WPL ಟೂರ್ನಿಯಲ್ಲಿ ಶುಭಾರಂಭ ಮಾಡಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ಗುಜರಾತ್ ಜೈಂಟ್ಸ್‌ ಎದುರು ಮುಂಬೈಗೆ 143 ರನ್‌ಗಳ ಭಾರೀ ಅಂತರದ ಜಯಭೇರಿಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಹರ್ಮನ್‌ಪ್ರೀತ್ ಕೌರ್ ಪಡೆ

ನವಿ ಮುಂಬೈ(ಮಾ.05): ಡಬ್ಲ್ಯುಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 143 ರನ್‌ಗಳ ಅಮೋಘ ಗೆಲುವು ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಗುಜರಾತ್‌ ಜೈಂಟ್ಸ್‌ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು 5 ವಿಕೆಟ್‌ಗೆ 207 ರನ್‌ ಕಲೆಹಾಕಿತ್ತು.

ಆರಂಭದಲ್ಲೇ ಮುಂಬೈ ಇಂಡಿಯನ್ಸ್‌ ಮಹಿಳಾ ಕ್ರಿಕೆಟ್‌ ತಂಡವು ಯಾಶ್ತಿಕಾ ಭಾಟಿಯಾ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಹೇಲಿ ಮ್ಯಾಥ್ಯೂಸ್‌ ಹಾಗೂ ನಥಾಲಿ ಶೀವರ್ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಹೇಲಿ ಕೇವಲ 31 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಆಕರ್ಷಕ ಸಿಕ್ಸರ್ ನೆರವಿನಿಂದ 47 ರನ್ ಸಿಡಿಸಿದರೆ, ಆಲ್ರೌಂಡರ್ ನಥಾಲಿ ಶೀವರ್ ಬ್ರಂಟ್ 23 ರನ್ ಚಚ್ಚಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಆಟಗಾರ್ತಿ ಎನ್ನುವ ಹಿರಿಮೆಗೆ ಕೌರ್ ಪಾತ್ರರಾದರು. ಅಂತಿಮವಾಗಿ ಹರ್ಮನ್‌ಪ್ರೀತ್ ಕೌರ್ 30 ಎಸೆತಗಳನ್ನು ಎದುರಿಸಿ 14 ಬೌಂಡರಿ ಸಹಿತ65 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಅಮೆಲಿಯಾ ಕೌರ್ ಕೇವಲ 24 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು. ಇನ್ನುಳಿದಂತೆ ಪೂಜಾ ವಸ್ತ್ರಾಕರ್(15) ಹಾಗೂ ವಾಂಗ್‌(6*) ಉಪಯುಕ್ತ ರನ್‌ ಕಾಣಿಕೆ ನೀಡಿದರು.

Scroll to load tweet…

ಇನ್ನು ಕಠಿಣ ಗುರಿ ಬೆನ್ನತ್ತಿದ ಬೆಥ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವು ಸೈಕಾ ಇಶಾಕ್ ಹಾಗೂ ನಥಾಲಿ ಶೀವರ್ ಮಾರಕ ದಾಳಿಗೆ ತತ್ತರಿಸಿ ಹೋಗುವ ಮೂಲಕ ಕೇವಲ 64 ರನ್‌ಗಳಿಗೆ ಸರ್ವಪತನ ಕಂಡಿತು. ಗುಜರಾತ್ ಜೈಂಟ್ಸ್‌ ಪರ ನಾಲ್ವರು ಬ್ಯಾಟರ್‌ಗಳು ಶೂನ್ಯ ಸಂಪಾದನೆ ಮಾಡಿದರೆ, ಒಟ್ಟಾರೆ 8 ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಗುಜರಾತ್ ಜೈಂಟ್ಸ್‌ ತಂಡವು 27 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಏಳು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇನ್ನುಳಿದಂತೆ ಡಿ ಹೇಮಲತಾ(29) ಹಾಗೂ ಮೋನಿಕಾ ಪಟೇಲ್(10) ಮಾತ್ರ ಎರಡಂಕಿ ಮೊತ್ತ ದಾಖಲಿಸುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟುವಂತೆ ಮಾಡಿದರು.

