ವಿಂಬಲ್ಡನ್‌ನಲ್ಲಿ ಟೆನಿಸ್ ಪಂದ್ಯ ವೀಕ್ಷಿಸಿ ಬರ್ತ್‌ಡೇ ಸಂಭ್ರಮ ಆಚರಿಸಿದ ಎಂಎಸ್‌ಡಿ!
ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಮೂಲಕ ಮೂರು ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕನಾಗಿರುವ ಎಂಎಸ್ ಧೋನಿ, ಗುರುವಾರ ತಮ್ಮ 41ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು. ವಿಂಬಲ್ಡನ್‌ನಲ್ಲಿ ರಾಫೆಲ್ ನಡಾಲ್ ಅವರ ಪಂದ್ಯವನ್ನು ವೀಕ್ಷಿಸುವ ಮೂಲಕ ಧೋನಿ ತಮ್ಮ ಜನ್ಮದಿನವನ್ನು ಲಂಡನ್‌ನಲ್ಲಿ ಆಚರಿಸಿಕೊಂಡಿದ್ದಾರೆ.
ಲಂಡನ್ (ಜುಲೈ 7): ತಮ್ಮ ಚಾಣಾಕ್ಷ ತಂತ್ರಗಳು ಮತ್ತು ಮೈದಾನದಲ್ಲಿ ಕಠಿಣ ಸಮಯದಲ್ಲಿ ಶಾಂತವಾಗಿ ಯೋಚನೆ ಮಾಡುವ ಎಂಎಸ್ ಧೋನಿ (MS Dhoni), ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ (International Cricket) ಜೀವನವನ್ನು ಮುಕ್ತಾಯಗೊಳಿಸಿರಬಹುದು. ಆದರೆ, ಅವರ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಗುರುವಾರ ತಮ್ಮ 41ನೇ ವರ್ಷದ ಜನ್ಮದಿನವನ್ನು ಎಂಎಸ್ ಧೋನಿ ವಿಂಬಲ್ಡನ್‌ನಲ್ಲಿ (Wimbledon) ಟೆನಿಸ್ (Tennis) ಪಂದ್ಯ ನೋಡುವ ಮೂಲಕ ಆಚರಿಸಿದರು.
ತಮ್ಮ ವರ್ಚಸ್ಸನ್ನು ಇಂದಿಗೂ ಉಳಿಸಿಕೊಂಡಿರುವ ಎಂಎಸ್ ಧೋನಿ, ವಿಂಬಲ್ಡನ್‌ನಲ್ಲಿ ರಾಫೆಲ್ ನಡಾಲ್ ಅವರ ಪಂದ್ಯವನ್ನು ಬುಧವಾರ ವೀಕ್ಷಣೆ ಮಾಡಿದರು. ಬೂದು ಬಣ್ಣದ ಬ್ಲೇಜರ್ ಧರಿಸಿ ವಿಂಬಲ್ಡನ್‌ನ ಸ್ಟ್ಯಾಂಡ್‌ನಲ್ಲಿ ಕುಳಿತಿರುವ ಎಂಎಸ್ ಧೋನಿ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತೀಯ ಐಕಾನ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ ಎನ್ನುವ ಕ್ಯಾಪ್ಷನ್‌ನಲ್ಲಿ ಎಂಎಸ್ ಧೋನಿ ಚಿತ್ರವನ್ನು ಸ್ವತಃ ವಿಂಬಲ್ಡನ್ ಕೂಡ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ, "ಯೆಲ್ಲೋ ಅಲ್! ಲಯನ್, ಗೋಟ್‌ಅನ್ನು ವೀಕ್ಷಿಸುತ್ತಿದೆ' ಎಂದು ಇದೇ ಚಿತ್ರವನ್ನು ಪೋಸ್ಟ್ ಮಾಡಿದೆ. ಟೀಮ್ ಇಂಡಿಯಾದ ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಕೂಡ ಸ್ಟ್ಯಾಂಡ್‌ನಲ್ಲಿದ್ದರು.
ಧೋನಿ ಪತ್ನಿ ಸಾಕ್ಷಿಯ ಸರ್‌ಪ್ರೈಸ್: ಜನ್ಮದಿನದ ವಿಶೇಷ ಸಂದರ್ಭದಲ್ಲಿ ಕ್ರಿಕೆಟಿಗನ ಪತ್ನಿ ಸಾಕ್ಷಿ ಕೂಡ ಸರ್‌ಪ್ರೈಸ್ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕ್ಷಿ ಸಾಕಷ್ಟು ಸಕ್ರಿಯರಾಗಿದ್ದು, ಧೋನಿಗೆ ಅಚ್ಚರಿಯನ್ನೂ ಬರ್ತ್‌ಡೇ ದಿನ ನೀಡಿದ್ದಾರೆ. ಲಂಡನ್‌ನಲ್ಲಿ ಧೋನಿಗೆ ಸರ್‌ಪ್ರೈಸ್ ಬರ್ತ್‌ಡೇ ಪಾರ್ಟಿ ನೀಡಿದ ವಿಡಿಯೋವನ್ನು ಸಾಕ್ಷಿ ಹಂಚಿಕೊಂಡಿದ್ದಾರೆ. ಆಪ್ತ ಸ್ನೇಹಿತರು ಹಾಗೂ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಈ ಸಮಾರಂಭದಲ್ಲಿದ್ದರು.
