ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಶಫಾಲಿ ವರ್ಮಾ ಅವರ ಆಲ್‌ರೌಂಡ್ ಪ್ರದರ್ಶನ ಹಾಗೂ ದೀಪ್ತಿ ಶರ್ಮಾ ಅವರ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಮುಂಬೈ: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕಾ ಎದುರು ಫೈನಲ್‌ನಲ್ಲಿ 52 ರನ್ ಅಂತರದ ಗೆಲುವು ಸಾಧಿಸಿದ ಭಾರತ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಇದು ಭಾರತ ಮಹಿಳಾ ಕ್ರಿಕೆಟ್ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಾಧನೆ ಎನಿಸಿಕೊಂಡಿದೆ.

ಗೆಲ್ಲಲು 299 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಎಚ್ಚರಿಕೆಯ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕಿ ಲಾರಾ ವೋಲ್ವಾರ್ಟ್‌ ಹಾಗೂ ತಜ್ಮಿನ್ ಬ್ರಿಟ್ಸ್‌ 9.3 ಓವರ್‌ಗಳಲ್ಲಿ 51 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಮನ್‌ಜೋತ್ ಕೌರ್ ಯಶಸ್ವಿಯಾದರು. ಇಲ್ಲದ ರನ್ ಕದಿಯಲು ಹೋಗಿ ತಜ್ಮಿನ್ ರನೌಟ್ ಆದರು. ಇದರ ಬೆನ್ನಲ್ಲೇ ಅನ್ನೇಕೆ ಬಾಷ್ ಆರು ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿ ಶ್ರೀಚರಣಿಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಲಾರಾ ವೋಲ್ವಾರ್ಟ್‌ ಹಾಗೂ ಲುಸ್ 52 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Scroll to load tweet…

ಭಾರತ ಪರ ಶಿಸ್ತು ಬದ್ದ ದಾಳಿ ನಡೆಸಿದ ಆಲ್ರೌಂಡರ್ ದೀಪ್ತಿ ಶರ್ಮಾ 39 ರನ್ ನೀಡಿ 5 ವಿಕೆಟ್ ಪಡೆದರು. ಇದಕ್ಕೂ ಮೊದಲು ಬ್ಯಾಟಿಂಗ್‌ನಲ್ಲೂ ಅರ್ಧಶತಕ ಸಿಡಿಸಿ ಮಿಂಚಿದರು.

ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟ ಶಫಾಲಿ ವರ್ಮಾ:

ಲುಸ್ ಹಾಗೂ ಲಾರಾ ವೋಲ್ವಾರ್ಟ್‌ ಜೋಡಿ ಅರ್ಧಶತಕದ ಜತೆಯಾಟವಾಡಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಈ ವೇಳೆ ನಾಯಕಿ ಹರ್ಮನ್‌ಪ್ರೀತ್ ಕೌರ್, ಪಾರ್ಟ್ ಟೈಮ್ ಬೌಲರ್ ಶಫಾಲಿ ವರ್ಮಾ ಬೌಲಿಂಗ್ ಮಾಡಲು ಚೆಂಡನ್ನು ನೀಡಿದರು. ಶಫಾಲಿ ತಾವೆಸೆದ ಮೊದಲ ಓವರ್‌ನಲ್ಲೇ ಲುಸ್ ಹಾಗೂ ಎರಡನೇ ಓವರ್‌ನಲ್ಲಿ ಮಾರಿಝಾನ್ ಕಾಪ್ ವಿಕೆಟ್ ಕಬಳಿಸುವ ಮೂಲಕ ಪಂದ್ಯ ಭಾರತದ ಪರ ವಾಲುವಂತೆ ಮಾಡಿದರು.

ನಾಯಕಿ ಲಾರಾ ವೋಲ್ವಾರ್ಟ್‌ ಏಕಾಂಗಿ ಹೋರಾಟ ವ್ಯರ್ಥ

ಒಂದು ಕಡೆ ಆಗಾಗ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಲಾರಾ ವೋಲ್ವಾರ್ಟ್‌ ಆಕರ್ಷಕ ಶತಕ ಸಿಡಿಸಿ ಭಾರತೀಯ ಬೌಲರ್‌ಗಳನ್ನು ಕಾಡಿದರು. ಲಾರಾ ವೋಲ್ವಾರ್ಟ್‌ ಕ್ರೀಸ್‌ನಲ್ಲಿ ಇರುವವರೆಗೂ ಭಾರತೀಯ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಸೆಮಿಫೈನಲ್‌ನಲ್ಲಿಯೂ ಲಾರಾ ವೋಲ್ವಾರ್ಟ್‌ ಆಕರ್ಷಕ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆರಂಭಿಕರಾಗಿ ಕಣಕ್ಕಿಳಿದ ಲಾರಾ ವೋಲ್ವಾರ್ಟ್‌ 98 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 101 ರನ್ ಸಿಡಿಸಿ ದೀಪ್ತಿ ಶರ್ಮಾಗೆ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಮೊದಲ ವಿಕೆಟ್‌ಗೆ 17.4 ಓವರ್‌ಗಳಲ್ಲಿ 104 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ಸ್ಮೃತಿ ಮಂಧನಾ 45 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಸ್ಪೋಟಕ ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ 78 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 87 ರನ್ ಸಿಡಿಸಿದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಜಿಮಿಮಾ ರೋಡ್ರಿಗ್ಸ್(24), ನಾಯಕಿ ಹರ್ಮನ್‌ಪ್ರೀತ್ ಕೌರ್(20) ಹಾಗೂ ದೀಪ್ತಿ ಶರ್ಮಾ(58) ರನ್ ಸಿಡಿಸುವ ಮೂಲಕ ಬೃಹತ್ ಮೊತ್ತ ಕಲೆಹಾಕಲು ನೆರವಾದರು.