ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್‌ನ 8 ಪಂದ್ಯಗಳು ಮಾರ್ಚ್ 1ರವರೆಗೆ ನಡೆಯಲಿವೆ. ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಇದರ ಜೊತೆಗೆ, ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಕರ್ನಾಟಕದ 10 ದಿಗ್ಗಜ ಕ್ರಿಕೆಟಿಗರ ಹೆಸರನ್ನು ಇಡಲಾಗಿದೆ ಎಂದು ಕೆಎಸ್‌ಸಿಎ ತಿಳಿಸಿದೆ.

ಬೆಂಗಳೂರು: 3ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನ ಬೆಂಗಳೂರಿನ ಚರಣ ಶುಕ್ರವಾರ ಆರಂಭಗೊಳ್ಳಲಿವೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಾ.1ರ ವರೆಗೆ ಒಟ್ಟು 8 ಪಂದ್ಯಗಳು ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಶುಕ್ರವಾರ ಹಾಲಿ ಚಾಂಪಿಯನ್‌ ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್‌ ಸವಾಲು ಎದುರಾಗಲಿದೆ.

ಸ್ಮೃತಿ ಮಂಧನಾ ನಾಯಕತ್ವದ ಆರ್‌ಸಿಬಿ ಟೂರ್ನಿಯಲ್ಲಿ 2 ಪಂದ್ಯಗಳನ್ನಾಡಿದ್ದು, ಎರಡರಲ್ಲೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ನ ಸೋಲಿಸಿದ್ದ ತಂಡ, ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿತ್ತು. ಸ್ಮೃತಿ ಮಂಧನಾ, ರಿಚಾ ಘೋಷ್‌, ಡ್ಯಾನಿಲ್ ವ್ಯಾಟ್‌, ಎಲೈಸಿ ಪೆರ್ರಿ ಉತ್ತಮ ಲಯದಲ್ಲಿದ್ದು, ಬೌಲಿಂಗ್‌ ವಿಭಾಗದಲ್ಲಿ ರೇಣುಕಾ ಸಿಂಗ್‌, ಜಾರ್ಜಿಯಾ ವೇರ್‌ಹ್ಯಾಮ್‌ ತಂಡಕ್ಕೆ ನೆರವಾಗುತ್ತಿದ್ದಾರೆ. ಮುಂಬೈ ವಿರುದ್ಧವೂ ಆಲ್ರೌಂಡ್‌ ಪ್ರದರ್ಶನ ನೀಡುವ ಮೂಲಕ ಹ್ಯಾಟ್ರಿಕ್‌ ಗೆಲುವು ಸಾಧಿಸಲು ಕಾಯುತ್ತಿದೆ.

ಸ್ಪೋಟಕ ಬ್ಯಾಟಿಂಗ್ ಮೂಲಕ ದಿಗ್ಗರ ದಾಖಲೆ ಅಳಿಸಿಹಾಕಿದ ರೋಹಿತ್ ಶರ್ಮಾ!

ಮತ್ತೊಂದೆಡೆ ಮುಂಬೈ ಆಡಿರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ ಪ್ರವೇಶಿಸಲು ಈ ಪಂದ್ಯದಲ್ಲಿ ಗೆಲ್ಲಬೇಕಾಗಿದೆ. ಹರ್ಮನ್‌ಪ್ರೀತ್‌ ಕೌರ್‌, ಶೀವರ್‌ ಬ್ರಂಟ್‌, ಹೇಲಿ ಮ್ಯಾಥ್ಯೂಸ್‌ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಪಂದ್ಯ: ಸಂಜೆ 7.30ಕ್ಕೆ

ಚಿನ್ನಸ್ವಾಮಿ ಸ್ಟ್ಯಾಂಡ್‌ಗೆ ಬಂತು ದಿಗ್ಗಜರ ಹೆಸರು

ಬೆಂಗಳೂರು: ಭಾರತ ಹಾಗೂ ಕರ್ನಾಟಕ ಕ್ರಿಕೆಟ್‌ಗೆ ಗಣನೀಯ ಕೊಡುಗೆ ನೀಡಿರುವ ರಾಜ್ಯದ 10 ದಿಗ್ಗಜ ಕ್ರಿಕೆಟಿಗರ ಹೆಸರನ್ನು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ವಿವಿಧ ಸ್ಟ್ಯಾಂಡ್‌ಗಳಿಗೆ ಇಡಲಾಗಿದೆ. ಡಬ್ಲ್ಯುಪಿಎಲ್‌ನ ಬೆಂಗಳೂರು ಚರಣ ಆರಂಭದ ಮುನ್ನಾ ದಿನವಾದ ಗುರುವಾರ ಕ್ರೀಡಾಂಗಣದಲ್ಲಿ ದಿಗ್ಗಜ ಹೆಸರಿನ ನಾಮಫಲಕಗಳನ್ನು ಅನಾವರಣಗೊಳಿಸಲಾಯಿತು.

