* WPL ಟೂರ್ನಿಯಲ್ಲಿ ಪ್ಲೇ ಆಫ್‌ಗೆ ಲಗ್ಗೆಯಿಟ್ಟ ಯುಪಿ ವಾರಿಯರ್ಸ್‌* ಪ್ಲೇ ಆಫ್‌ಗೇರುವ ಆರ್‌ಸಿಬಿ ಕನಸು ಭಗ್ನ* ಗುಜರಾತ್ ಜೈಂಟ್ಸ್‌ ಎದುರು 3 ವಿಕೆಟ್ ರೋಚಕ ಜಯ ಸಾಧಿಸಿದ ಯುಪಿ ವಾರಿಯರ್ಸ್‌

ಮುಂಬೈ(ಮಾ.21): ಗ್ರೇಸ್‌ ಹ್ಯಾರಿಸ್‌(41 ಎಸೆತದಲ್ಲಿ 72), ತಾಹಿಲಾ ಮೆಗ್ರಾಥ್‌(57)ರ ಸ್ಫೋಟಕ ಅರ್ಧಶತಕಗಳ ನೆರವಿನಿಂದ, ಗುಜರಾತ್‌ ಜೈಂಟ್ಸ್‌ ವಿರುದ್ಧ 3 ವಿಕೆಟ್‌ ರೋಚಕ ಗೆಲುವು ಸಾಧಿಸಿದ ಯು.ಪಿ.ವಾರಿಯ​ರ್ಸ್‌ ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನ ಪ್ಲೇ-ಆಫ್‌ ಹಂತಕ್ಕೆ ಪ್ರವೇಶಿಸಿದೆ.

ಗುಜರಾತ್‌ ನೀಡಿದ್ದ 179 ರನ್‌ ಗುರಿಯನ್ನು ಒಂದು ಎಸೆತ ಬಾಕಿ ಇರುವಂತೆ ಬೆನ್ನತ್ತಿದ ಯು.ಪಿ. ವಾರಿಯರ್ಸ್‌ ಪ್ಲೇ-ಆಫ್‌ಗೇರಿದ 3ನೇ ತಂಡ ಎನಿಸಿಕೊಂಡಿತು. ಇದರೊಂದಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳು ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದವು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಗುಜರಾತ್‌ಗೆ ಡಂಕ್ಲಿ(23) ಹಾಗೂ ವೂಲ್ವಾರ್ಚ್‌(17) ಉತ್ತಮ ಆರಂಭ ಒದಗಿಸಿದರು. ದಯಾಳನ್‌ ಹೇಮಲತಾ(57) ಹಾಗೂ ಆಶ್ಲೆ ಗಾಡ್ರ್ನರ್‌(60)ರ ಆಕರ್ಷಕ ಆಟ ತಂಡ 20 ಓವರಲ್ಲಿ 6 ವಿಕೆಟ್‌ಗೆ 178 ರನ್‌ ಕಲೆಹಾಕಲು ನೆರವಾಯಿತು.

IPL 203: ಕೈಲ್ ಜೇಮಿಸನ್‌ ಬದಲಿಗೆ CSK ಸೇರಿದ ದಕ್ಷಿಣ ಆಫ್ರಿಕಾದ ಡೆತ್ ಓವರ್‌ ಸ್ಪೆಷಲಿಷ್ಟ್..!

ಯು.ಪಿ. 39 ರನ್‌ಗೆ 3 ವಿಕೆಟ್‌ ಕಳೆದುಕೊಂಡರೂ, ತಾಹಿಲಾ ಹಾಗೂ ಗ್ರೇಸ್‌ 4ನೇ ವಿಕೆಟ್‌ಗೆ 78 ರನ್‌ ಸೇರಿಸಿ ತಂಡವನ್ನು ಜಯದ ಹಾದಿಯಲ್ಲಿ ಉಳಿಸಿದರು. ಗ್ರೇಸ್‌ ತಮ್ಮ ಇನ್ನಿಂಗ್‌್ಸನಲ್ಲಿ 7 ಬೌಂಡರಿ, 4 ಸಿಕ್ಸರ್‌ ಸಿಡಿಸಿ ತಂಡವನ್ನು ಜಯದ ಹೊಸ್ತಿಲಿಗೆ ತಂದರು. ಸೋಫಿ ಎಕ್ಲೆಸ್ಟೋನ್‌ ಔಟಾಗದೆ 19 ರನ್‌ ಗಳಿಸಿ, ವಾರಿಯ​ರ್ಸ್‌ ಪಡೆಯನ್ನು ಪ್ಲೇ-ಆಫ್‌ಗೇರಿಸಿದರು.

