* ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿ* ಟ್ರೋಲ್ ಮಾಡಿದ ಫ್ಯಾನ್ಸ್ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ* ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್ ವಿಶ್ವಕಪ್

ನವದೆಹಲಿ(ಜೂ.09): ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಟೆಸ್ಟ್‌ ವಿಶ್ವಕಪ್ ಫೈನಲ್‌ ಪಂದ್ಯದ ಎರಡನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ 31 ಎಸೆತಗಳನ್ನು ಎದುರಿಸಿ ಕೇವಲ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರ ಜತೆ ಊಟ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನೆಟ್ಟಿಗರು ವಿರಾಟ್ ಕೊಹ್ಲಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದರು. ಇದೀಗ ವಿರಾಟ್‌ ಕೊಹ್ಲಿ ಒಂದು ಗೂಢಾರ್ಥದ ಪೋಸ್ಟ್ ಮಾಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಆಸ್ಟ್ರೇಲಿಯಾ ತಂಡವನ್ನು 469 ರನ್‌ಗಳಿಗೆ ಆಲೌಟ್‌ ಮಾಡಿ ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, 30 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟರ್‌ಗಳಾದ ಶುಭ್‌ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಇಬ್ಬರು ಪೆವಿಲಿಯನ್ ಸೇರಿದ್ದರು. ಹೀಗಾಗಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ಆದರೆ ಈ ಇಬ್ಬರು ಬ್ಯಾಟರ್‌ಗಳು 14 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಸ್ಟೀವ್‌ ಸ್ಮಿತ್‌ಗೆ ಕ್ಯಾಚಿತ್ತು ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದರು. 

ಇದಾದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ವಿರಾಟ್ ಕೊಹ್ಲಿ ಊಟ ಮಾಡುತ್ತಿರುವ ದೃಶ್ಯಾವಳಿಗಳು ಕಂಡು ಬಂದಿದ್ದವು. ಹಲವು ನೆಟ್ಟಿಗರು ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ್ದರು. ಈ ಪೈಕಿ ಓರ್ವ ನೆಟ್ಟಿಗ, 2003ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಬೇಗ ಔಟಾಗಿದ್ದಕ್ಕಾಗಿ ಸಚಿನ್ ತೆಂಡುಲ್ಕರ್ ಮೂರು ದಿನ ಊಟವನ್ನೇ ಮಾಡಿರಲಿಲ್ಲ. ಆದರೆ ಕೊಹ್ಲಿ ಏನು ಮಾಡುತ್ತಿದ್ದಾರೆ ನೋಡಿ ಎಂದು ಫೋಟೋ ಪೋಸ್ಟ್‌ ಮಾಡಿದ್ದರು. 

Scroll to load tweet…

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಮೂರನೇ ದಿನದಾಟ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ, ಗೂಢಾರ್ಥದ ಟ್ವೀಟ್ ಮಾಡಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. "ಇತರ ಜನರ ಅಭಿಪ್ರಾಯಗಳ ಸೆರೆಮನೆಯಿಂದ ನಿಮ್ಮನ್ನು ಮುಕ್ತಗೊಳಿಸಲು ನೀವು ಇಷ್ಟಪಡದಿರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು" ಎನ್ನುವ ಪೋಸ್ಟ್ ಹಂಚಿಕೊಂಡಿದ್ದಾರೆ.