ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋತಿದ್ದರಿಂದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಈ ಸೋಲು ಗ್ರೂಪ್ 'ಎ'ಯ ಲೆಕ್ಕಾಚಾರವನ್ನು ಸಂಪೂರ್ಣವಾಗಿ ಬದಲಿಸಿದ್ದು, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಗ್ರೂಪ್ 'ಬಿ'ಯ ತಂಡಗಳ ಸೆಮಿಫೈನಲ್ ಅರ್ಹತೆ ಸಾಧ್ಯತೆ ಇಲ್ಲಿದೆ.
ಮ್ಯಾಂಚೆಸ್ಟರ್ (ಜೂ.23): ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ 18ನೇ ಪಂದ್ಯದಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ಟೂರ್ನಿಯಲ್ಲಿ ಇದುವರೆಗೆ ಸೋಲದೇ ವೀರಾವೇಶ ಪ್ರದರ್ಶಿಸುತ್ತಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಸೋಲಿನ ರುಚಿ ಉಣಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಗ್ರೂಪ್ 'ಎ' ನ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ನೀಡಿದ್ದ 158/7 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಇಡೀ ಗ್ರೂಪ್‌ನ ಲೆಕ್ಕಾಚಾರವನ್ನು ಉಲ್ಟಾ-ಪಲ್ಟಾ ಮಾಡಿದೆ. ಈ ಸೋಲಿನಿಂದಾಗಿ ಭಾರತ ತಂಡದ ಸೆಮಿಫೈನಲ್ ಹಾದಿ ಕಠಿಣವಾಗಿದ್ದು, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಪ್ರಸ್ತುತ ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ಐರ್ಲೆಂಡ್ ತಂಡಗಳು ಅಧಿಕೃತವಾಗಿ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿವೆ (Eliminated). ಹಾಗಿದ್ದರೆ ಸದ್ಯದ ಅಂಕಪಟ್ಟಿ ಮತ್ತು ಉಳಿದ ತಂಡಗಳ ಸೆಮಿಫೈನಲ್ ಅರ್ಹತೆಯ ರೋಚಕ ಲೆಕ್ಕಾಚಾರಗಳು (Scenarios) ಹೇಗಿವೆ ನೋಡೋಣ:
ಗ್ರೂಪ್ 'ಎ' (Group A) ಲೆಕ್ಕಾಚಾರಗಳು
1. ಭಾರತ (India)
ಉಳಿದಿರುವ ಪಂದ್ಯಗಳು: ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧ.
ಭಾರತ ಸೆಮಿಫೈನಲ್ ತಲುಪಬೇಕಿದ್ದರೆ:
ಸಾಧ್ಯತೆ-1: ಭಾರತ ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಬೇಕು ಮತ್ತು ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಒಂದನ್ನು ಸೋಲಬೇಕು.
ಸಾಧ್ಯತೆ 2: ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿ, ಆಸ್ಟ್ರೇಲಿಯಾ ವಿರುದ್ಧ ಸೋತರೆ (ಅಂದರೆ ಒಟ್ಟು 6 ಅಂಕಗಳು), ಇತ್ತ ದಕ್ಷಿಣ ಆಫ್ರಿಕಾ ಕೂಡ ತನ್ನ ಒಂದು ಪಂದ್ಯದಲ್ಲಿ ಸೋಲಬೇಕು (ಅವರೂ 6 ಅಂಕ ಗಳಿಸುತ್ತಾರೆ). ಆಗ ನೆಟ್ ರನ್ ರೇಟ್ (NRR) ಆಧಾರದಲ್ಲಿ ಭಾರತ ಮುಂಚೂಣಿಯಲ್ಲಿದ್ದರೆ ಸೆಮಿಫೈನಲ್ ಪ್ರವೇಶಿಸಬಹುದು.
