ಮಹಿಳಾ ಐಪಿಎಲ್ (ಡಬ್ಲ್ಯುಪಿಎಲ್) ಮಿನಿ ಹರಾಜಿನಲ್ಲಿ ಕರ್ನಾಟಕದ ವೃಂದಾ ದಿನೇಶ್‌, ಉಮಾ ಕಾಶ್ವಿ ಮತ್ತು ಸಹನಾ ಪವಾರ್‌ ಆಯ್ಕೆಯಾಗಿದ್ದಾರೆ. ಇದರಲ್ಲಿ 15 ವರ್ಷದ ಉಮಾ ಕಾಶ್ವಿ ಟೂರ್ನಿಯ ಇತಿಹಾಸದಲ್ಲೇ ಹರಾಜಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಟ್ಟು 25 ಆಟಗಾರ್ತಿಯರು ವಿವಿಧ ತಂಡಗಳಿಗೆ ಮಾರಾಟವಾಗಿದ್ದಾರೆ.

ಕೊಚ್ಚಿ: ಕರ್ನಾಟಕದ ಆಟಗಾರ್ತಿಯರಾದ ವೃಂದಾ ದಿನೇಶ್‌, ಉಮಾ ಕಾಶ್ವಿ ಹಾಗೂ ಸಹನಾ ಪವಾರ್‌ ಮಹಿಳಾ ಐಪಿಎಲ್‌ ಖ್ಯಾತಿಯ ಡಬ್ಲ್ಯುಪಿಎಲ್‌ಗೆ ಆಯ್ಕೆಯಾಗಿದ್ದಾರೆ. ಈ ಪೈಕಿ 15 ವರ್ಷದ ಆಲ್ರೌಂಡರ್‌ ಉಮಾ, ಟೂರ್ನಿಯ ಇತಿಹಾಸದಲ್ಲೇ ಹರಾಜಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೂವರು ಕನ್ನಡತಿಯರಿಗೆ ಜಾಕ್‌ಪಾಟ್

ಬುಧವಾರ ನಡೆದ ಆಟಗಾರ್ತಿಯರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಕರ್ನಾಟಕದ 8 ಆಟಗಾರ್ತಿಯರ ಪೈಕಿ ಈ ಮೂವರು ಬಿಕರಿಯಾದರೆ, ಶಿಶಿರಾ ಗೌಡ ಸೇರಿ ಐವರು ಅನ್‌ಸೋಲ್ಡ್‌ ಆದರು.

ವೃಂದಾ ₹10 ಲಕ್ಷಕ್ಕೆ ಆರ್‌ಸಿಬಿಗೆ, ಉಮಾ ಕಾಶ್ವಿ ₹10 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಹಾಗೂ ಸಹನಾ ₹10 ಲಕ್ಷಕ್ಕೆ ಯುಪಿ ವಾರಿಯರ್ಸ್‌ ಪಾಲಾದರು. ಆರ್‌ಸಿಬಿ ತಂಡ ಈ ಹರಾಜಿನಲ್ಲಿ ವೃಂದಾ ಜೊತೆ ಇನ್ನೂ ಮೂವರನ್ನು ಖರೀದಿಸಿತು. ಆಸ್ಟ್ರೇಲಿಯಾದ ಜೆಸ್‌ ಜೊನಾಸೆನ್‌ಗೆ ₹40 ಲಕ್ಷ ನೀಡಿದರೆ, ತೇಜಲ್ ಹಸಬ್ನಿಸ್‌ಗೆ ₹30 ಲಕ್ಷ ನೀಡಿತು. ದ.ಆಫ್ರಿಕಾದ ಕ್ಲೋ ಟ್ರಯಾನ್‌ ₹30 ಲಕ್ಷಕ್ಕೆ ಆರ್‌ಸಿಬಿ ಪಾಲಾದರು. ಉಳಿದಂತೆ ಆಸ್ಟ್ರೇಲಿಯಾದ ಸೋಫಿ ಮೋಲಿನುಕ್ಸ್‌ ₹1.1 ಕೋಟಿಗೆ ಯುಪಿ ಪಾಲಾಗಿ ಹರಾಜಿನ ದುಬಾರಿ ಆಟಗಾರ್ತಿ ಎನಿಸಿಕೊಂಡರು. ಕಿರಣ್‌ ನಾವ್ಗಿಗೆ ₹75 ಲಕ್ಷಕ್ಕೆ ಡೆಲ್ಲಿ ಸೇರ್ಪಡೆಗೊಂಡರು.

25 ಆಟಗಾರ್ತಿಯರು 5 ತಂಡಕ್ಕೆ ಮಾರಾಟ

ಬುಧವಾರದ ಹರಾಜಿನಲ್ಲಿ ಒಟ್ಟು 25 ಆಟಗಾರ್ತಿರು 5 ತಂಡಗಳ ಪಾಲಾದರು. ಇದರಲ್ಲಿ ಏಳು ಮಂದಿ ವಿದೇಶಿ ಆಟಗಾರ್ತಿಯರಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯವಾಡದ 14 ಆಟಗಾರ್ತಿಯರಿಗೂ ಅದೃಷ್ಟ ಒಲಿಯಿತು.

ಟಿ20 ಬಳಿಕ ಏಕದಿನದಲ್ಲೂ ಕ್ಲೀನ್‌ಸ್ವೀಪ್

ವಡೋದರಾ: ಭಾರತ ಮಹಿಳಾ ತಂಡ ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿಕೊಂಡಿದೆ. ಇತ್ತೀಚೆಗೆ ಟಿ20 ಸರಣಿಯಲ್ಲೂ ಭಾರತ 3-0 ಗೆದ್ದಿತ್ತು.

ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ 39.5 ಓವರ್‌ಗಳಲ್ಲಿ 131 ರನ್‌ಗೆ ಆಲೌಟಾಯಿತು. ಮೊಡೆಸ್ಟರ್‌ 37, ನಾಯಕಿ ಜೋಸೆಫಿನ್‌ ಎನ್‌ಕೊಮೊ 35 ರನ್‌ ಗಳಿಸಿದರು. ಯುವ ಎಡಗೈ ಸ್ಪಿನ್ನರ್‌ ವೈಷ್ಣವಿ ಶರ್ಮಾ ಮಾರಕ ದಾಳಿ ನಡೆಸಿ, 39 ರನ್‌ಗೆ 5 ವಿಕೆಟ್‌ ಪಡೆದರು.

ಸುಲಭ ಗುರಿ ಬೆನ್ನತ್ತಿದ ಭಾರತ ಕೇವಲ 17 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಪ್ರತಿಕಾ ರಾವಲ್‌ ಔಟಾಗದೆ 59, ಶಫಾಲಿ ವರ್ಮಾ ಔಟಾಗದೆ 51 ರನ್‌ ಸಿಡಿಸಿದರು.