ನವದೆಹಲಿ(ಏ.29): ಪ್ರತಿ ವರ್ಷ ಐಪಿಎಲ್‌ ಪ್ಲೇ ಆಫ್‌ ಪಂದ್ಯಗಳ ವೇಳೆ ನಡೆಸಲಾಗುತ್ತಿದ್ದ ಮಹಿಳಾ ಟಿ-20 ಚಾಲೆಂಜ್‌ಗೆ ಈ ವರ್ಷ ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ದೇಶಾದ್ಯಂತ ಕೋವಿಡ್‌-19 ಎರಡನೇ ಅಲೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಕೆಲ ದೇಶಗಳು ಈಗಾಗಲೇ ಭಾರತಕ್ಕೆ ವಿಮಾನ ಪ್ರಯಾಣ ರದ್ದುಗೊಳಿಸಿವೆ.

ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆಸ್ಪ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌ ಸೇರಿದಂತೆ ಹಲವು ರಾಷ್ಟ್ರಗಳ ಆಟಗಾರ್ತಿಯರು ಭಾರತಕ್ಕೆ ಪ್ರಯಾಣ ಬೆಳೆಸಲು ಉತ್ಸುಕರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳು ಈಗಾಗಲೇ ವಿಮಾನ ಸಂಚಾರ ಸ್ಥಗಿತಗೊಳಿಸಿವೆ.

ಭಾರತದ ಕೋವಿಡ್ ಸಂಕಷ್ಟಕ್ಕೆ ಮಿಡಿದ ಆಸೀಸ್‌ ಕ್ರಿಕೆಟಿಗ ಬ್ರೆಟ್‌ ಲೀ ಹೃದಯ

14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಈಗಾಗಲೇ ನಿಗದಿಯಾದ ವೇಳಾಪಟ್ಟಿಯಂತೆಯೇ ನಡೆಯಲಿದೆ. ಆದರೆ ಮೇ 24ರಿಂದ ಮೇ 30ರವರೆಗೆ 3 ತಂಡಗಳ ಮಹಿಳಾ ಟಿ20 ಚಾಲೆಂಜ್ ಟೂರ್ನಿ ನಡೆಯುವುದು ಅನುಮಾನ ಎನಿಸಿದೆ. ಮಹಿಳಾ ಟಿ20 ಚಾಲೆಂಜ್ ಟೂರ್ನಿಯ ಬಗ್ಗೆ ಈವರೆಗೂ ನಮಗ್ಯಾವ ಮಾಹಿತಿಯೂ ಇಲ್ಲ. ಹೀಗಾಗಿ ಈ ಟೂರ್ನಿ ನಡೆಯುತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲ ಎಂದು ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ತಿಳಿಸಿದ್ದಾರೆ.

ಮಹಿಳಾ ಟಿ20 ಚಾಲೆಂಜ್‌ನಲ್ಲಿ ಸೂಪರ್‌ನೋವಾಸ್‌, ಟ್ರಯಲ್‌ಬ್ಲೇಜರ್ಸ್‌ ಹಾಗೂ ವೆಲೊಸಿಟಿ ತಂಡಗಳು ಸೆಣಸಾಟ ನಡೆಸುತ್ತಿದ್ದವು ಎನ್ನುವುದನ್ನು ಸ್ಮರಿಸಬಹುದಾಗಿದೆ.