ನಾಲ್ಕನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಹರಾಜಿನಲ್ಲಿ, ಆರ್‌ಸಿಬಿ ತಂಡವು ಸ್ಟಾರ್ ಆಟಗಾರ್ತಿ ಸೋಫಿ ಡಿವೈನ್ ಅವರನ್ನು ಕಳೆದುಕೊಂಡಿದೆ. ಮತ್ತೊಂದೆಡೆ, ದೀಪ್ತಿ ಶರ್ಮಾ ಅವರು 3.20 ಕೋಟಿ ರುಪಾಯಿಗೆ ಯುಪಿ ವಾರಿಯರ್ಸ್ ಪಾಲಾಗಿದ್ದಾರೆ. ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ವಿವರ ಇಲ್ಲಿದೆ.

ನವದೆಹಲಿ: ನಾಲ್ಕನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬಿಗ್ ಹಿಟ್ಟರ್ ಸೋಫಿ ಡಿವೈನ್ ಅವರನ್ನು ಹರಾಜಿನಲ್ಲಿ ಖರೀದಿಸಲು ವಿಫಲವಾಗಿದೆ. ಸೋಫಿ ಡಿವೈನ್ ಆರ್‌ಸಿಬಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಡುತ್ತಾ ಬಂದಿದ್ದರು. ಆದರೆ ಇದೀಗ ಸೋಫಿ ಡಿವೈನ್ 2 ಕೋಟಿ ರುಪಾಯಿಗೆ ಗುಜರಾತ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.

ಇನ್ನು 2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿ ವಿಜೇತೆ ದೀಪ್ತಿ ಶರ್ಮಾಗೆ ಜಾಕ್‌ಪಾಟ್‌ ಒಲಿದಿದೆ. ಸ್ಟಾರ್ ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಮೂಲ ಬೆಲೆ 50 ಲಕ್ಷ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಿಡ್ ಮಾಡಿತ್ತು. ಇದಾದ ಬಳಿಕ ಯಾವ ಫ್ರಾಂಚೈಸಿಯು ದೀಪ್ತಿಗೆ ಬಿಡ್‌ ಮಾಡಲು ಮುಂದಾಗಲಿಲ್ಲ. ಇನ್ನು ಇದೇ ಬೆಲೆಗೆ ಆರ್‌ಟಿಎಂ ಬಳಸಿ ರೀಟೈನ್ ಮಾಡಿಕೊಳ್ಳಲು ಯುಪಿ ವಾರಿಯರ್ಸ್ ತಂಡವು ಮುಂದಾಯಿತು. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಮ್ಮೆ ಮಾತ್ರ ಹೆಚ್ಚು ಬಿಡ್ ಮಾಡಲು ಅವಕಾಶ ನೀಡಲಾಯಿತು. ಆಗ ಡೆಲ್ಲಿ ಫ್ರಾಂಚೈಸಿಯು ಸಾಕಷ್ಟು ಅಳೆದುತೂಗಿ 50 ಲಕ್ಷದಿಂದ ನೇರವಾಗಿ 3.20 ಕೋಟಿ ರುಪಾಯಿಗೆ ಬಿಡ್ ಮಾಡಿತು. ಆ ಮೊತ್ತಕ್ಕೆ ಮತ್ತೆ ಯುಪಿ ವಾರಿಯರ್ಸ್ ರೀಟೈನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

Scroll to load tweet…

ಹೊಸ ಇತಿಹಾಸ ಬರೆದ ದೀಪ್ತಿ ಶರ್ಮಾ

ಇದೀಗ ದೀಪ್ತಿ ಶರ್ಮಾ, ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನ ಇತಿಹಾಸದಲ್ಲಿ ಎರಡನೇ ಗರಿಷ್ಠ ಮೊತ್ತಕ್ಕೆ ಬಿಡ್‌ ಆದ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಚೊಚ್ಚಲ ಆವೃತ್ತಿಯ WPL ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಸ್ಮೃತಿ ಮಂಧನಾಗೆ 3.40 ಕೋಟಿ ನೀಡಿ ಖರೀದಿಸಿತ್ತು.

