Asianet Suvarna News Asianet Suvarna News

WTC Final: ಕುಸಿದ ಭಾರತಕ್ಕೆ ರಹಾನೆ-ಶಾರ್ದೂಲ್ ಆಸರೆ

ಟೆಸ್ಟ್ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡುವತ್ತ ಭಾರತ
ಆಕರ್ಷಕ ಅರ್ಧಶತಕ ಸಿಡಿಸಿದ ಅಜಿಂಕ್ಯ ರಹಾನೆ
ಅಜಿಂಕ್ಯ ರಹಾನೆ-ಶಾರ್ದೂಲ್ ಠಾಕೂರ್ ಶತಕದ ಜತೆಯಾಟ

WTC Final Ajinkya Rahane Shardul Thakur Solid Partnership India 260 for 6 At Lunch on Day 3 kvn
Author
First Published Jun 9, 2023, 5:12 PM IST

ಲಂಡನ್‌(ಜೂ.09): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ತಿರುಗೇಟು ನೀಡುವತ್ತ ಟೀಂ ಇಂಡಿಯಾ ದಿಟ್ಟ ಹೆಜ್ಜೆಯಿಟ್ಟಿದೆ. ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್ 7ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಮೂರನೇ ದಿನದಾಟದ ಲಂಚ್‌ ಬ್ರೇಕ್ ವೇಳೆಗೆ 6 ವಿಕೆಟ್ ಕಳೆದುಕೊಂಡು 260 ರನ್ ಬಾರಿಸಿದ್ದು, ಇನ್ನು ಕೇವಲ 209 ರನ್‌ಗಳ ಹಿನ್ನಡೆಯಲ್ಲಿದೆ.

ಹೌದು, ಇಲ್ಲಿನ ದಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎರಡನೇ ದಿನದಾಟದಂತ್ಯಕ್ಕೆ 151 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದ ಆರಂಭದಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ವಿಕೆಟ್‌ ಕಳೆದುಕೊಂಡಿತು. ಮೂರನೇ ದಿನದಾಟದ ಮೊದಲ ಓವರ್‌ನಲ್ಲೇ ಸ್ಕಾಟ್ ಬೋಲೆಂಡ್ ಬೌಲಿಂಗ್‌ನಲ್ಲಿ ಭರತ್(5) ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ರಹಾನೆ-ಶಾರ್ದೂಲ್ ಜುಗಲ್ಬಂದಿ: ಆರಂಭದಲ್ಲೇ ಭರತ್ ವಿಕೆಟ್ ಕಳೆದುಕೊಂಡು ಫಾಲೋ ಆನ್ ಭೀತಿಯಲ್ಲಿದ್ದ ಟೀಂ ಇಂಡಿಯಾಗೆ 7ನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಹಾಗೂ ಶಾರ್ದೂಲ್ ಠಾಕೂರ್  ಮುರಿಯದ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬರೋಬ್ಬರಿ 512 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಅಜಿಂಕ್ಯ ರಹಾನೆ, ಒತ್ತಡದ ಪರಿಸ್ಥಿತಿಯನ್ನು ಮೆಟ್ಟಿನಿಂತು ಆಕರ್ಷಕ ಅರ್ಧಶತಕ ಬಾರಿಸಿ ಇದೀಗ ಶತಕದತ್ತ ಮುನ್ನುಗ್ಗುತ್ತಿದ್ದಾರೆ. 7ನೇ ವಿಕೆಟ್‌ಗೆ ಶಾರ್ದೂಲ್ ಠಾಕೂರ್ ಹಾಗೂ ಅಜಿಂಕ್ಯ ರಹಾನೆ ಜೋಡಿ 133 ಎಸೆತಗಳನ್ನು ಎದುರಿಸಿ ಮುರಿಯದ 108 ರನ್ ಜತೆಯಾಟವಾಡಿದೆ. ಅಜಿಂಕ್ಯ ರಹಾನೆ 122 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 89 ರನ್ ಬಾರಿಸಿದರೆ, ಶಾರ್ದೂಲ್ ಠಾಕೂರ್ 83 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 36 ರನ್ ಗಳಿಸಿ ರಹಾನೆಗೆ ಉತ್ತಮ ಸಾಥ್ ನೀಡಿದ್ದಾರೆ.

WTC Final: ಟ್ರೋಲ್‌ ಮಾಡುವವರ ಬಾಯಿ ಮುಚ್ಚಿಸಿದ ವಿರಾಟ್‌ ಕೊಹ್ಲಿ..!

ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಪರ ನಾಯಕ ಫ್ಯಾಟ್ ಕಮಿನ್ಸ್‌, ಮಿಚೆಲ್ ಸ್ಟಾರ್ಕ್‌, ಕ್ಯಾಮರೋನ್ ಗ್ರೀನ್ ಹಾಗೂ ಅನುಭವಿ ಆಫ್‌ಸ್ಪಿನ್ನರ್ ನೇಥನ್ ಲಯನ್ ಭಾರತದ ಬ್ಯಾಟರ್‌ಗಳ ವಿಕೆಟ್‌ ಕಬಳಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ.

Follow Us:
Download App:
  • android
  • ios