ಲಖನೌ(ಮಾ.20): ಏಕದಿನ ಸರಣಿಯಲ್ಲಿ ಸೋತ ಭಾರತ ಮಹಿಳಾ ಕ್ರಿಕೆಟ್‌ ತಂಡ, ಶನಿವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿ ಸರಣಿ ಗೆಲ್ಲಲು ಕಾತರಿಸುತ್ತಿದೆ. 

ಇಲ್ಲಿನ ಭಾರತ್ ರತ್ನ ಶ್ರೀ ಅಟಲ್‌ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್‌ ಮೈದಾನದಲ್ಲಿ ಶನಿವಾರ(ಮಾ.20)ದಂದು ಮೊದಲ ಪಂದ್ಯ ನಡೆಯಲಿದ್ದು, ಭಾರತದ ಮೇಲೆ ಹೆಚ್ಚಿನ ಒತ್ತಡವಿದೆ. ಏಕದಿನ ತಂಡದಲ್ಲಿ ಸ್ಥಾನ ಪಡೆಯುವ 17 ವರ್ಷದ ಶಫಾಲಿ ವರ್ಮಾ ಟಿ20 ಸರಣಿಗೆ ಆಯ್ಕೆಯಾಗಿದ್ದು, ಅವರ ಮೇಲೆ ನಿರೀಕ್ಷೆ ಇದೆ. 

ಕರ್ನಾಟಕದ ರಾಜೇಶ್ವರಿ, ಪ್ರತ್ಯೂಷಾ ಹಾಗೂ ಮೋನಿಕಾ ತಂಡದಲ್ಲಿದ್ದು, ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಹರ್ಮನ್‌ಪ್ರೀತ್‌ ಕೌರ್‌ ಗಾಯಗೊಂಡಿದ್ದು, ಸ್ಮೃತಿ ಮಂಧನಾ ತಂಡವನ್ನು ಮುನ್ನಡೆಸಲಿದ್ದಾರೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದು ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.

ಕೊನೆಯ ಪಂದ್ಯದಲ್ಲೂ ಸೋಲಿನ ಕಹಿಯುಂಡ ಮಿಥಾಲಿ ಪಡೆ

ಏಕದಿನ ಸರಣಿಯಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ಮಹಿಳಾ ತಂಡವು 1-4 ಅಂತರದಲ್ಲಿ ದಕ್ಷಿಣ ಆಫ್ರಿಕಾ ಎದುರು ಶರಣಾಗಿತ್ತು. ಹೀಗಾಗಿ ಮಂಧನಾ ನೇತೃತ್ವದ ಟಿ20 ತಂಡ ಹರಿಣಗಳ ಪಡೆಗೆ ತಿರುಗೇಟು ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 

ಪಂದ್ಯ ಆರಂಭ: ಸಂಜೆ 7ಕ್ಕೆ