* ಧೋನಿ ದಾಖಲೆ ಮುರಿದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ವ್ಯಾಟ್ಲಿಂಗ್* ಬಿ.ಜೆ. ವ್ಯಾಟ್ಲಿಂಗ್‌ ನ್ಯೂಜಿಲೆಂಡ್ ಪರ ದಶಕಗಳ ಕಾಲ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದರು.* ವಿಕೆಟ್ ಕೀಪರ್ ಆಗಿ ಅತಿಹೆಚ್ಚು ಕ್ಯಾಚ್ ಪಡೆದವರ ಪಟ್ಟಿಯಲ್ಲಿ ವ್ಯಾಟ್ಲಿಂಗ್, ಧೋನಿಯನ್ನು ಹಿಂದಿಕ್ಕಿದ್ದಾರೆ.

ಸೌಥಾಂಪ್ಟನ್(ಜೂ.24): ನ್ಯೂಜಿಲೆಂಡ್ ವಿಕೆಟ್‌ ಕೀಪರ್‌ ಬಿ.ಜೆ. ವ್ಯಾಟ್ಲಿಂಗ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಪಂದ್ಯದಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಕಿವೀಸ್‌ ವಿಕೆಟ್ ಕೀಪರ್ ಯಶಸ್ವಿಯಾಗಿದ್ದಾರೆ.

ಹೌದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಆಗಿ 166 ಇನಿಂಗ್ಸ್‌ಗಳನ್ನಾಡಿ 256 ಕ್ಯಾಚ್‌ಗಳನ್ನು ಪಡೆದಿದ್ದರು. ಇದೀಗ ಭಾರತ ವಿರುದ್ದದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಕಿವೀಸ್ ವಿಕೆಟ್‌ ಕೀಪರ್ ವ್ಯಾಟ್ಲಿಂಗ್ ಆ ದಾಖಲೆಯನ್ನು ಅಳಿಸಿಹಾಕಿದ್ದಾರೆ. ವೃತ್ತಿಜೀವನದ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿದ ವ್ಯಾಟ್ಲಿಂಗ್ ತಮ್ಮ 127ನೇ ಇನಿಂಗ್ಸ್‌ನಲ್ಲಿ 257 ಕ್ಯಾಚ್‌ ಪಡೆಯುವ ಮೂಲಕ ಅತಿಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಧೋನಿಯನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿದ್ದಾರೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಬಳಿಕ ಬಿ ಜೆ ವ್ಯಾಟ್ಲಿಂಗ್‌ ಕ್ರಿಕೆಟ್‌ಗೆ ಗುಡ್‌ಬೈ

Scroll to load tweet…

ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್ ಎನ್ನುವ ದಾಖಲೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮಾರ್ಕ್ ಬೌಷರ್ ಹೆಸರಿನಲ್ಲಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಾರ್ಕ್‌ ಬೌಷರ್ 281 ಇನಿಂಗ್ಸ್‌ಗಳನ್ನಾಡಿ 532 ಕ್ಯಾಚ್‌ಗಳನ್ನು ಪಡೆದಿದ್ದಾರೆ. 

ಈ ಮೊದಲೇ ಅವರು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಆದ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು. ದಿನದಾಟ ಆರಂಭಗೊಳ್ಳುವ ವೇಳೆ ಭಾರತದ ನಾಯಕ ವಿರಾಟ್‌ ಕೊಹ್ಲಿ, ವ್ಯಾಟ್ಲಿಂಗ್‌ಗೆ ಅಭಿನಂದಿಸಿ ಗಮನ ಸೆಳೆದರು. ವ್ಯಾಟ್ಲಿಂಗ್‌ ನ್ಯೂಜಿಲೆಂಡ್‌ ಪರ 75 ಟೆಸ್ಟ್‌, 28 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಬೆರಳು ಮುರಿದರೂ ವ್ಯಾಟ್ಲಿಂಗ್‌ ಕೀಪಿಂಗ್‌!

ಅಂತಿಮ ದಿನದಾಟದ ವೇಳೆ ವ್ಯಾಟ್ಲಿಂಗ್‌ರ ಬಲಗೈ ಉಂಗುರದ ಬೆರಳು ಮುರಿದರೂ ವಿಕೆಟ್‌ ಕೀಪಿಂಗ್‌ ಮಾಡಿದರು. 2ನೇ ಇನ್ನಿಂಗ್ಸ್‌ನಲ್ಲಿ 3 ಕ್ಯಾಚ್‌ ಹಿಡಿದು ಗಮನ ಸೆಳೆದರು. ವ್ಯಾಟ್ಲಿಂಗ್‌ ಬದ್ಧತೆಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.