ಮಹಿಳಾ ಟಿ20 ವಿಶ್ವಕಪ್: ಮತ್ತೆ ಅಬ್ಬರಿಸಿದ ಶೆಫಾಲಿ; ಲಂಕಾ ಎದುರು ಭಾರತಕ್ಕೆ ಸುಲಭ ಜಯ
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಲಂಕಾ ವಿರುದ್ಧ ಭಾರತ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
"
ಮೆಲ್ಬೊರ್ನ್(ಫೆ.29): ರಾಧಾ ಯಾದವ್ ಚಾಣಾಕ್ಷ ಬೌಲಿಂಗ್ ಹಾಗೂ ಶೆಫಾಲಿ ವರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರು ಭಾರತ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿದೆ. ಇದರೊಂದಿಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಹರ್ಮನ್‌ಪ್ರೀತ್ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಇನ್ನು ಲಂಕಾ ಆಡಿದ 3 ಪಂದ್ಯಗಳಲ್ಲೂ ಸೋಲಿನ ಕಹಿಯುಂಡಿದೆ.
ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ 114 ರನ್ ಗುರಿ ನೀಡಿದ ಶ್ರೀಲಂಕಾ ತಂಡ
ಶ್ರೀಲಂಕಾ ನೀಡಿದ್ದ 114 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಭರ್ಜರಿ ಆರಂಭವನ್ನು ಪಡೆಯಿತು. ಮೊದಲ ವಿಕೆಟ್‌ಗೆ ಸ್ಮತಿ ಮಂಧನಾ ಹಾಗೂ ಶೆಫಾಲಿ ವರ್ಮಾ ಜೋಡಿ 34 ರನ್‌ಗಳ ಜತೆಯಾಟವಾಡಿದರು. ಮಂಧನಾ 12 ಎಸೆತಗಳಲ್ಲಿ 3 ಬೌಂಡರಿ ಸಹಿತ 17 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 15 ರನ್ ಸಿಡಿಸಿ ಪೆವಿಲಿಯನ್ ಸೇರಿದರು.
ಮತ್ತೆ ಅಬ್ಬರಿಸಿದ ಶೆಫಾಲಿ: ಟಿ20 ವಿಶ್ವಕಪ್ ಟೂರ್ನಿಯುದ್ಧಕ್ಕೂ ಸ್ಪೋಟಕ ಬ್ಯಾಟಿಂಗ್ ನಡೆಸುತ್ತಿರುವ 16 ವರ್ಷದ ಶೆಫಾಲಿ ವರ್ಮಾ ಲಂಕಾ ವಿರುದ್ಧವೂ ಅಬ್ಬರಿಸಿ ಬೊಬ್ಬಿರಿದರು. ಕೇವಲ 34 ಎಸೆತಗಳನ್ನು ಎದುರಿಸಿದ ಶೆಫಾಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ರನೌಟ್ ಆದರು. ಇನ್ನು ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ ಹಾಗೂ ದೀಪ್ತಿ ಶರ್ಮಾ ತಲಾ 15 ರನ್ ಬಾರಿಸುವ ಮೂಲಕ ಇನ್ನೂ 32 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.
ಇದಕ್ಕೂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ದೀಪ್ತಿ ಶರ್ಮಾ ಶಾಕ್ ನೀಡಿದರು. ನಾಯಕಿ ಚಮಾರಿ ಅಟ್ಟಪಟ್ಟು(33) ಹಾಗೂ ಕವೀಶಾ ದಿಲ್ಹಾರಿ(25) ಹೊರತುಪಡಿಸಿ ಉಳಿದ್ಯಾವ ಆಟಗಾರ್ತಿಯರು ಭಾರತೀಯ ಬೌಲರ್‌ಗಳ ಎದುರು ಪ್ರತಿರೋಧ ತೋರಲಿಲ್ಲ. ರಾಧಾ ಯಾದವ್ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ರಾಜೇಶ್ವರಿ ಗಾಯಕ್ವಾಡ್ 18 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಇನ್ನು ದೀಪ್ತಿ ಶರ್ಮಾ, ಶಿಖಾ ಪಾಂಡೆ ಹಾಗೂ ಪೂನಂ ಯಾದವ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಫೆಬ್ರವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