸ್ ಭರತ್(ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಪ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರ್ಯಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರಿ(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್(ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಸ್ಕಾಟ್ ಬೋಲೆಂಡ್.