* ಆರ್‌ಸಿಬಿ ಪರ ಮಿಂಚಿನ ಪ್ರದರ್ಶನ ತೋರುತ್ತಿರುವ ಶ್ರೇಯಾಂಕ ಪಾಟೀಲ್* ಭವಿಷ್ಯದ ತಾರೆ ಎಂದು ಗುರುತಿಸಿಕೊಂಡಿರುವ ಕನ್ನಡತಿ ಶ್ರೇಯಾಂಕ ಪಾಟೀಲ್* ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿರುವ ಶ್ರೇಯಾಂಕ ಪಾಟೀಲ್
-ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ಮಾ.11): ಚೊಚ್ಚಲ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ನಿರೀಕ್ಷಿತ ಆರಂಭ ಪಡೆಯದಿದ್ದರೂ, ತಂಡದಲ್ಲಿರುವ ಕರ್ನಾಟಕದ 20 ವರ್ಷದ ಆಲ್ರೌಂಡರ್ ಶ್ರೇಯಾಂಕ ಪಾಟೀಲ್ ಸದ್ದು ಮಾಡುತ್ತಿದ್ದಾರೆ. ತಮ್ಮ ಆಕರ್ಷಕ ಪ್ರದರ್ಶನದ ಮೂಲಕ ‘ಭವಿಷ್ಯದ ಸ್ಟಾರ್’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೇಯಾಂಕ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಆರ್‌ಸಿಬಿ ತಂಡದ ಅನಾವರಣ ಕಾರ್ಯಕ್ರಮದ ವೇಳೆ ಶ್ರೇಯಾಂಕ ತಮ್ಮ ಕ್ರಿಕೆಟ್ ಪಯಣದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸೋದರ ಸಂಸ್ಥೆ ‘ಕನ್ನಡಪ್ರಭ’ದೊಂದಿಗೆ ಮನಬಿಚ್ಚಿ ಮಾತನಾಡಿದರು.
ಸ್ಥಳೀಯ ಕ್ರಿಕೆಟಿಗರಿಗೆ ತಂಡದಲ್ಲಿ ಜಾಗ ನೀಡುವುದಿಲ್ಲ ಎನ್ನುವ ಅಪವಾದ ಆರ್‌ಸಿಬಿ ಮೇಲಿದೆ. ಆದರೆ ಶ್ರೇಯಾಂಕರಂತಹ ಪ್ರತಿಭಾನ್ವಿತ ಆಟಗಾರ್ತಿಯನ್ನು ಆರ್‌ಸಿಬಿ ಕ್ರಿಕೆಟ್ ಜಗತ್ತಿಗೆ ಪರಿಚಯಿಸುತ್ತಿದೆ. ದೇಸಿ ಟೂರ್ನಿಗಳಲ್ಲಿ ಮಿಂಚಿದ್ದ ಶ್ರೇಯಾಂಕ, ಡಬ್ಲ್ಯುಪಿಎಲ್‌ನಲ್ಲಿ ಸಿಕ್ಕಿರುವ ಸೀಮಿತ ಅವಕಾಶದಲ್ಲಿ ತಮ್ಮಲ್ಲಿರುವ ಅಗಾಧ ಸಾಮರ್ಥ್ಯವನ್ನು ಪ್ರದರ್ಶಿಸುವ ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರಿನ ನಾಗರಬಾವಿಯ ರಾಜೇಶ್ ಪಾಟೀಲ್ ಎಂಬುವವರ ಪುತ್ರಿ. ರಾಜೇಶ್ ಹಿಂದೊಮ್ಮೆ ರಾಜ್ಯ ರಣಜಿ ತಂಡದ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರಂತೆ. ಕ್ರಿಕೆಟ್ ಅಕಾಡೆಮಿವೊಂದನ್ನು ಸಹ ನಡೆಸುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ಬಗ್ಗೆ ಪ್ರೀತಿ ಶ್ರೇಯಾಂಕಗೆ ರಕ್ತದಲ್ಲೇ ಇದೆ. ಆಟದ ಬಗ್ಗೆ ಪ್ರೀತಿ, ಅಭಿಮಾನ ಇಷ್ಟೇ ಇದ್ದರೆ ಸಾಕಾಗುವುದಿಲ್ಲವಲ್ಲ. ಹಂತ ಹಂತವಾಗಿ ಮೇಲೇರಲು ತಪ್ಪಸ್ಸೇ ಮಾಡಬೇಕಾಗುತ್ತದೆ.
