* ಸಿಎಬಿ ಜತೆ ಹಿರಿಯ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ ತಿಕ್ಕಾಟ* ತಮ್ಮನ್ನು ಸಂಪರ್ಕಿಸದೆ ರಣಜಿ ತಂಡಕ್ಕೆ ಆಯ್ಕೆ ನಡೆಸಿದ್ದಕ್ಕೆ ಸಾಹ ಆಕ್ಷೇಪ* ನಾನು ಬೇರೆ ರಾಜ್ಯ ತಂಡಕ್ಕೆ ವಲಸೆ ಹೋಗುವ ಎಚ್ಚರಿಕೆ ನೀಡಿದ ಸಾಹ

ಕೋಲ್ಕತಾ(ಮೇ.19): ಬಂಗಾಳ ಕ್ರಿಕೆಟ್‌ ಸಂಸ್ಥೆ(ಸಿಎಬಿ) ಹಾಗೂ ಭಾರತದ ಹಿರಿಯ ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಾಹ (Wriddhiman Saha vs CAB) ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ತಂಡದ ಪರ ರಣಜಿ ಟ್ರೋಫಿ ನಾಕೌಟ್‌ ಪಂದ್ಯಗಳನ್ನು ಆಡುವುದಿಲ್ಲ ಎಂದು ಸಾಹ ಪಟ್ಟು ಹಿಡಿದಿದ್ದಾರೆ. ಕೆಲ ತಿಂಗಳುಗಳ ಹಿಂದೆ ಶ್ರೀಲಂಕಾ ವಿರುದ್ಧದ ಸರಣಿಗೆ ಅವರನ್ನು ಭಾರತ ತಂಡದಿಂದ ಕೈಬಿಟ್ಟಾಗ ಸಿಟ್ಟಾಗಿದ್ದ ಸಾಹ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ (Sourav Ganguly) ವಿರುದ್ಧ ಹರಿಹಾಯ್ದಿದ್ದರು. ಆ ವೇಳೆ ಸಿಎಬಿ ಜಂಟಿ ಕಾರ‍್ಯದರ್ಶಿ ದೇಬಾಬ್ರತಾ ದಾಸ್‌, ಸಾಹ ವಿರುದ್ಧ ಕಿಡಿಕಾರಿದ್ದರು. 

ಈಗ ತಮ್ಮನ್ನು ಸಂಪರ್ಕಿಸದೆ ರಣಜಿ ತಂಡಕ್ಕೆ (Bengal Ranji Cricket Team) ಆಯ್ಕೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಾಹ, ತಮ್ಮ ಬಳಿ ದಾಸ್‌ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ನೀಡಿ ನಾನು ಬೇರೆ ರಾಜ್ಯ ತಂಡಕ್ಕೆ ವಲಸೆ ಹೋಗುತ್ತೇನೆ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಸಾಹ ಜೊತೆ ಸಿಎಬಿ ಅಧ್ಯಕ್ಷ ಅಭಿಷೇಕ್‌ ದಾಲ್ಮೀಯಾ ಮಾತನಾಡಿದ್ದು, ಅವರನ್ನು ಸಮಾಧಾನಪಡಿಸುವ ಯತ್ನ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವೃದ್ದಿಮಾನ್ ಸಾಹ 2007ರ ನವೆಂಬರ್ 04ರಂದು ಹೈದರಾಬಾದ್‌ ವಿರುದ್ದ ರಣಜಿ ಟ್ರೋಫಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ ವೃದ್ದಿಮಾನ್ ಸಾಹ ಒಟ್ಟು 122 ಪ್ರಥಮ ದರ್ಜೆ ಹಾಗೂ 102 ಲಿಸ್ಟ್‌ 'ಎ' ಪಂದ್ಯಗಳನ್ನಾಡಿದ್ದಾರೆ. ಸದ್ಯ ವೃದ್ದಿಮಾನ್ ಸಾಹ ಸದ್ಯ 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನೂತನ ತಂಡವಾದ ಗುಜರಾತ್ ಟೈಟಾನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿರುವ ವೃದ್ದಿಮಾನ್ ಸಾಹ, 8 ಪಂದ್ಯಗಳನ್ನಾಡಿ 123.24ರ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ನಲ್ಲಿ 281 ರನ್‌ ಬಾರಿಸಿದ್ದಾರೆ. ಗುಜರಾತ್ ಟೈಟಾನ್ಸ್‌ ತಂಡವು 2022ನೇ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಐರ್ಲೆಂಡ್‌ ಟಿ20: ಭಾರತ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್‌ ಕೋಚ್‌?