ಇನ್ನುಳಿದಂತೆ ನ್ಯೂಜಿಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಅಮೇಲಿಯಾ ಕೆರ್ರ್‌ ಅವರನ್ನು 3 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್ ಖರೀದಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೂರು ಬಾರಿ ಫೈನಲ್‌ಗೆ ಕೊಂಡೊಯ್ದ ಮೆಗ್ ಲ್ಯಾನಿಂಗ್ ಅವರನ್ನು 1.90 ಕೋಟಿ ರುಪಾಯಿಗೆ ಯುಪಿ ವಾರಿಯರ್ಸ್ ಖರೀದಿಸಿತು. ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವುದರ ಜತೆಗೆ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ಲೌರಾ ವೋಲ್ವರ್ಡ್ 1.10 ಕೋಟಿ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಇನ್ನು ಭಾರತದ ಅನುಭವಿ ವೇಗಿ ರೇಣುಕಾ ಸಿಂಗ್ 60 ಲಕ್ಷ ರುಪಾಯಿಗೆ ಗುಜರಾತ್ ಜೈಂಟ್ಸ್ ತೆಕ್ಕೆಗೆ ಜಾರಿದರು.

ಆರ್‌ಸಿಬಿ ತಂಡ ಖರೀದಿಸಿದ ಪ್ರಮುಖ ಆಟಗಾರ್ತಿಯರ ಕಂಪ್ಲೀಟ್ ಡೀಟೈಲ್ಸ್

ಆರ್‌ಸಿಬಿ ಫ್ರಾಂಚೈಸಿಯು ಮರ್ಕ್ಯೂ ಲಿಸ್ಟ್‌ನಲ್ಲಿದ್ದ ಯಾವುದೇ ಆಟಗಾರ್ತಿಯರನ್ನು ಖರೀದಿಸಲಿಲ್ಲ. ಆದರೆ ಆ ಬಳಿಕ ದಕ್ಷಿಣ ಆಫ್ರಿಕಾ ಮೂಲದ ಸ್ಟಾರ್ ಆಲ್ರೌಂಡರ್ ನದಿನೆ ಡಿ ಕ್ಲೆರ್ಕ್ ಅವರನ್ನು 65 ಲಕ್ಷ ರುಪಾಯಿಗೆ ಖರೀದಿಸಿತು. ಇದಾದ ಬಳಿಕ ಭಾರತದ ತಾರಾ ಆಲ್ರೌಂಡರ್ ರಾಧಾ ಯಾದವ್ ಅವರನ್ನು 65 ಲಕ್ಷ ರುಪಾಯಿಗೆ ಖರೀದಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.

ಇದಾದ ನಂತರ ಆರ್‌ಸಿಬಿ ಫ್ರಾಂಚೈಸಿಯು ಇಂಗ್ಲೆಂಡ್ ಮೂಲದ ಬಲಗೈ ವೇಗಿ ಲೌರೆನ್ ಬೆಲ್ ಅವರನ್ನು 90 ಲಕ್ಷ ರುಪಾಯಿಗೆ ಖರೀದಿಸಿದರೆ, ಇಂಗ್ಲೆಂಡ್ ಮೂಲದ ಎಡಗೈ ಸ್ಪಿನ್ನರ್ ಲಿನ್‌ಸೇ ಸ್ಮಿತ್ ಅವರನ್ನು 30 ಲಕ್ಷ ರುಪಾಯಿ ಮೂಲ ಬೆಲೆಗೆ ಖರೀದಿಸಿತು. ಇನ್ನು ಪ್ರತಿಭಾನ್ವಿತ ಆಟಗಾರ್ತಿ ಪ್ರೇಮಾ ರಾವತ್ ಅವರನ್ನು 20 ರುಪಾಯಿಗೆ ಆರ್‌ಟಿಎಂ ಬಳಸಿ ಬೆಂಗಳೂರು ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತು.

ಡೆತ್ ಓವರ್ ಸ್ಪೆಷಲಿಸ್ಟ್‌ ಅರುಂದತಿ ರೆಡ್ಡಿ 75 ಲಕ್ಷ ರುಪಾಯಿ ಹಾಗೂ ಇನ್ನು ಬೌಲಿಂಗ್‌ ಆಲ್ರೌಂಡರ್ ಪೂಜಾ ವಸ್ತ್ರಾಕರ್ 85 ಲಕ್ಷ ರುಪಾಯಿಗೆ ಆರ್‌ಸಿಬಿ ಪಾಲಾಗಿದ್ದಾರೆ.