ಪಿ1 ಸ್ಟ್ಯಾಂಡ್‌ಗೆ ಎರಪ್ಪಳ್ಳಿ ಪ್ರಸನ್ನ, ಪಿ2ಗೆ ಜಿ.ಆರ್‌.ವಿಶ್ವನಾಥ್‌, ಪಿ ಟೆರೇಸ್‌ಗೆ ಬಿ.ಎಸ್‌.ಚಂದ್ರಶೇಖರ್‌, ಪಿ ಕಾರ್ಪೊರೇಟ್‌ಗೆ ಸಯ್ಯದ್‌ ಕಿರ್ಮಾನಿ, ಎಂ1 ಸ್ಟ್ಯಾಂಡ್‌ಗೆ ಬ್ರಿಜೇಶ್‌ ಪಟೇಲ್‌ ಹೆಸರಿಡಲಾಗಿದೆ. ಎಂ2 ಸ್ಟ್ಯಾಂಡ್‌ಗೆ ರೋಜರ್‌ ಬಿನ್ನಿ, ಡೈಮಂಡ್‌ ಬಾಕ್ಸ್‌ಗೆ ಅನಿಲ್‌ ಕುಂಬ್ಳೆ, ಎನ್‌ ಸ್ಟ್ಯಾಂಡ್‌ಗೆ ರಾಹುಲ್‌ ದ್ರಾವಿಡ್‌, ಪಿ1ಎ ಸ್ಟ್ಯಾಂಡ್‌ಗೆ ಜಾವಗಲ್‌ ಶ್ರೀನಾಥ್‌, ಪಿ4 ಸ್ಟ್ಯಾಂಡ್‌ಗೆ ವೆಂಕಟೇಶ್‌ ಪ್ರಸಾದ್‌ ಹೆಸರಿನ ನಾಮಫಲಕ ಅಳವಡಿಸಲಾಗಿದೆ.

ಟೀಂ ಇಂಡಿಯಾ ಬೌಲರ್‌ಗೆ ಕೈಮುಗಿದು ಕ್ಷಮೆ ಕೇಳಿದ ಕ್ಯಾಪ್ಟನ್ ರೋಹಿತ್ ಶರ್ಮಾ! ವಿಡಿಯೋ ವೈರಲ್

ದಿಗ್ಗಜರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅವರ ಹೆಸರುಗಳನ್ನು ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಕೆಲ ತಿಂಗಳುಗಳ ಹಿಂದೆಯೇ ನಿರ್ಧರಿಸಿತ್ತು. ದಿನಗಳ ಹಿಂದಷ್ಟೇ ಕ್ರೀಡಾಂಗಣದ ಹೊರಗೆ ಸೂಚನಾ ಫಲಕ ಅಳವಡಿಸಿದ್ದ ಕೆಎಸ್‌ಸಿಎ, ಗುರುವಾರ ಕ್ರೀಡಾಂಗಣದ ಒಳಗೆ ಬೃಹತ್‌ ಗಾತ್ರದ ನಾಮಫಲಕಗಳನ್ನು ಅನಾವರಣಗೊಳಿಸಿತು.

ದಿಗ್ಗಜ ಕ್ರಿಕೆಟಿಗರ ಹೆಸರನ್ನು ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡುವ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಅಧಿಕೃತವಾಗಿ ಅವರ ಹೆಸರುಗಳ ಸ್ಟ್ಯಾಂಡ್‌ಗಳನ್ನು ಅನಾವರಣಗೊಳಿಸುತ್ತಿದ್ದೇವೆ. ಈ ಮೂಲಕ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸುತ್ತಿದ್ದೇವೆ - ಶುಭೇಂದು ಘೋಷ್‌, ಕೆಎಸ್‌ಸಿಎ ಸಿಎಇ

ಕರ್ನಾಟಕದ 10 ಕ್ರಿಕೆಟಿಗರ ಹೆಸರನ್ನು ಕ್ರೀಡಾಂಗಣದ ಸ್ಟ್ಯಾಂಡ್‌ಗಳನ್ನು ಈಗ ಅನಾವರಣಗೊಳಿಸುತ್ತಿದ್ದೇವೆ. ಮಹಿಳಾ ಕ್ರಿಕೆಟರ್‌ ಶಾಂತಾ ರಂಗಸ್ವಾಮಿ ಅವರ ಹೆಸರಿಡುವ ಬಗ್ಗೆ ಈ ವರೆಗೂ ನಿರ್ಧಾರ ಕೈಗೊಂಡಿಲ್ಲ. ಮುಂದೆ ಪ್ರಸ್ತಾವ ಬಂದರೆ ನೋಡೋಣ - ರಘುರಾಮ್‌ ಭಟ್‌, ಕೆಎಸ್‌ಸಿಎ ಅಧ್ಯಕ್ಷ