ಸ್ಕೋರ್‌: 
ಗುಜರಾತ್‌ 20 ಓವರಲ್ಲಿ 178/6(ಗಾಡ್ರ್ನರ್‌ 60, ಹೇಮಲತಾ 57, ಪಾರ್ಶವಿ 2-29)
ಯು.ಪಿ. ವಾರಿಯರ್ಸ್‌ 19.5 ಓವರಲ್ಲಿ 181/7(ಗ್ರೇಸ್‌ 72, ತಾಹಿಲಾ 57, ಗಾರ್ಥ್ 2-29)

ಅಗ್ರಸ್ಥಾನಕ್ಕೇರಿದ ಡೆಲ್ಲಿ..!

ನವಿಮುಂಬೈ: ವುಮೆನ್ಸ್ ಪ್ರೀಮಿಯರ್ ಲೀಗ್‌ನ ಫೈನಲ್‌ಗೆ ನೇರ ಪ್ರವೇಶ ಪಡೆಯಲು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಮುಂಬೈ ವಿರುದ್ದ ಸೋಮವಾರ 9 ವಿಕೆಟ್‌ ಗೆಲುವು ಸಾಧಿಸಿದ ಡೆಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಮುಂಬೈ ಮೊದಲು ಬ್ಯಾಟ್‌ ಮಾಡಿ 20 ಓವರ್‌ನಲ್ಲಿ 8 ವಿಕೆಟ್‌ಗೆ ಕೇವಲ 109 ರನ್‌ ಕಲೆಹಾಕಿತು. ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಕೇವಲ 9 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 110 ರನ್‌ ಗಳಿಸಿತು. ಅಲೈಸ್ ಕ್ಯಾಪ್ಸಿ ಔಟಾಗದೆ 38, ಲ್ಯಾನಿಂಗ್‌ ಔಟಾಗದೆ 32, ಶಫಾಲಿ ಔಟಾಗದೆ 33 ರನ್ ಸಿಡಿಸಿದರು. ಮಂಗಳವಾರದ ಅಗ್ರಸ್ಥಾನ ಪಡೆಯುವ ತಂಡ ಯಾವುದು ಎನ್ನುವುದು ನಿರ್ಧಾರವಾಗಲಿದೆ. 2, 3ನೇ ಸ್ಥಾನ ಪಡೆವ ತಂಡಗಳು ಎಲಿಮಿನೇಟರ್‌ ಪಂದ್ಯ ಆಡಲಿವೆ.

ಇಂದು ಆರ್‌ಸಿಬಿಗೆ ಮುಂಬೈ ಸವಾಲು

ಮುಂಬೈ: ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿರುವ ಆರ್‌ಸಿಬಿ, ಮಂಗಳವಾರ ಲೀಗ್‌ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಸೆಣಸಲಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ಎದುರು ನೋಡುತ್ತಿದೆ. ಸತತ 5 ಪಂದ್ಯಗಳಲ್ಲಿ ಸೋತಿದ್ದ ಆರ್‌ಸಿಬಿ ಕೊನೆ 2 ಪಂದ್ಯಗಳಲ್ಲಿ ಗೆದ್ದು ತನ್ನ ಅಭಿಮಾನಿಗಳು ಸಮಾಧಾನ ಪಡುವಂತೆ ಮಾಡಿದೆ. 

ಕಳೆದ ಪಂದ್ಯದಲ್ಲಿ ತೋರಿದ ಅಧಿಕಾರಯುತ ಪ್ರದರ್ಶನವನ್ನು ಮುಂದುವರಿಸುವ ಗುರಿ ಸ್ಮೃತಿ ಮಂಧನಾ ಪಡೆಯದ್ದಾಗಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಯು.ಪಿ.ವಾರಿಯರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಸೆಣಸಲಿದ್ದು, ಲೀಗ್‌ ಹಂತ ಮಂಗಳವಾರ ಮುಕ್ತಾಯಗೊಳ್ಳಲಿದೆ.

ಇಂದಿನ ಪಂದ್ಯಗಳು: 
ಆರ್‌ಸಿಬಿ-ಮುಂಬೈ, ಮಧ್ಯಾಹ್ನ 3.30ಕ್ಕೆ
ಡೆಲ್ಲಿ-ಯು.ಪಿ. ಸಂಜೆ 7.30ಕ್ಕೆ