WPL 2023: ಡೆಲ್ಲಿ ಕ್ಯಾಪಿಟಲ್ಸ್ ಎದುರು ಇಂದು ಆರ್‌ಸಿಬಿ ಅಭಿಯಾನ ಆರಂಭ
ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿಗಿಂದು ಡೆಲ್ಲಿ ಕ್ಯಾಪಿಟಲ್ಸ್ ಸವಾಲು
ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್‌ಸಿಬಿಗೆ ತಾರಾ ಅಂತಾರಾಷ್ಟ್ರೀಯ ಕ್ರಿಕೆಟಿಗರ ಬಲ
ಮುಂಬೈ(ಮಾ.04): ಭಾರತ ತಂಡದ ಆರಂಭಿಕ ಜೋಡಿಯಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಭಾನುವಾರ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಸ್ಮೃತಿ ನೇತೃತ್ವದ ಆರ್‌ಸಿಬಿ, ಶಫಾಲಿ ಸೇರಿ ಬಲಿಷ್ಠ ಆಟಗಾರ್ತಿಯರಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.
ಆರ್‌ಸಿಬಿಗೆ ತಾರಾ ಅಂತಾರಾಷ್ಟ್ರೀಯ ಕ್ರಿಕೆಟಿಗರ ಬಲವಿದ್ದು, ಮೇಲ್ನೋಟಕ್ಕೆ ಅತ್ಯಂತ ಬಲಿಷ್ಠವಾಗಿ ತೋರುತ್ತಿದೆ. ಆಸ್ಪ್ರೇಲಿಯಾದ ದಿಗ್ಗಜೆ ಎಲೈಸಿ ಪೆರ್ರಿ, ಇಂಗ್ಲೆಂಡ್ ನಾಯಕಿ ಹೀಥರ್ ನೈಟ್, ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್, ದ.ಆಫ್ರಿಕಾದ ಮಾಜಿ ನಾಯಕಿ ಡ್ಯಾನೆ ವಾನ್ ನೀಕರ್ಕ್, ಭಾರತದ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ವೇಗಿ ರೇಣುಕಾ ಸಿಂಗ್ ಸಹ ತಂಡದಲ್ಲಿದ್ದಾರೆ. ಇದರ ಜೊತೆಗೆ ಕೆಲ ದೇಸಿ ಪ್ರತಿಭೆಗಳನ್ನು ಹುಡುಕಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಕರ್ನಾಟಕದ ಶ್ರೇಯಾಂಕ ಪಾಟೀಲ್, ಸಹನಾ ಪವಾರ್ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದಡೆ ಡೆಲ್ಲಿ ತಂಡಕ್ಕೆ ಆಸ್ಪ್ರೇಲಿಯಾದ ದಿಗ್ಗಜೆ ಮೆಗ್ ಲ್ಯಾನಿಂಗ್, ದ.ಆಫ್ರಿಕಾದ ಮಾರಿಯಾನೆ ಕಾಪ್, ಭಾರತದ ಜೆಮಿಮಾ ರೋಡ್ರಿಗ್ಸ್‌ರಂತಹ ಅನುಭವಿಗಳ ಬಲವಿದೆ. ಜಮ್ಮು-ಕಾಶ್ಮೀರದ ಸ್ಫೋಟಕ ಬ್ಯಾಟರ್ ಜಾಸಿಯಾ ಅಖ್ತರ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಸಂಭಾವ್ಯ ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಸ್ಮೃತಿ ಮಂಧನಾ(ನಾಯಕಿ), ಸೋಫಿಯಾ ಡಿವೈನ್, ಎಲೈಸಿ ಪೆರ್ರಿ, ಹೀಥರ್ ನೈಟ್, ದಿಶಾ ಕಸತ್, ರಿಚಾ ಘೋಷ್(ವಿಕೆಟ್ ಕೀಪರ್), ಕನಿಕಾ ಅಹುಜಾ, ಮೆಘನಾ ಶುಟ್, ಸಹನಾ ಪವಾರ್, ರೇಣುಕಾ ಸಿಂಗ್, ಕೋಮಲ್ ಜಂಜಾದ್.
ಡೆಲ್ಲಿ ಕ್ಯಾಪಿಟಲ್ಸ್:
ಶಫಾಲಿ ವರ್ಮಾ, ಜಾಸಿಯಾ ಅಖ್ತರ್, ಜೆಮಿಮಾ ರೋಡ್ರಿಗ್ಸ್, ಮೆಗ್ ಲ್ಯಾನಿಂಗ್ಸ್(ನಾಯಕಿ), ಮಾರಿಯಾನೆ ಕಾಪ್, ಲೌರಾ ಹ್ಯಾರಿಸ್, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ಜೆಸ್ ಜೋನ್ಸೆನ್, ರಾಧಾ ಯಾದವ್, ಶಿಖಾ ಪಾಂಡೆ, ಪೂನಂ ಯಾದವ್.
ಆರ್‌ಸಿಬಿ-ಡೆಲ್ಲಿ ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ಭಾನುವಾರ 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಆರ್‌ಸಿಬಿ-ಡೆಲ್ಲಿ ಸೆಣಸಿದರೆ, 2ನೇ ಪಂದ್ಯದಲ್ಲಿ ಗುಜರಾತ್ ಹಾಗೂ ಯು.ಪಿ.ವಾರಿಯರ್ಸ್ ಮುಖಾಮುಖಿಯಾಗಲಿವೆ.
ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು 143 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸಿರುವ ಬೆಥ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವು, ಇದೀಗ ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ. ಗುಜರಾತ್ ಜೈಂಟ್ಸ್ ಪರ ನಾಲ್ವರು ಬ್ಯಾಟರ್‌ಗಳು ಶೂನ್ಯ ಸಂಪಾದನೆ ಮಾಡಿದರೆ, ಒಟ್ಟಾರೆ 8 ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಗುಜರಾತ್ ಜೈಂಟ್ಸ್ ತಂಡವು 27 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಏಳು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಇನ್ನುಳಿದಂತೆ ಡಿ ಹೇಮಲತಾ(29) ಹಾಗೂ ಮೋನಿಕಾ ಪಟೇಲ್(10) ಮಾತ್ರ ಎರಡಂಕಿ ಮೊತ್ತ ದಾಖಲಿಸಿದ್ದರು. ಇದೀಗ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಬೇಕಿದ್ದರೇ, ಗುಜರಾತ್ ಜೈಂಟ್ಸ್ ತಂಡವು ಸಂಘಟಿತ ಪ್ರದರ್ಶನ ತೋರಬೇಕಿದೆ.
WPL ಟೂರ್ನಿಗಾಗಿ ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿತ್ತು: ಸ್ಮೃತಿ ಮಂಧನಾ
ಇನ್ನು ಇನ್ನೊಂದೆಡೆ ಚಾಂಪಿಯನ್ ನಾಯಕಿ ಅಲಿಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್ ತಂಡವು ದೇವಿಕಾ ವೈದ್ಯ, ದೀಪ್ತಿ ಶರ್ಮಾ, ತಾಹಿಲಾ ಮೆಗ್ರಾಥ್ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರ್ತಿಯರನ್ನು ಹೊಂದಿದ್ದು, ಟೂರ್ನಿಯಲ್ಲಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ.
ಗುಜರಾತ್-ಯು.ಪಿ. ಪಂದ್ಯ: ಸಂಜೆ 7.30ಕ್ಕೆ