ನವದೆಹಲಿ: ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ) ಮುಖ್ಯಸ್ಥ, ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಮುಂದಿನ ತಿಂಗಳು ನಡೆಯಲಿರುವ ಐರ್ಲೆಂಡ್‌ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡದ ಕೋಚ್‌ ಆಗಿ ಕಾರ‍್ಯನಿರ್ವಹಿಸುವ ಸಾಧ್ಯತೆ ಇದೆ. ಇದೇ ಸಮಯದಲ್ಲಿ ಭಾರತ ಟೆಸ್ಟ್‌ ತಂಡ ಇಂಗ್ಲೆಂಡ್‌ನಲ್ಲಿ ಜುಲೈ 1ರಿಂದ ಆರಂಭಗೊಳ್ಳಲಿರುವ ಏಕೈಕ ಟೆಸ್ಟ್‌ಗಾಗಿ ಅಭ್ಯಾಸ ನಡೆಸಲಿದ್ದು, ಪ್ರಧಾನ ಕೋಚ್‌ ರಾಹುಲ್‌ ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಹೀಗಾಗಿ ಜೂನ್ 26, 28ರಂದು ಐರ್ಲೆಂಡ್‌ ವಿರುದ್ಧ ಟಿ20 ವೇಳೆ ತಂಡಕ್ಕೆ ಲಕ್ಷ್ಮಣ್‌ ಮಾರ್ಗದರ್ಶನ ನೀಡಬಹುದು ಎಂದು ಮೂಲಗಳು ತಿಳಿಸಿವೆ.

ಉಮ್ರಾನ್‌ ಶ್ರೇಷ್ಠ ಬೌಲರ್‌ ಆಗಲಿದ್ದಾರೆ: ಚಮಿಂಡ ವಾಸ್‌

ಮುಂಬೈ: 15ನೇ ಆವೃತ್ತಿ ಐಪಿಎಲ್‌ನಲ್ಲಿ ತಮ್ಮ ವೇಗದ ಬೌಲಿಂಗ್‌ನಿಂದ ಎಲ್ಲರ ಗಮನ ಸೆಳೆಯುತ್ತಿರುವ ಸನ್‌ರೈಸ​ರ್ಸ್‌ ಉಮ್ರಾನ್‌ ಮಲಿಕ್‌ ಬಗ್ಗೆ ಶ್ರೀಲಂಕಾದ ಮಾಜಿ ವೇಗಿ ಚಮಿಂಡ ವಾಸ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಅವರು ಭಾರತದ ಶ್ರೇಷ್ಠ ಬೌಲರ್‌ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. 

IPL 2022: ಆರ್‌ಸಿಬಿಗಿಂದು ಟೈಟಾನ್ಸ್‌ ಅಗ್ನಿಪರೀಕ್ಷೆ..!

‘ಉಮ್ರಾನ್‌ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದಾರೆ. ಕಳೆದ ಐಪಿಎಲ್‌ನಲ್ಲೂ ನಾನು ಅವರ ಆಟ ನೋಡಿದ್ದೆ. ಟಿ20ಯಲ್ಲಿ ಬಹುಮುಖ್ಯ ಎನಿಸಿರುವ ಸ್ಥಿರ ಹಾಗೂ ನಿಖರ ಬೌಲಿಂಗ್‌ ಪ್ರದರ್ಶನ ತೋರುತ್ತಿದ್ದು, ಭಾರತದ ಶ್ರೇಷ್ಠ ಬೌಲರ್‌ ಆಗಲಿದ್ದಾರೆ’ ಎಂದು ವಾಸ್‌ ಹೇಳಿದ್ದಾರೆ.