ಚೆನ್ನೈ(ಮಾ.20): ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು, ಸತತ 4ನೇ ಗೆಲುವು ದಾಖಲಿಸಿದೆ. 

ಶುಕ್ರವಾರ ನಡೆದ ಎಲೈಟ್‌ ‘ಇ’ ಗುಂಪಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಕರ್ನಾಟಕ ಸತತ 4ನೇ ಗೆಲುವು ದಾಖಲಿಸಿತು. ಇದರೊಂದಿಗೆ ತಂಡ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನಾಕೌಟ್‌ ಹಂತಕ್ಕೇರುವುದು ಬಹುತೇಕ ಖಚಿತವೆನಿಸಿದೆ.

ವೇದಾ ಕೃಷ್ಣಮೂರ್ತಿ ಆರ್ಭಟಕ್ಕೆ ಮಂಕಾದ ತಮಿಳುನಾಡು

ಮೊದಲು ಬ್ಯಾಟ್‌ ಮಾಡಿದ ಹಿಮಾಚಲ 50 ಓವರಲ್ಲಿ 8 ವಿಕೆಟ್‌ಗೆ 163 ರನ್‌ ಗಳಿಸಿತು. ಕರ್ನಾಟಕ 40.2 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಕರ್ನಾಟಕ ಪರ ಶುಭ ಎಸ್ ಅಜೇಯ 76 ರನ್‌ ಬಾರಿಸಿದರೆ, ವನಿತಾ ವಿ.ಆರ್‌ 41 ರನ್‌ ಗಳಿಸಿ ಮಿಂಚಿದರು. ಇನ್ನು ಬೌಲಿಂಗ್‌ನಲ್ಲಿ ರಾಮೇಶ್ವರಿ ಗಾಯಕ್ವಾಡ್‌ ಹಾಗೂ ಚಂದು ವಿ ತಲಾ 2 ವಿಕೆಟ್‌ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಕೋರ್‌:

ಹಿಮಾಚಲ 163/8

ಕರ್ನಾಟಕ 165/6