WPL 2023 ನಾಯಕಿ ಹರ್ಮನ್‌ಪ್ರೀತ್ ಅಬ್ಬರ, ಗುಜರಾತ್‌ಗೆ 208 ರನ್ ಟಾರ್ಗೆಟ್!

ಮುಂಬೈ ಇಂಡಿಯನ್ಸ್‌ ಪರ ಸೈಕಾ ಇಶಾಕ್‌ ಕೇವಲ 11 ರನ್ ನೀಡಿ 4 ವಿಕೆಟ್ ಪಡೆದರೆ, ನಥಾಲಿ ಶೀವರ್ ಹಾಗೂ ಅಮೆಲಿಯಾ ಕೆರ್ರ್‌ ತಲಾ ಎರಡು ವಿಕೆಟ್ ಪಡೆದರು. ಇನ್ನು ಇಶಿ ವಾಂಗ್ 3 ಓವರ್ ಬೌಲಿಂಗ್‌ ಮಾಡಿ ಕೇವಲ 7 ರನ್ ನೀಡಿ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಮಹಿಳಾ ಐಪಿಎಲ್‌ಗೆ ಅದ್ಧೂರಿ ಚಾಲನೆ!

ನವಿ ಮುಂಬೈ: ಮಹಿಳಾ ಕ್ರಿಕೆಟ್‌ ತನ್ನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಬಹು ನಿರೀಕ್ಷಿತ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಮಹಿಳಾ ಐಪಿಎಲ್‌)ಗೆ ಶನಿವಾರ ಇಲ್ಲಿನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆಯಿತು. ಮುಂದಿನ 3 ವಾರಗಳ ಕಾಲ 5 ತಂಡಗಳು ಚೊಚ್ಚಲ ಪ್ರಶಸ್ತಿಗೆ ಸೆಣಸಲಿವೆ. ವಿಶ್ವದ ಜನಪ್ರಿಯ ಮಹಿಳಾ ಕ್ರಿಕೆಟಿಗರ ಆಟ ವೀಕ್ಷಿಸುವ ಅವಕಾಶ ಅಭಿಮಾನಿಗಳಿಗೆ ದೊರೆತಿದೆ.

ಶನಿವಾರ ಸಂಜೆ 5.30ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಬೇಕಿತ್ತು. ಆದರೆ ಸಮಾರಂಭವನ್ನು ಅರ್ಧ ಗಂಟೆ ಮುಂದೂಡಲಾಯಿತು. ಇದರಿಂದಾಗಿ ಸಂಜೆ 6.15ರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮನರಂಜನಾ ಕಾರ‍್ಯಕ್ರಮಗಳು ನಡೆದವು.

ಈ ನಡುವೆ ಟ್ರೋಫಿ ಅನಾವರಣವೂ ಆಯಿತು. ಎಲ್ಲಾ 5 ತಂಡಗಳ ನಾಯಕಿಯರ ಜೊತೆ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ‍್ಯದರ್ಶಿ ಜಯ್‌ ಶಾ, ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್‌ ಸೇರಿ ಇತರ ಪದಾಧಿಕಾರಿಗಳು ಸಹ ಟ್ರೋಫಿ ಅನಾವರಣ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿಡಿಮದ್ದುಗಳ ಚಿತ್ತಾರ ಕ್ರೀಡಾಂಗಣದಲ್ಲಿ ನರೆದಿದ್ದ ಅಭಿಮಾನಿಗಳನ್ನು ಆಕರ್ಷಿಸಿತು.

ಇದಕ್ಕೂ ಮುನ್ನ ಬಾಲಿವುಡ್‌ನ ಖ್ಯಾತ ನಟಿಯರಾದ ಕಿಯಾರಾ ಅಡ್ವಾಣಿ, ಕೃತಿ ಸನೋನ್‌ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು. ಇವರ ಜೊತೆ ಗ್ಯಾಲರಿಗಳಲ್ಲಿದ್ದ ಅಭಿಮಾನಿಗಳೂ ಹೆಜ್ಜೆ ಹಾಕಿ ಸಂಭ್ರಮಿಸಿದರು.