ಸಾಧ್ಯತೆ 3: ಭಾರತ ತಂಡ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಗೆದ್ದು, ಇತ್ತ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು ಸೋಲಿಸಿ, ದಕ್ಷಿಣ ಆಫ್ರಿಕಾ ತನ್ನ ಎರಡೂ ಪಂದ್ಯಗಳನ್ನು ಗೆದ್ದರೆ; ಮೂರೂ ತಂಡಗಳು (ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ) ತಲಾ 8 ಅಂಕಗಳೊಂದಿಗೆ ಸಮಬಲ ಸಾಧಿಸುತ್ತವೆ. ಆಗ ನೆಟ್ ರನ್ ರೇಟ್ ಆಧಾರದಲ್ಲಿ ಅಗ್ರ ಎರಡು ತಂಡಗಳು ಸೆಮಿಗೆ ಹೋಗಲಿವೆ. ಸದ್ಯ ದಕ್ಷಿಣ ಆಫ್ರಿಕಾಕ್ಕಿಂತ ಭಾರತ ಉತ್ತಮ NRR ಹೊಂದಿದೆ.
2. ಆಸ್ಟ್ರೇಲಿಯಾ (Australia)
ಉಳಿದಿರುವ ಪಂದ್ಯಗಳು: ಪಾಕಿಸ್ತಾನ ಮತ್ತು ಭಾರತ ವಿರುದ್ಧ.
ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಬೇಕಿದ್ದರೆ
ಸಾಧ್ಯತೆ 1: ತನ್ನ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲುವುದು.
ಸಾಧ್ಯತೆ 2: ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸುವುದು.
ಒಂದು ವೇಳೆ 8 ಅಂಕಗಳೊಂದಿಗೆ ಮೂರು ತಂಡಗಳ ನಡುವೆ ಟೈ ಉಂಟಾದರೂ, ಆಸ್ಟ್ರೇಲಿಯಾ ಪ್ರಸ್ತುತ ಅತ್ಯುತ್ತಮ ನೆಟ್ ರನ್ ರೇಟ್ (+4.391) ಹೊಂದಿರುವುದರಿಂದ ಸುರಕ್ಷಿತ ಸ್ಥಾನದಲ್ಲಿದೆ.
3. ದಕ್ಷಿಣ ಆಫ್ರಿಕಾ (South Africa)
ಉಳಿದಿರುವ ಪಂದ್ಯಗಳು: ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ವಿರುದ್ಧ.
ದಕ್ಷಿಣ ಆಫ್ರಿಕಾ ಸೆಮಿಫೈನಲ್ ತಲುಪಬೇಕಿದ್ದರೆ:
ಸಾಧ್ಯತೆ 1: ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆದ್ದು, ಇತ್ತ ಆಸ್ಟ್ರೇಲಿಯಾ ತಂಡ ಭಾರತವನ್ನು ಸೋಲಿಸಬೇಕು.
ಸಾಧ್ಯತೆ 2: ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ ಒಂದನ್ನು ಸೋತು 6 ಅಂಕಗಳಿಗೆ ಸೀಮಿತವಾಗಬೇಕು ಮತ್ತು ದಕ್ಷಿಣ ಆಫ್ರಿಕಾ ತನ್ನ ಪಂದ್ಯವನ್ನು ದೊಡ್ಡ ಮಾರ್ಜಿನ್‌ನಲ್ಲಿ ಗೆದ್ದು, ಭಾರತಕ್ಕಿಂತ ಉತ್ತಮ NRR ಪಡೆದುಕೊಳ್ಳಬೇಕು.
ಒಂದು ವೇಳೆ ಮೂರು ತಂಡಗಳ ನಡುವೆ 8 ಅಂಕಗಳ ಟೈ ಉಂಟಾದರೆ, ಸದ್ಯಕ್ಕೆ ದಕ್ಷಿಣ ಆಫ್ರಿಕಾ ಅತ್ಯಂತ ಕಡಿಮೆ NRR (-0.546) ಹೊಂದಿರುವುದರಿಂದ ಅದಕ್ಕೆ ಕೊಂಚ ಹಿನ್ನಡೆಯಾಗಬಹುದು.
