ವಿಶ್ವಕಪ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಬರುವ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಜಯ್ ಶಾ..!
13ನೇ ಆವೃತ್ತಿಯ ಸಂಪೂರ್ಣ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇದೇ ಮೊದಲ ಬಾರಿಗೆ ಭಾರತ ಆತಿಥ್ಯ ವಹಿಸಿದೆ. ಜಗತ್ತಿನ 10 ತಂಡಗಳು ಪಾಲ್ಗೊಂಡಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಿ ನವೆಂಬರ್ 19ರ ವರೆಗೆ ನಡೆಯಲಿದೆ. ಬೆಂಗಳೂರು ಸೇರಿ ಭಾರತದ ಒಟ್ಟು 10 ನಗರಗಳು, ಒಟ್ಟು 48 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಅಹಮದಾಬಾದ್(ಅ.05): ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಸೋತ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ನಡೆಸುತ್ತಿದೆ. ಇದೀಗ ಕ್ರಿಕೆಟ್ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ತೆರಳುವ ಪ್ರೇಕ್ಷಕರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುಡ್ ನ್ಯೂಸ್ ನೀಡಿದ್ದು, ಎಲ್ಲಾ ಸ್ಟೇಡಿಯಂಗಳಲ್ಲೂ ಉಚಿತವಾಗಿ ಶುದ್ದ ಕುಡಿಯುವ ನೀರು ವಿತರಿಸುವುದಾಗಿ ಖಚಿತಪಡಿಸಿದ್ದಾರೆ.
ಇದೀಗ ಈ ಕುರಿತಂತೆ ಟ್ವೀಟ್ ಮಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದೇವೆ. ಇದೇ ಸಂದರ್ಭದಲ್ಲಿ ನಾವು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುವುದಾಗಿ ತಿಳಿಸುವುದಕ್ಕೆ ಹೆಮ್ಮೆಪಡುತ್ತೇವೆ. ನಾವೆಲ್ಲರೂ ಸೇರಿ ಈ ವಿಶ್ವಕಪ್ ಸ್ಮರಣೀಯವಾಗಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
13ನೇ ಆವೃತ್ತಿಯ ಸಂಪೂರ್ಣ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಇದೇ ಮೊದಲ ಬಾರಿಗೆ ಭಾರತ ಆತಿಥ್ಯ ವಹಿಸಿದೆ. ಜಗತ್ತಿನ 10 ತಂಡಗಳು ಪಾಲ್ಗೊಂಡಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಿ ನವೆಂಬರ್ 19ರ ವರೆಗೆ ನಡೆಯಲಿದೆ. ಬೆಂಗಳೂರು ಸೇರಿ ಭಾರತದ ಒಟ್ಟು 10 ನಗರಗಳು, ಒಟ್ಟು 48 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಹೈದರಾಬಾದ್ ಹೊರತುಪಡಿಸಿ ಉಳಿದೆಲ್ಲಾ ನಗರಗಳಲ್ಲಿ ತಲಾ 5 ಪಂದ್ಯಗಳು ನಡೆಯಲಿದ್ದು, ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣ 3 ಪಂದ್ಯಗಳಿಗೆ ವೇದಿಕೆಯಾಗಲಿದೆ.
ICC World Cup 2023: ಇಂಗ್ಲೆಂಡ್ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ..!
46 ದಿನ, 48 ಪಂದ್ಯ: 46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಫೈನಲ್ ಸೇರಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ. ಈ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನೆರಡು ತಂಡಗಳಾದ ಶ್ರೀಲಂಕಾ ಹಾಗೂ ನೆದರ್‌ಲೆಂಡ್ಸ್ ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿವೆ.
ಭಾರತಕ್ಕೆ 9 ನಗರಗಳಲ್ಲಿ ಪಂದ್ಯ
ಭಾರತ ಲೀಗ್ ಹಂತದ 9 ಪಂದ್ಯಗಳನ್ನು 9 ವಿವಿಧ ಕ್ರೀಡಾಂಗಣಲ್ಲಿ ಆಡಲಿದೆ. ತಂಡವು ಲೀಗ್ ಹಂತದಲ್ಲಿ ಆಡಲು ಅಂದಾಜು 8,400 ಕಿ.ಮೀ. ಪ್ರಯಾಣಿಸಿದೆ. ಇದು ಟೂರ್ನಿಯಲ್ಲಿ ಆಡುವ ಬೇರೆಲ್ಲಾ ತಂಡಗಳಿಗೆ ಹೋಲಿಸಿದರೆ ಅತಿಹೆಚ್ಚು ಎನಿಸಿದೆ. ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿರುವ ಭಾರತ, ಬಳಿಕ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನು ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಆಡಲಿದೆ. ಅಕ್ಟೋಬರ್ 11ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ, ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶ, ಅಕ್ಟೋಬರ್ 22ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್, ಅಕ್ಟೋಬರ್ 29ರಂದು ಲಖನೌನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಬಳಿಕ ನವೆಂಬರ್ 2ರಂದು ಅರ್ಹತಾ ಸುತ್ತಿನಿಂದ ಬಂದ ತಂಡ(ಕ್ವಾಲಿಫೈಯರ್ 2)ದ ವಿರುದ್ಧ ಮುಂಬೈ, ನವೆಂಬರ್ 5ರಂದು ಕೋಲ್ಕತಾದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನವೆಂಬರ್ 11ರಂದು ಮತ್ತೊಂದು ಕ್ವಾಲಿಫೈಯರ್ ತಂಡ (ಕ್ವಾಲಿಫೈಯರ್ 1)ದ ವಿರುದ್ಧ ಬೆಂಗಳೂರಲ್ಲಿ ಸೆಣಸಾಡಲಿದೆ.
ಐಸಿಸಿ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ; ಇಲ್ಲಿದೆ ನೋಡಿ ಟೂರ್ನಿಯ ಕಂಪ್ಲೀಟ್ ಡೀಟೈಲ್ಸ್
ಟೂರ್ನಿ ಮಾದರಿ ಹೇಗೆ?: ಟೂರ್ನಿ ಕಳೆದ ಬಾರಿಯಂತೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ತಂಡ ಇತರ 9 ತಂಡಗಳ ವಿರುದ್ಧ ತಲಾ 1 ಬಾರಿ ಸೆಣಸಾಡಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಟೂರ್ನಿಯ 42 ಪಂದ್ಯಗಳು ಹಗಲು-ರಾತ್ರಿ ಹಾಗೂ ಇನ್ನುಳಿದ 6 ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. 2 ಪಂದ್ಯಗಳು ನಡೆಯಲಿರುವ ದಿನ ಮೊದಲ ಪಂದ್ಯ ಬೆಳಗ್ಗೆ 10.30ಕ್ಕೆ, 2ನೇ ಪಂದ್ಯ ಮಧ್ಯಾಹ್ನ 2ಕ್ಕೆ ಆರಂಭಗೊಳ್ಳಲಿದೆ. ಒಂದೇ ಪಂದ್ಯವಿರುವ ದಿನ ಪಂದ್ಯ ಮಧ್ಯಾಹ್ನ 2ಕ್ಕೆ ಶುರುವಾಗಲಿದೆ.