ಇಂಡೋ-ಆಸೀಸ್ 3ನೇ ಟೆಸ್ಟ್ ಡ್ರಾ ಆದ್ರೆ WTC ಫೈನಲ್ ತಲುಪುತ್ತಾ ಟೀಂ ಇಂಡಿಯಾ? ಇಲ್ಲಿದೆ ಹೊಸ ಲೆಕ್ಕಾಚಾರ
ಭಾರತ-ಆಸ್ಟ್ರೇಲಿಯಾ ನಡುವಿನ ಗಾಬಾ ಟೆಸ್ಟ್ ಮಳೆಯಿಂದಾಗಿ ಡ್ರಾ ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತದ ಹಾದಿ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಡ್ರಾ ಆದರೆ ಉಳಿದ ಪಂದ್ಯಗಳಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡ, ಆಸೀಸ್ ಗೆದ್ದರೆ ಲೆಕ್ಕಾಚಾರವೇ ಉಲ್ಟಾಪಲ್ಟ.
ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೆ ಇಲ್ಲಿನ ಗಾಬಾ ಮೈದಾನ ಆತಿಥ್ಯ ವಹಿಸಿದೆ. ಈಗಾಗಲೇ ಮೊದಲೆರಡು ಪಂದ್ಯಗಳ ಪೈಕಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಇದೀಗ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಲು ಹಾತೊರೆಯುತ್ತಿವೆ. ಹೀಗಿರುವಾಗಲೇ ಮೂರನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗುವ ಭೀತಿ ಎದುರಾಗಿದೆ. ಒಂದು ವೇಳೆ ಗಾಬಾ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಲುಪಲು ಸಾಧ್ಯವಾಗುತ್ತಾ ಎನ್ನುವ ಕುತೂಹಲ ಕೂಡಾ ಜೋರಾಗಿದೆ.
ಹೌದು, ಇಲ್ಲಿನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮೊದಲ ದಿನದಾಟಕ್ಕೆ ಮಳೆರಾಯ ಅಡ್ಡಿಯಾಗಿತ್ತು. ಇನ್ನು ಎರಡನೇ ದಿನದಾಟಕ್ಕೆ ಮಳೆ ಅಡ್ಡಿಯಾಗಿರಲಿಲ್ಲ. ಎರಡನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 7 ವಿಕೆಟ್ ಕಳೆದುಕೊಂಡು 405 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಆದರೆ ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಮುಂದಿನ ಮೂರು ದಿನವೂ ಪಂದ್ಯಕ್ಕೆ ಮಳೆರಾಯ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಹೀಗಾದಲ್ಲಿ ಪಂದ್ಯ ಡ್ರಾ ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನ ಲೆಕ್ಕಾಚಾರ ಮತ್ತಷ್ಟು ಚುರುಕಾಗಲಿದೆ.
ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಯುವರಾಜ್ ಸಿಂಗ್‌ಗೆ ಬಿಸಿಸಿಐನಿಂದ ಸಿಗುವ ತಿಂಗಳ ಪೆನ್ಷನ್ ಎಷ್ಟು?
ಗಾಬಾ ಟೆಸ್ಟ್ ಡ್ರಾ ಆದರೆ ಟೆಸ್ಟ್ ವಿಶ್ವಕಪ್ ಫೈನಲ್ ಯಾರಿಗೆ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಗಾಬಾ ಟೆಸ್ಟ್ ಪಂದ್ಯವು ಮಳೆಯ ಭೀತಿಯ ನಡುವೆಯೇ ಸಾಗುತ್ತಿದೆ. ಈ ಟೆಸ್ಟ್ ಪಂದ್ಯದ ಕೊನೆಯ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಒಂದು ವೇಳೆ ಮೂರನೇ ಟೆಸ್ಟ್ ಪಂದ್ಯವು ಡ್ರಾ ಆದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾದಿ ಟೀಂ ಇಂಡಿಯಾ ಪಾಲಿಗೆ ಮತ್ತಷ್ಟು ದುರ್ಗಮಗೊಳಿಸಲಿದೆ. ಯಾಕೆಂದರೆ ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಒಂದು ವೇಳೆ ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿ, ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಅನಾಯಾಸವಾಗಿ ಫೈನಲ್ ಪ್ರವೇಶಿಸಲಿದೆ. ಮೂರನೇ ಆವೃತ್ತಿಯ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ದಕ್ಷಿಣ ಆಫ್ರಿಕಾ ಜತೆ ಕಾದಾಡಲಿದೆ.