4. ಬಾಂಗ್ಲಾದೇಶ (Bangladesh)
ಉಳಿದಿರುವ ಪಂದ್ಯಗಳು: ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ.
ಬಾಂಗ್ಲಾದೇಶ ಸೆಮಿಫೈನಲ್ ತಲುಪಬೇಕಿದ್ದರೆ:
ಸಾಧ್ಯತೆ 1: ಉಳಿದ ಎರಡೂ ಪಂದ್ಯಗಳನ್ನು ಗೆಲ್ಲುವುದು. ಆಗ ಭಾರತ-ಆಸ್ಟ್ರೇಲಿಯಾ ಪಂದ್ಯದ ಫಲಿತಾಂಶ ಏನೇ ಆದರೂ ಬಾಂಗ್ಲಾ ನೇರವಾಗಿ ಕ್ವಾಲಿಫೈ ಆಗುತ್ತದೆ.
ಸಾಧ್ಯತೆ 2: ಭಾರತವನ್ನು ಸೋಲಿಸಿ, ದಕ್ಷಿಣ ಆಫ್ರಿಕಾ ವಿರುದ್ಧ ಸೋಲಬೇಕು. ತದನಂತರ ದಕ್ಷಿಣ ಆಫ್ರಿಕಾ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಸೋಲಬೇಕು. ಆಗ ಬಾಂಗ್ಲಾ, ದಕ್ಷಿಣ ಆಫ್ರಿಕಾ ಮತ್ತು ಭಾರತ ಮೂರೂ 6 ಅಂಕಗಳನ್ನು ಹೊಂದಲಿವೆ (ಭಾರತ ಆಸೀಸ್ ವಿರುದ್ಧ ಗೆದ್ದಲ್ಲಿ). ಆಗ NRR ಮೂಲಕ ಗ್ರೂಪ್ 'ಎ' ನಿಂದ ಆಸ್ಟ್ರೇಲಿಯಾ ಜೊತೆ ಎರಡನೇ ತಂಡವಾಗಿ ಬಾಂಗ್ಲಾ ಸೆಮಿಗೆ ಹೋಗಬಹುದು.
ಗ್ರೂಪ್ 'ಬಿ' (Group B) ಲೆಕ್ಕಾಚಾರಗಳು
5. ಇಂಗ್ಲೆಂಡ್ (England)
ಉಳಿದಿರುವ ಪಂದ್ಯಗಳು: ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ.
ಇಂಗ್ಲೆಂಡ್ ಸೆಮಿಫೈನಲ್ ತಲುಪಬೇಕಿದ್ದರೆ:
ಸಾಧ್ಯತೆ 1: ಉಳಿದಿರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದನ್ನು ಗೆಲ್ಲುವುದು.
ಸಾಧ್ಯತೆ 2: ಒಂದು ವೇಳೆ ಇಂಗ್ಲೆಂಡ್ ಸೋತರೂ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳು ತಮ್ಮ ಉಳಿದ ಪಂದ್ಯಗಳನ್ನು ಗೆದ್ದರೆ; ಇಂಗ್ಲೆಂಡ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಲಾ 6 ಅಂಕಗಳನ್ನು ಪಡೆಯುತ್ತವೆ. ಆಗ NRR ಆಧಾರದ ಮೇಲೆ ಇಂಗ್ಲೆಂಡ್ ಕ್ವಾಲಿಫೈ ಆಗಬಹುದು.
6. ವೆಸ್ಟ್ ಇಂಡೀಸ್ (West Indies)
ಉಳಿದಿರುವ ಪಂದ್ಯಗಳು: ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧ.