8-9ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ ಶ್ರೇಯಾಂಕ, ಶುರುವಿನಲ್ಲಿ ಖುಷಿಗಷ್ಟೇ ಆಡುತ್ತಿದ್ದರಂತೆ. ‘ತಂದೆಯ ಅಕಾಡೆಮಿಗೆ ವಾರಾಂತ್ಯದಲ್ಲಿ ತರಬೇತಿಗೆ ಹೋಗುತ್ತಿದ್ದೆ. ಈ ವೇಳೆ ನಿಮ್ಮ ಮಗಳು ಮುಂದೊಂದು ದಿನ ಉತ್ತಮ ಕ್ರಿಕೆಟರ್ ಆಗಲೂಬಹುದು. ಕ್ರಿಕೆಟ್ ಕಲಿಸು ಎಂದು ನಮ್ಮ ತಂದೆಯ ಸ್ನೇಹಿತ ಪುಟ್ಟಸ್ವಾಮಿ ಎನ್ನುವವರು ಸಲಹೆ ನೀಡಿದರು. ಇದೇ ನನ್ನ ಕ್ರಿಕೆಟ್ ಜೀವನದ ಮೊದಲ ಟರ್ನಿಂಗ್ ಪಾಯಿಂಟ್’ ಎಂದು ಶ್ರೇಯಾಂಕ ನೆನಪಿನಾಳಕ್ಕಿಳಿದರು.
WPL 2023 ಮಹಿಳಾ ಪ್ರಿಮಿಯರ್ ಲೀಗ್‌ನಲ್ಲಿ ಆರ್‌ಸಿಸಿಬಿ ಮಹಿಳೆರಿಗೆ ಸತತ 4ನೇ ಸೋಲು!
ಶ್ರೇಯಾಂಕ 2025ರ ವೇಳೆಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಗುರಿ ಹೊಂದಿದ್ದಾರೆ. ಡಬ್ಲ್ಯುಪಿಎಲ್‌ನಲ್ಲಿನ ಅವರ ಪ್ರದರ್ಶನದಿಂದ ನಿರೀಕ್ಷೆಗೂ ಮೊದಲೇ ಅವರಿಗೆ ಭಾರತ ತಂಡದ ಬಾಗಿಲು ತೆರೆದರೆ ಅಚ್ಚರಿಯಿಲ್ಲ.
ಪ್ರಾಕ್ಟೀಸ್ಗಾಗಿ ತಂದೆ ಮನೆಯಿಂದ ದೂರ!
ಶ್ರೇಯಾಂಕ ಅಭ್ಯಾಸಕ್ಕಾಗಿ ಅನಗತ್ಯ ಓಡಾಟ ತಪ್ಪಿಸಲು ತಮ್ಮ ಮನೆ ಬಿಟ್ಟು ಯಲಹಂಕದಲ್ಲಿರುವ ಕೋಚಿಂಗ್ ಅಕಾಡೆಮಿ ಬಳಿ ಕಳೆದ 2 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಶ್ರೇಯಾಂಕಗೆ ಕೋಚ್ ಅರ್ಜುನ್ ದೇವ್ ಕೇವಲ ಕೋಚ್ ಮಾತ್ರವಲ್ಲ, ತಂದೆಯ ಸಮಾನರು ಕೂಡ. ‘ಕೋಚ್ ಅರ್ಜುನ್ ದೇವ್ ನನ್ನ ಪಾಲಿಗೆ ಸರ್ವಸ್ವ. ಅವರಿಗೆ ನನ್ನ ತಂದೆಯ ಸ್ಥಾನ ಕೊಟ್ಟಿದ್ದೇನೆ. ಅವರು ನನ್ನೆಲ್ಲಾ ಬೇಕು, ಬೇಡಗಳನ್ನು ಅವರೇ ಪೂರೈಸುತ್ತಿದ್ದಾರೆ. ಕೋಚಿಂಗ್, ಫಿಟ್ನೆಸ್, ಡಯಟ್ ಸೇರಿದಂತೆ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ. ಅವರನ್ನು ಸರ್ ಬದಲು ‘ಪಾ’ ಎಂದೇ ಕರೆಯುತ್ತೇನೆ’ ಎಂದು ಶ್ರೇಯಾಂಕ ಭಾವುಕರಾಗಿ ನುಡಿದರು.
