WPL ಟೂರ್ನಿಗಾಗಿ ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿತ್ತು: ಸ್ಮೃತಿ ಮಂಧನಾ
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ಅಧಿಕೃತ ಚಾಲನೆ
ಇಡೀ ಕ್ರಿಕೆಟ್ ಜಗತ್ತಿಗೆ WPL ಟೂರ್ನಿ ಬಗ್ಗೆ ಕುತೂಹಲವಿತ್ತು
ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಬಹಳ ಅನುಕೂಲವಾಗಲಿದೆ
- ನಾಸಿರ್ ಸಜಿಪ, ಕನ್ನಡಪ್ರಭ
ಮುಂಬೈ(ಮಾ.05): ಮಹಿಳಾ ಐಪಿಎಲ್ ಆರಂಭಕ್ಕೆ ಭಾರತೀಯರು ಮಾತ್ರವಲ್ಲ, ವಿದೇಶಿಗರೂ ಕಾಯುತ್ತಿದ್ದರು. ಇಡೀ ಕ್ರಿಕೆಟ್ ಜಗತ್ತಿಗೆ ಟೂರ್ನಿ ಬಗ್ಗೆ ಕುತೂಹಲವಿತ್ತು. ಹಲವು ಬಾರಿ ವಿದೇಶಿ ಆಟಗಾರ್ತಿಯರು ನಮ್ಮ ಬಳಿಕ ಮಹಿಳಾ ಐಪಿಎಲ್ ಆರಂಭದ ಬಗ್ಗೆ ಕೇಳಿದ ಉದಾಹರಣೆಯೂ ಇದೆ. ಇದೀಗ ಟೂರ್ನಿಗೆ ಚಾಲನೆ ದೊರೆತಿದ್ದು, ಭಾರತದಲ್ಲಿ ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಬಹಳ ಅನುಕೂಲವಾಗಲಿದೆ ಎಂದು ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧನಾ ಖುಷಿ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಆರ್‌ಸಿಬಿ ತಂಡದ ಮುಖ್ಯಸ್ಥ ಪ್ರಥಮೇಶ್ ಮಿಶ್ರಾ ಜೊತೆ ಸಂವಾದ ನಡೆಸಿ, ಮಾಧ್ಯಮಗಳ ಪ್ರಶ್ನೆಗಳಿಗೂ ಉತ್ತರಿಸಿದ ಸ್ಮೃತಿ ಮಂಧನಾ, ‘ದೇಶದ ಕ್ರಿಕೆಟ್ ಬೆಳವಣಿಗೆಗೆ ಆರ್‌ಸಿಬಿ ಕೊಡುಗೆ ಮಹತ್ತರವಾದದ್ದು. ಇಂತಹ ಜನಪ್ರಿಯ ತಂಡದ ಭಾಗವಾಗಲು ನನಗೆ ಅವಕಾಶ ಸಿಕ್ಕಿದ್ದು ಬಹಳ ಖುಷಿಯ ವಿಚಾರ. ಮಹಿಳಾ ಕ್ರಿಕೆಟ್‌ನಲ್ಲೂ ಆರ್‌ಸಿಬಿ ಹೂಡಿಕೆ ಮಾಡುವ ಮೂಲಕ ಅತ್ಯುತ್ತಮ ಕಾರ್ಯಕ್ಕೆ ಕೈ ಹಾಕಿದೆ. ಮಹಿಳಾ ಐಪಿಎಲ್ ಆರಂಭಕ್ಕೆ ಭಾರತೀಯರಯ ಮಾತ್ರವಲ್ಲದೆ ವಿದೇಶಿಯರೂ ಬಯಸಿದ್ದರು. ನನ್ನಂತಹ ಅನೇಕ ಮಹಿಳಾ ಕ್ರಿಕೆಟಿಗರ ಕನಸು ಈಗ ನನಸಾಗುತ್ತಿದೆ’ ಎಂದರು.
ಇದೇ ವೇಳೆ ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಮಾತನಾಡಿದ ಸ್ಮೃತಿ, ‘ವಿರಾಟ್ ಹಾಗೂ ನನ್ನ ಜೆರ್ಸಿ ಸಂಖ್ಯೆ ಒಂದೇ. ಆದರೆ ಅವರೊಂದಿಗೆ ನನ್ನ ಹೋಲಿಕೆ ಸರಿಯಲ್ಲ. ಅವರ ಸಾಧನೆಯನ್ನು ಸರಿಗಟ್ಟಲು ನನ್ನಿಂದ ಸಾಧ್ಯವಿಲ್ಲ. ನಾನೂ ಎಲ್ಲರಂತೆ ಅವರ ಅಭಿಮಾನಿ ಅಷ್ಟೇ’ ಎಂದರು. ಇನ್ನು ದಿಗ್ಗಜ ಟೆನಿಸ್ ಆಟಗಾರ್ತಿ ತಂಡದ ಮೆಂಟರ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸ್ಮೃತಿ, ‘ಬಾಲ್ಯದಲ್ಲಿ ಸಾನಿಯಾರನ್ನು ನೋಡಿ ನನ್ನ ತಾಯಿ ನೀನೇಕೆ ಟೆನಿಸ್ ಆಡಬಾರದು ಎಂದು ಕೇಳುತ್ತಿದ್ದರು. ಸಾನಿಯಾ ಮಿರ್ಜಾ ಭಾರತೀಯ ಮಹಿಳಾ ಕ್ರೀಡೆಗೆ ರೋಲ್ ಮಾಡೆಲ್. ಅವರಂಥ ಚಾಂಪಿಯನ್ ಕ್ರೀಡಾಪಟು ನಮ್ಮ ಜೊತೆಗಿರುವುದು ಹೆಮ್ಮೆಯ ವಿಚಾರ’ ಎಂದರು.