ವೆಸ್ಟ್ ಇಂಡೀಸ್ ಸೆಮಿಫೈನಲ್ ತಲುಪಬೇಕಿದ್ದರೆ:
ಸಾಧ್ಯತೆ-1: ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲುವುದು. ಒಂದು ವೇಳೆ ಎರಡೂ ಪಂದ್ಯಗಳನ್ನು ಸೋತರೆ ವಿಂಡೀಸ್ ಭವಿಷ್ಯ NRR ಮೇಲೆ ನಿರ್ಧಾರವಾಗುತ್ತದೆ.
ಸಾಧ್ಯತೆ-2: ವೆಸ್ಟ್ ಇಂಡೀಸ್ ಪಾಲಿಗೆ 3 ತಂಡಗಳ ನಡುವಿನ 6 ಅಂಕಗಳ ಟೈ ಅತ್ಯಂತ ಕೆಟ್ಟ ಸಾಧ್ಯತೆ ಆಗಿದೆ. ಒಂದು ವೇಳೆ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಎರಡೂ ಪಂದ್ಯ ಗೆದ್ದರೆ ವಿಂಡೀಸ್, ಶ್ರೀಲಂಕಾ, ನ್ಯೂಜಿಲೆಂಡ್ ತಲಾ 6 ಅಂಕ ಹೊಂದಲಿದ್ದು, NRR ಪರೀಕ್ಷೆ ಎದುರಿಸಬೇಕಾಗುತ್ತದೆ.
7. ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಸ್ಕಾಟ್ಲೆಂಡ್ (New Zealand, Sri Lanka, Scotland)
ಉಳಿದಿರುವ ಪಂದ್ಯಗಳು: ನ್ಯೂಜಿಲೆಂಡ್ V/s ಸ್ಕಾಟ್ಲೆಂಡ್, ಶ್ರೀಲಂಕಾ V/s ಐರ್ಲೆಂಡ್, ಶ್ರೀಲಂಕಾ V/s ಸ್ಕಾಟ್ಲೆಂಡ್, ಮತ್ತು ಇಂಗ್ಲೆಂಡ್ V/s ನ್ಯೂಜಿಲೆಂಡ್.
ಈ ಮೂರು ತಂಡಗಳು ಸೆಮಿಫೈನಲ್ ತಲುಪಬೇಕಿದ್ದರೆ:
ಈ ಮೂರೂ ತಂಡಗಳು ತಮ್ಮ ಉಳಿದ ಎರಡೂ ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕು. ಅದರೊಂದಿಗೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಸೋಲುವ ತಂಡವು ತನ್ನ ಮತ್ತೊಂದು ಪಂದ್ಯದಲ್ಲೂ ಸೋಲಲಿ ಎಂದು ಪ್ರಾರ್ಥಿಸಬೇಕು.
ಆಗ ಈ ಮೂರು ತಂಡಗಳು ಗರಿಷ್ಠ 6 ಅಂಕಗಳನ್ನು ತಲುಪಲಿದ್ದು, ಗ್ರೂಪ್ 'ಬಿ' ನ ಎರಡನೇ ಸೆಮಿಫೈನಲಿಸ್ಟ್ ಯಾರಾಗಲಿದ್ದಾರೆ ಎಂಬುದನ್ನು NRR ನಿರ್ಧರಿಸುತ್ತದೆ.
ಪ್ರಸ್ತುತ ಈ ಮೂರರಲ್ಲಿ ಶ್ರೀಲಂಕಾ ಅತ್ಯಂತ ಕನಿಷ್ಠ NRR (-1.913) ಹೊಂದಿದೆ.
ಒಂದು ವೇಳೆ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಸೋತ ತಂಡವು ತನ್ನ ಮತ್ತೊಂದು ಪಂದ್ಯವನ್ನು ಗೆದ್ದರೆ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಸ್ಕಾಟ್ಲೆಂಡ್ ಮೂರೂ ತಂಡಗಳು ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿವೆ.


