* ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂದು ಬಲಿಷ್ಠ ಗುಜರಾತ್ ಟೈಟಾನ್ಸ್* ಪ್ಲೇ ಆಫ್‌ಗೇರಲು ಆರ್‌ಸಿಬಿಗಿದು ಮಾಡು ಇಲ್ಲವೇ ಮಡಿ ಪಂದ್ಯ* ಈಗಾಗಲೇ ಪ್ಲೇ ಆಫ್ ಖಚಿತಪಡಿಸಿಕೊಂಡಿರುವ ಗುಜರಾತ್ ಟೈಟಾನ್ಸ್
ಮುಂಬೈ(ಮೇ.19): 15ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2022) ಆರ್‌ಸಿಬಿ ಪ್ಲೇ-ಆಫ್ ಪ್ರವೇಶಕ್ಕೆ ಬೇಕಿರುವ ಸೂತ್ರ ಸರಳವಾಗಿದೆ. ಗುರುವಾರ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ಗೆದ್ದು, ಮೇ 21ಕ್ಕೆ ಮುಂಬೈ ವಿರುದ್ಧ ಡೆಲ್ಲಿ ಸೋತರಷ್ಟೇ ಆರ್‌ಸಿಬಿ ಪ್ಲೇ-ಆಫ್ ಟಿಕೆಟ್ ಪಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore ) ತಂಡದ ಅಳಿವು ಉಳಿವಿನ ಪ್ರಶ್ನೆ ಇಂದಿನ ಫಲಿತಾಂಶದ ಜತೆಗೆ ಡೆಲ್ಲಿ ಹಾಗೂ ಮುಂಬೈ ಫಲಿತಾಂಶದ ಮೇಲೂ ಅವಲಂಬಿತವಾಗಿದೆ.
ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲುವುದು ಆರ್‌ಸಿಬಿಗೆ (RCB) ಸುಲಭದ ಕೆಲಸವಲ್ಲ. 13 ಪಂದ್ಯಗಳಲ್ಲಿ 10ರಲ್ಲಿ ಗೆದ್ದು ಈಗಾಗಲೇ ಪ್ಲೇ-ಆಫ್‌ನ ಕ್ವಾಲಿಫೈಯರ್-1 ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ಅರ್ಹತೆ ಪಡೆದಿದೆ. ಗುಜರಾತ್‌ಗೆ ಸೋಲುಣಿಸಬೇಕಿದ್ದರೆ, ಆರ್‌ಸಿಬಿಯ ‘ಬಿಗ್ 3’ ವಿರಾಟ್ ಕೊಹ್ಲಿ (Virat Kohli), ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಪೈಕಿ ಒಬ್ಬರು ದೊಡ್ಡ ಇನ್ನಿಂಗ್ಸ್ ಆಡಬೇಕಿದೆ. ಜೊತೆಗೆ ಕಳೆದ ಪಂದ್ಯದಲ್ಲಿ 4 ಓವರಲ್ಲಿ 64 ರನ್ ಚಚ್ಚಿಸಿಕೊಂಡಿದ್ದ ಜೋಶ್ ಹೇಜಲ್‌ವುಡ್ ಲಯಕ್ಕೆ ಮರಳಬೇಕಿದೆ.
‘ಬಿಗ್ 3’ ಜೊತೆಗೆ ಬ್ಯಾಟಿಂಗ್‌ನಲ್ಲಿ ಆರ್‌ಸಿಬಿಗೆ ದಿನೇಶ್ ಕಾರ್ತಿಕ್ ಕೊಡುಗೆಯೂ ಪ್ರಮುಖ ಎನಿಸಲಿದೆ. ಆದರೆ ಕಾರ್ತಿಕ್ ವಿರುದ್ಧ ಟೈಟಾನ್ಸ್ ರಶೀದ್ ಖಾನ್‌ರನ್ನು ದಾಳಿಗಿಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಟಿ20ಯಲ್ಲಿ ಕಾರ್ತಿಕ್‌ಗೆ 28 ಎಸೆತ ಬೌಲ್ ಮಾಡಿರುವ ರಶೀದ್ ಕೇವಲ 30 ರನ್ ಬಿಟ್ಟುಕೊಟ್ಟು 3 ಬಾರಿ ಔಟ್ ಮಾಡಿದ್ದಾರೆ.
ಇನ್ನು ಬಹಳ ಲೆಕ್ಕಾಚಾರದೊಂದಿಗೆ ಫಾಫ್ ಡು ಪ್ಲೆಸಿಸ್ ಬೌಲಿಂಗ್ ನಿರ್ವಹಣೆ ಮಾಡಬೇಕಿದೆ. ಪ್ರಮುಖವಾಗಿ ಮೊಹಮದ್ ಸಿರಾಜ್‌ರನ್ನು ಮಧ್ಯ ಓವರ್‌ಗಳಲ್ಲಷ್ಟೇ ಬಳಸಿದರೆ ಉತ್ತಮ. ಈ ಆವೃತ್ತಿಯಲ್ಲಿ ಅವರು ಪವರ್-ಪ್ಲೇನಲ್ಲಿ 9.80 ಎಕಾನಮಿ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿದ್ದು, ಡೆತ್ ಓವರ್‌ಗಳಲ್ಲಿ 14.75ರ ಎಕಾನಮಿ ಹೊಂದಿದ್ದಾರೆ. ಆದರೆ ಮಧ್ಯ ಓವರ್‌ಗಳಲ್ಲಿ ಅಂದರೆ 7ರಿಂದ 16ನೇ ಓವರ್ ಅವಧಿಯಲ್ಲಿ ಸಿರಾಜ್‌ರ ಎಕಾನಮಿ ಕೇವಲ 6.27 ಇದೆ. ಲೆಗ್ ಸ್ಪಿನ್ನರ್ ವನಿಂದು ಹಸರಂಗ ತಂಡದ ಬೌಲಿಂಗ್ ಟ್ರಂಪ್ ಕಾರ್ಡ್ ಎನಿಸಿದ್ದಾರೆ.
IPL 2022: ಅಮೋಘ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ರಾಹುಲ್..!
ಇನ್ನು ಟೈಟಾನ್ಸ್ ಈ ಆವೃತ್ತಿಯಲ್ಲಿ 10 ತಂಡಗಳ ಪೈಕಿ ಅತಿಕಡಿಮೆ(59) ಸಿಕ್ಸರ್ ಸಿಡಿಸಿರುವ ತಂಡವೆನಿಸಿದ್ದು, ಅತಿಹೆಚ್ಚು ಬೌಂಡರಿ(210) ಗಳಿಸಿದೆ. ಈ ಅಂಶವನ್ನು ಆರ್‌ಸಿಬಿ ಗಮನದಲ್ಲಿಟ್ಟುಕೊಂಡು ತನ್ನ ರಣತಂತ್ರಗಳನ್ನು ಹೂಡಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ನಾಯಕ), ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರಾರ್, ಶಾಬಾಜ್ ಅಹಮ್ಮದ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್‌ವುಡ್.
ಗುಜರಾತ್: ಶುಭ್‌ಮನ್ ಗಿಲ್, ವೃದ್ದಿಮಾನ್ ಸಾಹ, ಮ್ಯಾಥ್ಯೂ ವೇಡ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಲಾಕಿ ಫಗ್ರ್ಯೂಸನ್/ ಅಲ್ಜೆರಿ ಜೋಸೆಫ್, ಮೊಹಮ್ಮದ್ ಶಮಿ, ಯಶ್ ದಯಾಳ್.
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
