WTC Final: ಎರಡನೇ ದಿನ ಆಸೀಸ್ ಎದುರು ಟೀಂ ಇಂಡಿಯಾ ಭರ್ಜರಿ ಕಮ್‌ಬ್ಯಾಕ್..!
ಎರಡನೇ ದಿನ ಕಾಂಗರೂ ಪಡೆಗೆ ತಿರುಗೇಟು ನೀಡಿದ ಟೀಂ ಇಂಡಿಯಾ
ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ 4 ವಿಕೆಟ್ ಪಡೆದ ರೋಹಿತ್ ಪಡೆ
ಊಟದ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡು 422 ರನ್ ಗಳಿಸಿರುವ ಆಸೀಸ್
ಲಂಡನ್(ಜೂ.08): ಮಾಜಿ ನಾಯಕ ಸ್ಟೀವ್ ಸ್ಮಿತ್ ಬಾರಿಸಿದ ಆಕರ್ಷಕ ಶತಕದ ಹೊರತಾಗಿಯೂ ಟೀಂ ಇಂಡಿಯಾ ಬೌಲರ್‌ಗಳು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಎರಡನೇ ದಿನ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಿದ್ದಾರೆ. ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಆಸ್ಟ್ರೇಲಿಯಾ ತಂಡವು 4 ವಿಕೆಟ್ ಕಳೆದುಕೊಂಡು 97 ರನ್ ಗಳಿಸಲಷ್ಟೇ ಶಕ್ತವಾಗಿದೆ. ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯದ ಎರಡನೆ ದಿನದಾಟದ ಊಟದ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡವು 7 ವಿಕೆಟ್ ಕಳೆದುಕೊಂಡು 422 ರನ್ ಬಾರಿಸಿದೆ.
ಹೌದು, ಇಲ್ಲಿನ ದಿ ಓವಲ್ ಮೈದಾನದಲ್ಲಿ 3 ವಿಕೆಟ್ ಕಳೆದುಕೊಂಡು 327 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಎರಡನೇ ದಿನದಾಟದಲ್ಲಿ ಸ್ಟೀವ್ ಸ್ಮಿತ್ ತಾವೆದುರಿಸಿದ ಮೊದಲೆರಡು ಎಸೆತಗಳಲ್ಲೇ ಬೌಂಡರಿ ಬಾರಿಸುವ ಮೂಲಕ ಇಂಗ್ಲೆಂಡ್ ನೆಲದಲ್ಲಿ 7ನೇ ಟೆಸ್ಟ್ ಶತಕ ಬಾರಿಸುವಲ್ಲಿ ಯಶಸ್ವಿಯಾದರು. ಸ್ಮಿತ್ 154 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವುದರ ಮೂಲಕ ಟೆಸ್ಟ್ ವೃತ್ತಿಜೀವನದಲ್ಲಿ 31ನೇ ಶತಕ ಸಿಡಿಸಿ ಸಂಭ್ರಮಿಸಿದರು. ಈ ಶತಕದೊಂದಿಗೆ ಭಾರತ ಎದುರು ಅತಿಹೆಚ್ಚು ಟೆಸ್ಟ್ ಶತಕ(9) ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಜೋ ರೂಟ್ ಜತೆಗೂಡಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ
WTC Final: ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಅಶ್ವಿನ್‌ಗಿಲ್ಲ ಸ್ಥಾನ, ಇದ್ಯಾವ ನ್ಯಾಯವೆಂದ ನೆಟ್ಟಿಗರು..!
ಟ್ರಾವಿಡ್ ಹೆಡ್ ಬಲಿ ಪಡೆದ ಸಿರಾಜ್: ಒಂದು ಕಡೆ ಸ್ಮಿತ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರೆ, ಮತ್ತೊಂದು ತುದಿಯಲ್ಲಿ ಟ್ರಾವಿಸ್ ಹೆಡ್ ಅನಯಾಸವಾಗಿ ರನ್ ಗಳಿಸುವ ದ್ವಿಶತಕದತ್ತ ದಾಪುಗಾಲಿಡುತ್ತಿದ್ದರು. ನಾಲ್ಕನೇ ವಿಕೆಟ್‌ಗೆ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ 285 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡಿದರು. ಟ್ರಾವಿಸ್ ಹೆಡ್ 174 ಎಸೆತಗಳನ್ನು ಎದುರಿಸಿ 25 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 163 ರನ್ ಬಾರಿಸಿ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಆಸೀಸ್ ದಿಢೀರ್ ಕುಸಿತ: ಟ್ರಾವಿಸ್ ಹೆಡ್ ವಿಕೆಟ್ ಪತನವಾಗುತ್ತಿದ್ದಂತೆಯೇ ಟೀಂ ಇಂಡಿಯಾ ಬೌಲರ್‌ಗಳು ಮತ್ತಷ್ಟು ಹುರುಪಿನಿಂದ ದಾಳಿ ನಡೆಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಕೇವಲ 41 ರನ್ ನೀಡಿ ಮೊದಲ ಸೆಷನ್‌ನಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದರು. ಕ್ಯಾಮರೋನ್ ಗ್ರೀನ್ 6 ರನ್ ಬಾರಿಸಿ ಶಮಿಗೆ ವಿಕೆಟ್ ಒಪ್ಪಿಸಿದರೆ, ಶಾರ್ದೂಲ್ ಠಾಕೂರ್, ಶತಕ ವೀರ ಸ್ಟೀವ್ ಸ್ಮಿತ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಶಾಕ್ ನೀಡಿದರು. ಸ್ಮಿತ್ 268 ಎಸೆತಗಳನ್ನು ಎದುರಿಸಿ 19 ಬೌಂಡರಿ ಸಹಿತ 121 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಮಿಚೆಲ್ ಸ್ಟಾರ್ಕ್ 5 ರನ್ ಬಾರಿಸಿ ರನೌಟ್ ಆದರು.
ಭಾರತ ಪರ ವೇಗಿಗಳಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಉಮೇಶ್ ಯಾದವ್ ಶಿಸ್ತುಬದ್ದ ದಾಳಿ ನಡೆಸಿದರಾದರೂ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ತಂಡದಲ್ಲಿರುವ ಏಕೈಕ ಸ್ಪಿನ್ನರ್ ರವೀಂದ್ರ ಜಡೇಜಾ, ಮೊದಲ ಸೆಷನ್‌ನಲ್ಲಿ ಬೌಲಿಂಗ್ ಮಾಡಲಿಳಿಯಲಿಲ್ಲ.