WTC Final: ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಅಶ್ವಿನ್‌ಗಿಲ್ಲ ಸ್ಥಾನ, ಇದ್ಯಾವ ನ್ಯಾಯವೆಂದ ನೆಟ್ಟಿಗರು..!
ಲಂಡನ್‌ನ ದಿ ಓವಲ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್
ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗಿಲ್ಲ ಸ್ಥಾನ
ರವಿ ಅಶ್ವಿನ, ವಿಶ್ವ ಟೆಸ್ಟ್ ನಂ.1 ಶ್ರೇಯಾಂಕಿತ ಬೌಲರ್
ಲಂಡನ್(ಜೂ.08): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಭಾರತದ ಆಡುವ ಹನ್ನೊಂದರಲ್ಲಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ನಂ.1 ಬೌಲರ್ ಆಗಿರುವ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, ರೋಹಿತ್ ಶರ್ಮಾ ಪಡೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
ಹೌದು, ಭಾರತ ಕ್ರಿಕೆಟ್ ತಂಡವು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಲು ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. 2021-23ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 61 ವಿಕೆಟ್ ಕಬಳಿಸುವ ಮೂಲಕ ಈ ಅವಧಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಹೀಗಿದ್ದೂ ಅಶ್ವಿನ್‌ಗೆ ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ನಂ.1 ಬೌಲರ್ ಎನಿಸಿಕೊಂಡಿರುವ ಅಶ್ವಿನ್ ಅವರಿಗೆ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡದ್ದಕ್ಕೆ ಸುನಿಲ್ ಗವಾಸ್ಕರ್ ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದರು.
ಟಾಸ್ ವೇಳೆ ಅಶ್ವಿನ್ ಅವರನ್ನು ಕೈಬಿಟ್ಟ ನಿರ್ಧಾರದ ಕುರಿತಂತೆ ಮಾತನಾಡಿದ ರೋಹಿತ್ ಶರ್ಮಾ, "ಅಶ್ವಿನ್ ಅವರನ್ನು ತಂಡದಿಂದ ಕೈಬಿಡುವುದು ಯಾವಾಗಲೂ ಕಠಿಣವಾದ ನಿರ್ಧಾರವೇ ಸರಿ. ಕಳೆದ ಹಲವಾರು ವರ್ಷಗಳಿಂದ ಅವರು ನಮ್ಮ ತಂಡದ ಮ್ಯಾಚ್ ವಿನ್ನರ್. ಆದರೆ ತಂಡದ ಸಂಯೋಜನೆ ಹಾಗೂ ದಿ ಓವಲ್ ಮೈದಾನದ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.
WTC Final: ನಂ.1 ಟೆಸ್ಟ್ ಶ್ರೇಯಾಂಕಿತ ಬೌಲರ್ ಅಶ್ವಿನ್ ಕೈಬಿಟ್ಟಿದ್ದಕ್ಕೆ ಅಸಮಾಧಾನ ಹೊರಹಾಕಿದ ಸನ್ನಿ..!
ಐಪಿಎಲ್ ವೇಳೆಯೇ ಟೆಸ್ಟ್ ಫೈನಲ್‌ಗೆ ಅಶ್ವಿನ್ ಸಿದ್ಧತೆ !
ಟೆಸ್ಟ್ ವಿಶ್ವಕಪ್ ಆಡಲು ರವಿಚಂದ್ರನ್ ಅಶ್ವಿನ್ ಮಾತ್ರ ಕಳೆದೊಂದು ತಿಂಗಳಿಂದ ವಿಶೇಷ ಸಿದ್ಧತೆ ನಡೆಸಿದ್ದರು. ಐಪಿಎಲ್ ವೇಳೆಯೇ ಅಂದರೆ ಮೇ 2ನೇ ವಾರದಿಂದಲೇ ತಮ್ಮ ಜೈವಿಕ ಗಡಿಯಾರವನ್ನು ಲಂಡನ್‌ನ ಸಮಯಕ್ಕೆ ಅನುಸಾರವಾಗಿ ಸಿದ್ಧಪಡಿಸಿಕೊಂಡಿದ್ದರು. ರಾಜಸ್ಥಾನದ ಪಂದ್ಯಗಳು ಇಲ್ಲದ ದಿನಗಳಂದು ಲಂಡನ್‌ನ ಸ್ಥಳೀಯ ಸಮಯಕ್ಕೆ ತಕ್ಕಂತೆ ಮಗಲುವುದು, ಏಳುವುದು ಮಾಡುತ್ತಿದ್ದರಂತೆ. ಜೊತೆಗೆ ತಮ್ಮ ಆಪ್ತ ಡೇಟಾ ವಿಶ್ಲೇಷಕರಿಂದ, ದಿ ಓವಲ್ ಪಿಚ್‌ನಲ್ಲಿ ಸಾಮಾನ್ಯವಾಗಿ ಚೆಂಡು ಎಷ್ಟು ತಿರುವು ಪಡೆಯುತ್ತದೆ. ಪಂದ್ಯದ ಮೊದಲನೇ ದಿನದಿಂದ ಕೊನೆಯ ದಿನದ ವರೆಗೂ ಯಾವ್ಯಾವ ದಿನ ಚೆಂಡು ಎಷ್ಟೆಷ್ಟು ಸ್ಪಿನ್ ಆಗುತ್ತದೆ ಎನ್ನುವುದರ ಮಾಹಿತಿಯನ್ನು ಪಡೆದುಕೊಂಡಿದ್ದರ. ಹೀಗಿದ್ದೂ, ಅಶ್ವಿನ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
ಮಹತ್ವದ ಟೆಸ್ಟ್ ವಿಶ್ವಕಪ್ ಫೈನಲ್‌ಗೆ ನಂ.1 ಟೆಸ್ಟ್ ಬೌಲರ್ ಅಶ್ವಿನ್ ಅವರನ್ನು ಕೈಬಿಟ್ಟಿದ್ದಕ್ಕೆ ಕ್ರಿಕೆಟ್ ದಿಗ್ಗಜರೂ ಸೇರಿದಂತೆ ಹಲವು ನೆಟ್ಟಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಿಚ್ ವಾತಾವರಣ ಬ್ಯಾಟರ್‌ಗಳಿಗೆ ಸೂಕ್ತವಾಗಿಲ್ಲವೆಂದು ನಂ.1 ಬ್ಯಾಟರ್‌ನನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡುತ್ತೀರಾ ಎಂದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಅನ್ನು ಪ್ರಶ್ನಿಸಿದ್ದಾರೆ.
ಮೊದಲ ದಿನ ಆಸ್ಟ್ರೇಲಿಯಾ ಮೇಲುಗೈ:
ಬುಧವಾರ ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೊದಲ ಅವಧಿಯಲ್ಲಿ ಎದುರಾಳಿಯ ಮೇಲೆ ಹಿಡಿತ ಸಾಧಿಸಿದರೂ, 4ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಸ್ಮಿತ್ ಹಾಗೂ ಹೆಡ್, ಅಜೇಯ 251 ರನ್ ಜೊತೆಯಾಟವಾಡಿ ಭಾರತೀಯರ ಬೆವರಿಳಿಸಿದರು. ಮೊದಲ ದಿನದಂತ್ಯಕ್ಕೆ ಆಸೀಸ್ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.