ದೊಡ್ಡ ಮೆಟ್ಟಿಲುಗಳನ್ನು ಏರುತ್ತಿರುವ ಶ್ರೇಯಾಂಕ!
ಶ್ರೇಯಾಂಕ ಸತತವಾಗಿ ತಮ್ಮ ವಯಸ್ಸಿಗೂ ಮೀರಿದ ಗುರಿಗಳನ್ನು ಸಾಧಿಸುತ್ತಾ ಸಾಗಿದ್ದಾರೆ. ನಾನು ಅಪ್ಪಟ ವಿರಾಟ್ ಕೊಹ್ಲಿ ಫ್ಯಾನ್ ಎನ್ನುವ ಅವರು, ಕೊಹ್ಲಿಯಂತೆಯೇ ದೊಡ್ಡ ದೊಡ್ಡ ಗುರಿ ಸಾಧಿಸುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. 12ನೇ ವಯಸ್ಸಿಗೇ ಕರ್ನಾಟಕ ಅಂಡರ್-16 ತಂಡದಲ್ಲಿ ಸ್ಥಾನ ಪಡೆದ ಅವರು, 13ನೇ ವಯಸ್ಸಿಗೆ ಅಂಡರ್-19, 15ನೇ ವಯಸ್ಸಿಗೆ ಅಂಡರ್-23 ತಂಡವನ್ನು ಪ್ರತಿನಿಧಿಸಿದರು. 3 ವರ್ಷಗಳ ಹಿಂದೆ ರಾಜ್ಯ ಹಿರಿಯರ ತಂಡಕ್ಕೂ ಆಯ್ಕೆಯಾಗಿ ಅಲ್ಲಿಯೂ ಗಮನಾರ್ಹ ಪ್ರದರ್ಶನ ತೋರುತ್ತಿದ್ದಾರೆ. ಇತ್ತೀಚೆಗಷ್ಟೇ ಕೊನೆಗೊಂಡ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ 20 ವಿಕೆಟ್ ಕಿತ್ತು, ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಭಾರತ ‘ಎ’ ತಂಡವನ್ನೂ ಶ್ರೇಯಾಂಕ ಪ್ರತಿನಿಧಿಸಿದ್ದಾರೆ.
ಲಕ್ಕಿ ನಂಬರ್ನಲ್ಲೇ ಆರ್ಸಿಬಿಗೆ ಬಿಕರಿ!
2002ರ ಜುಲೈ 31ರಂದು ಹುಟ್ಟಿದ ಶ್ರೇಯಾಂಕಗೆ 317 ಲಕ್ಕಿ ನಂಬರ್. ಹರಾಜು ಪಟ್ಟಿಯಲ್ಲೂ ಅವರಿಗೆ ಇದೇ ನಂಬರ್ ಸಿಕ್ಕಿತ್ತು. ಆದರೆ ಯಾವುದಾದರೂ ತಂಡಕ್ಕೆ ಹರಾಜಾಗುವ ಒಂದಿಷ್ಟು ಭರವಸೆಯೂ ಇಲ್ಲದಿದ್ದಾಗ ಆರ್ಸಿಬಿಯೇ ಅವರನ್ನು 10 ಲಕ್ಷ ರು. ಖರೀದಿಸಿತು. ಇದರ ಶಾಕ್ನಿಂದ ಹೊರಬರಲಾಗದೆ ಇಡೀ ದಿನ ಊಟ, ನೀರು ಮುಟ್ಟಿಲ್ಲ ಎನ್ನುತ್ತಾರೆ ಶ್ರೇಯಾಂಕ.