WPL 2023: ಉದ್ಘಾಟನಾ ಪಂದ್ಯದಲ್ಲಿ ಮುಂಬೈಗೆ ಸುಲಭ ತುತ್ತಾದ ಗುಜರಾತ್ ಜೈಂಟ್ಸ್
ಇದೇ ವೇಳೆ ಆರ್‌ಸಿಬಿ ಮುಖ್ಯಸ್ಥ ಪ್ರಥಮೇಶ್ ಮಾತನಾಡಿ, ‘ಲಿಂಗ ಅಸಮಾನತೆಯು ನೈತಿಕ ಮತ್ತು ಸಾಮಾಜಿಕ ಸಮಸ್ಯೆ ಮಾತ್ರವಲ್ಲ, ನಿರ್ಣಾಯಕ ಆರ್ಥಿಕ ಸವಾಲಾಗಿದೆ. ಲಿಂಗ ಸಮಾನತೆ ಇದ್ದರೆ ರಾಷ್ಟ್ರವು ಬೆಳೆಯಬಹುದು ಮತ್ತು ಮಹಿಳೆಯರ ಸಮಾನತೆಯನ್ನು ಮುನ್ನಡೆಸುವುದು ಆರ್ಥಿಕ ಬೆಳವಣಿಗೆಗೆ ಕಾರಣವಾಗಬಹುದು. ಈ ತಂಡವನ್ನು ಪಡೆಯಲು ನಾವು 901 ಕೋಟಿ ರು. ಹೂಡಿಕೆ ಮಾಡಿದ್ದೇವೆ. ಏಕೆಂದರೆ ಈ ಮಿಷನ್ ಈ ದೇಶಕ್ಕೆ ನಿಜವಾಗಿಯೂ ಮುಖ್ಯವಾಗಿದೆ. ನಾವು ಕ್ರೀಡೆ ಮತ್ತು ಫಿಟ್ನೆಸ್ ಅನ್ನು ಹವ್ಯಾಸದಿಂದ ಜೀವನಶೈಲಿಗೆ ಪರಿವರ್ತಿಸಿದರೆ ಭಾರತವು ಮುಂದುವರಿಯುತ್ತದೆ ಎಂದು ನಾವು ನಂಬುತ್ತೇವೆ’ ಎಂದರು.
ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀಗಿದೆ:
1. ಸ್ಮೃತಿ ಮಂಧನಾ .3.4 ಕೋಟಿ ರುಪಾಯಿ
2. ರಿಚಾ ಘೋಷ್ 1.9 ಕೋಟಿ ರುಪಾಯಿ
3. ಎಲೈಸಿ ಪೆರ್ರಿ 1.7 ಕೋಟಿ ರುಪಾಯಿ
4. ರೇಣುಕಾ ಸಿಂಗ್ 1.5 ಕೋಟಿ ರುಪಾಯಿ
5. ಸೋಫಿ ಡಿವೈನ್ 50 ಲಕ್ಷ ರುಪಾಯಿ
6. ಹೀಥರ್ ನೈಟ್ 40 ಲಕ್ಷ ರುಪಾಯಿ
7. ಮೇಗನ್ ಶುಟ್ 40 ಲಕ್ಷ ರುಪಾಯಿ
8. ಕನಿಕಾ ಅಹುಜಾ 35 ಲಕ್ಷ ರುಪಾಯಿ
9. ವಾನ್ ನೀಕಕ್ 30 ಲಕ್ಷ ರುಪಾಯಿ
10. ಎರಿನ್ ಬರ್ನ್ಸ್ 30 ಲಕ್ಷ ರುಪಾಯಿ
11. ಪ್ರೀತಿ ಬೋಸ್ 30 ಲಕ್ಷ ರುಪಾಯಿ
12. ಕೋಮಲ್ ಜಂಜದ್ 25 ಲಕ್ಷ ರುಪಾಯಿ
13. ಆಶಾ ಶೋಭನಾ 10 ಲಕ್ಷ ರುಪಾಯಿ
14. ದಿಶಾ ಕಸಟ್ 10 ಲಕ್ಷ ರುಪಾಯಿ
15. ಇಂದ್ರಾನಿ ರಾಯ್ 10 ಲಕ್ಷ ರುಪಾಯಿ
16. ಪೂನಂ ಕೆಮ್ನರ್ 10 ಲಕ್ಷ ರುಪಾಯಿ
17. ಸಹನಾ ಪವಾರ್ 10 ಲಕ್ಷ ರುಪಾಯಿ
18. ಶ್ರೇಯಾಂಕಾ ಪಾಟೀಲ್ 10 ಲಕ್ಷ ರುಪಾಯಿ