ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ರನ್ನರ್-ಅಪ್: ಟ್ರೋಫಿಗೆ ಮುತ್ತಿಟ್ಟ ಲಂಕಾ
ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಆತಿಥೇಯ ಶ್ರೀಲಂಕಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಭಾರತದ 8ನೇ ಬಾರಿ ಕಪ್ ಗೆಲ್ಲುವ ಕನಸು ಭಗ್ನವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ
ದಾಂಬುಲಾ: ಮಹಿಳಾ ಏಷ್ಯಾಕಪ್‌ನಲ್ಲಿ 8ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಭಾರತದ ಕನಸು ಭಗ್ನಗೊಂಡಿದೆ. ಶ್ರೀಲಂಕಾ ತಂಡ ಚೊಚ್ಚಲ ಬಾರಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯುದ್ದಕ್ಕೂ ಎದುರಾಳಿಗಳ ಮೇಲೆ ಅಧಿಪತ್ಯ ಸಾಧಿಸಿದ್ದ ಭಾರತದ ಮಹಿಳೆಯರು, ಟಿ20 ಟೂರ್ನಿಯ ಫೈನಲ್‌ನಲ್ಲಿ 8 ವಿಕೆಟ್ ಆಘಾತಕಾರಿ ಸೋಲನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್‌ಗೆ 165 ರನ್ ಕಲೆಹಾಕಿತು. ಪವರ್-ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೇ 44 ರನ್ ಗಳಿಸಿದ್ದ ತಂಡ ಬಳಿಕ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಶಫಾಲಿ ವರ್ಮಾ 16, ಉಮಾ ಚೆಟ್ರಿ 9, ನಾಯಕಿ ಹರ್ಮನ್‌ಪ್ರೀತ್ ಕೌರ್ 11 ರನ್‌ಗೆ ಔಟಾದರು.
ಆದರೆ ಮತ್ತೊಂದೆಡೆ ಲಂಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಸ್ಮೃತಿ ಮಂಧನಾ 47 ಎಸೆತಗಳಲ್ಲಿ 60 ರನ್ ಸಿಡಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗ್ಸ್ 16 ಎಸೆತಗಳಲ್ಲಿ 29, ರಿಚಾ ಘೋಷ್ 14 ಎಸೆತಗಳಲ್ಲಿ 30 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ಗಂಭೀರ್ ಕೋಚಿಂಗ್, ಸೂರ್ಯ ನಾಯಕತ್ವದಲ್ಲಿ ಭಾರತಕ್ಕೆ ಲಂಕಾ ವಿರುದ್ಧ ಸರಣಿ ಗೆಲುವು
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ ಆರಂಭಿಕ ಆಘಾತದ ಹೊರತಾಗಿಯೂ 18.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಜಯಬೇರಿ ಬಾರಿಸಿತು. ಚಾಮರಿ ಅಟ್ಟಪಟ್ಟು 43 ಎಸೆತಗಳಲ್ಲಿ 61 ರನ್ ಸಿಡಿಸಿ ತಂಡಕ್ಕೆ ಮತ್ತೆ ಆಪತ್ಬಾಂಧವರಾಗಿ ಮೂಡಿಬಂದರು. ಬಳಿಕ ಹರ್ಷಿತಾ ಸಮರವಿಕ್ರಮ(51 ಎಸೆತಗಳಲ್ಲಿ ಔಟಾಗದೆ 69), ಕವಿಶಾ ದಿಲ್ಹಾರಿ(16 ಎಸೆತಗಳಲ್ಲಿ 30) ಕೊನೆಯಲ್ಲಿ ಅಬ್ಬರಿಸಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟರು.
ಸ್ಕೋರ್: ಭಾರತ 20 ಓವರಲ್ಲಿ 165/6 (ಸ್ಮೃತಿ 60, ರಿಚಾ 30, ಜೆಮಿಮಾ 29, ಕವಿಶಾ 2-36), ಶ್ರೀಲಂಕಾ 18.4 ಓವರ್‌ಗಳಲ್ಲಿ 167/2 (ಹರ್ಷಿತಾ 69*, ಚಾಮರಿ 61, ದೀಪ್ತಿ 1-30)
ಪಂದ್ಯಶ್ರೇಷ್ಠ: ಹರ್ಷಿತಾ ಸಮರವಿಕ್ರಮ, ಟೂರ್ನಿಯ ಶ್ರೇಷ್ಠ: ಚಾಮರಿ ಅಟ್ಟಪಟ್ಟು
5 ಬಾರಿ ಸೋಲು, 6ನೇ ಪ್ರಯತ್ನದಲ್ಲಿ ಟ್ರೋಫಿ
ಲಂಕಾ ತಂಡ ಈ ಮೊದಲು 5 ಬಾರಿ ಭಾರತದ ವಿರುದ್ಧವೇ ಫೈನಲ್‌ನಲ್ಲಿ ಸೋತು ಪ್ರಶಸ್ತಿ ತಪ್ಪಿಸಿಕೊಂಡಿತ್ತು. 2004, 2005, 2006, 2008 ಹಾಗೂ 2022ರಲ್ಲಿ ಫೈನಲ್‌ನಲ್ಲಿ ತಂಡ ಮುಗ್ಗರಿಸಿತ್ತು. ಆದರೆ ಈ ಬಾರಿ ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದೆ.
02ನೇ ಸೋಲು: ಭಾರತ ಮಹಿಳಾ ಏಷ್ಯಾಕಪ್ ಫೈನಲ್‌ನಲ್ಲಿ 2ನೇ ಬಾರಿ ಸೋಲನುಭವಿಸಿತು. 2018ರಲ್ಲಿ ಬಾಂಗ್ಲಾದೇಶ ವಿರುದ್ಧ ಸೋತು ರನ್ನರ್-ಅಪ್ ಆಗಿತ್ತು.