ಒಂದು ವೇಳೆ ಭಾರತ ತಂಡವು ಈ ಪಂದ್ಯ ಡ್ರಾ ಆಗಿ, ಇನ್ನುಳಿದ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಹಾಗೂ ಒಂದು ಸೋಲು ಅನುಭವಿಸಿ 2-1 ಅಂತರದಲ್ಲಿ ಸರಣಿ ಜಯಿಸಿದರೂ, ಟೆಸ್ಟ್ ವಿಶ್ವಕಪ್ ಫೈನಲ್ ಟಿಕೆಟ್ ಸಿಗಲಿದೆ. ಆದರೆ ಕೊಂಚ ಅದೃಷ್ಟ ಕೈಹಿಡಿಯಬೇಕಷ್ಟೇ. ಒಂದು ವೇಳೆ ಭಾರತ ತಂಡವು 2-1 ಅಂತರದಲ್ಲಿ ಸರಣಿ ಜಯಿಸಿದರೆ, ಇದಾದ ಬಳಿಕ ಶ್ರೀಲಂಕಾ ತಂಡವು ತವರಿನಲ್ಲಿ ಆಸೀಸ್ ಎದುರು ಉತ್ತಮ ಪ್ರದರ್ಶನ ತೋರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ಆಸೀಸ್ ತಂಡವು ಲಂಕಾ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಪೈಕಿ ಲಂಕಾ ಒಂದು ಟೆಸ್ಟ್ ಪಂದ್ಯವನ್ನು ಜಯಿಸಿದರೆ, ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ ಸುಗಮವಾಗಲಿದೆ.
ಗಾಬಾದಲ್ಲಿ ಭಾರತಕ್ಕೆ ಬೌನ್ಸರ್ ಟೆಸ್ಟ್: ಟೀಂ ಇಂಡಿಯಾಗೆ ಈ ಬಾರಿ ಮತ್ತೊಮ್ಮೆ ಕಠಿಣ ಸವಾಲು!
ಒಂದು ವೇಳೆ ಆಸೀಸ್ ಗೆದ್ದರೇ ಲೆಕ್ಕಾಚಾರವೇ ಉಲ್ಟಾಪಲ್ಟ:
ಒಂದು ವೇಳೆ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿ ಇನ್ನುಳಿದ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಆಸೀಸ್ ಪಂದ್ಯವನ್ನು ಜಯಿಸಿದರೆ, ಟೆಸ್ಟ್ ವಿಶ್ವಕಪ್ ಫೈನಲ್ ಲೆಕ್ಕಾಚಾರವೇ ತಲೆಕೆಳಗಾಗಲಿದೆ. ಹೀಗಿದ್ದೂ ಭಾರತ ಟೆಸ್ಟ್ ವಿಶ್ವಕಪ್ ಫೈನಲ್‌ಗೇರಬೇಕಿದ್ದರೇ ನೆರೆಯ ಪಾಕಿಸ್ತಾನ ಸಾಥ್ ನೀಡಬೇಕಿದೆ. ಪಾಕಿಸ್ತಾನ ತಂಡವು ಹರಿಣಗಳ ನಾಡಿನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಜಯಿಸಬೇಕು. ಇದರ ಜೆತೆಗೆ ನೆರೆಯ ಶ್ರೀಲಂಕಾ ತಂಡ ಕೂಡಾ ತವರಿನಲ್ಲಿ ಆಸೀಸ್ ಎದುರು 2-0 ಅಂತರದಲ್ಲಿ ಜಯಿಸಬೇಕು.