ಬೂದಿ ಬಣ್ಣದ ಪ್ಯಾಂಟ್ ಹಾಗೂ ಜಾಕೆಟ್ ಧರಿಸಿರುವ ಎಂಎಸ್ ಧೋನಿ ಎದುರು ಸಾಕಷ್ಟು ಕೇಕ್‌ಗಳಿದ್ದು ಅದನ್ನು ಧೋನಿ ಕಟ್ ಮಾಡುವ ವಿಡಿಯೋ ಇದಾಗಿದೆ. ಇದೇ ವೇಳೆ ತಮ್ಮ ಹೆಸರು ಬರೆದಿರುವ ಕೇಕ್ ಅನ್ನು ಎಂಎಸ್ ಧೋನಿ ಕಟ್ ಮಾಡಿದ್ದಾರೆ. ಈ ರೀಲ್‌ಗೆ ಹ್ಯಾಪಿ ಬರ್ತ್ ಡೇ ಎನ್ನುವ ಕ್ಯಾಪ್ಶನ್‌ನೊಂದಿಗೆ ಹಾರ್ಟ್ ಇಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋಗೆ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ದಿಗ್ಗಜ ನಾಯಕನಿಗೆ ಕಾಮೆಂಟ್ ಸೆಕ್ಷನ್‌ನಲ್ಲಿ ಜನ್ಮದಿನದ ಶುಭ ಕೋರಿದ್ದಾರೆ. ರಣವೀರ್ ಸಿಂಗ್ ಕ್ರಿಕೆಟಿಗನಿಗೆ ಶುಭ ಹಾರೈಸಿದ್ದು, "ಲವ್ ಯು, ಮಾಹಿ! ನಿಮಗೆ ಜನ್ಮದಿನದ ಶುಭಾಶಯಗಳು! ಪ್ರೀತಿ ಮತ್ತು ಶಕ್ತಿ!" ಎಂದು ಬರೆದಿದ್ದಾರೆ. ಗಾಯಕ ಗುರು ರಾಂಧವಾ "ಒನ್ ಆಂಡ್ ಓನ್ಲಿ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು." ಎಂದು ಬರೆದಿದ್ದಾರೆ.
ಇದನ್ನೂ ಓದಿ: ಮರದ ಕೆಳಗೆ ಕೂರುವ 'ವೈದ್ಯ'ನ ಬಳಿ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಎಂಎಸ್ ಧೋನಿ!
ಜುಲೈ 4 ರಂದು ತಮ್ಮ 12ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುವ ಸಲುವಾಗಿ ಎಂಎಸ್ ಧೋನಿ ತಮ್ಮ ಪತ್ನಿಯೊಂದಿಗೆ ಲಂಡನ್‌ಗೆ ತೆರಳಿದ್ದರು. ಸಾಕ್ಷಿ ಅವರಈ ವಿಡಿಯೋ ಈಗಾಗೇ 2 ಮಿಲಿಯನ್‌ಗೂ ಅಧಿಕ ವೀವ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: IPL 2022 ಬ್ರ್ಯಾಂಡ್ ಸಿಎಸ್ಕೆ ಅಲ್ಲ, ಬ್ರ್ಯಾಂಡ್ ಎಂಎಸ್ ಧೋನಿ..!
ಟೀಮ್ ಇಂಡಿಯಾ ನಾಯಕನಾಗಿ ಎಂಎಸ್ ಧೋನಿ ಮುನ್ನಡೆಸಿದ 72 ಟೆಸ್ಟ್ ಪಂದ್ಯದಲ್ಲಿ ಭಾರತ 41 ರಲ್ಲಿ ಗೆಲುವು ಕಂಡಿದ್ದರೆ, 200 ಏಕದಿನ ಪಂದ್ಯಗಳಲ್ಲಿ 110 ಹಾಗೂ 60 ಟಿ20 ಪಂದ್ಯಗಳ ಪೈಕಿ 27ರಲ್ಲಿ ಗೆಲುವು ಸಾಧಿಸಿತ್ತು. 2004 ರಿಂದ 2019ರ ಅವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ, 17,226 ರನ್ ಬಾರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ಧೋನಿಯ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.