ಜೋಹಾನ್ಸ್‌ಬರ್ಗ್‌(ಡಿ.12): ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿಕಾಕ್‌ ಶುಕ್ರವಾರ ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಡಿ ಕಾಕ್‌ಗೆ ನಾಯಕನ ಪಟ್ಟನೀಡಲಾಗಿದೆ. 

2020-21ರ ಋುತುವಿಗೆ ಮಾತ್ರ ಡಿ ಕಾಕ್‌ ನಾಯಕರಾಗಿರಲಿದ್ದು, ಮುಂದಿನ ತಿಂಗಳಲ್ಲಿ ಹೊಸ ನಾಯಕನನ್ನು ನೇಮಿಸಲಾಗುತ್ತದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಘೋಷಿಸಿದೆ. ಡಿ ಕಾಕ್‌ ಈಗಾಗಲೇ ಏಕದಿನ ಹಾಗೂ ಟಿ20 ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಇದೇ ಡಿಸೆಂಬರ್ 26ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಹರಿಣಗಳ ಪಡೆಯನ್ನು ಕ್ವಿಂಟನ್ ಡಿಕಾಕ್ ಮುನ್ನಡೆಸಲಿದ್ದಾರೆ. ಇದಾದ ಬಳಿಕ ಪಾಕಿಸ್ತಾನದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯಾಡಲಿದೆ. ಇದಾದ ನಂತರ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ದವೂ ಟೆಸ್ಟ್ ಸರಣಿಯ ಅಗ್ನಿ ಪರೀಕ್ಷೆಯನ್ನು ಎದುರಿಸಲಿದೆ.

ತವರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಮಾರಕ ವೇಗಿ ಕಗಿಸೋ ರಬಾಡ ಹಾಗೂ ಡ್ವೇನ್ ಪ್ರಿಟೋರಿಯಸ್‌ಗೆ ವಿಶ್ರಾಂತಿ ನೀಡಲಾಗಿದೆ. ಒಂದು ವೇಳೆ ಈ ಇಬ್ಬರು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡರೆ ಜನವರಿ 03ರಿಂದ ಜೋಹಾನ್ಸ್‌ಬರ್ಗ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಳ್ಳುವ ವಿಶ್ವಾಸವನ್ನು ಆಯ್ಕೆ ಸಮಿತಿ ವ್ಯಕ್ತಪಡಿಸಿದೆ.

ಆಸೀಸ್‌ ಯುವ ಆಟಗಾರರ ಕನಸಿಗೆ ಟೀಂ ಇಂಡಿಯಾ ವೇಗಿಗಳಿಂದ ತಣ್ಣೀರು..!

ಕ್ವಿಂಟನ್ ಡಿಕಾಕ್ ಇದುವರೆಗೂ 8 ಏಕದಿನ ಹಾಗೂ 11 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಡಿಕಾಕ್‌ಗೆ ಹೆಚ್ಚಿನ ಅನುಭವವಿಲ್ಲ. ಈ ಹಿಂದೆ ತೆಂಬಾ ಬವುಮಾ ಇಲ್ಲವೇ ಏಯ್ಡನ್ ಮಾರ್ಕ್‌ರಮ್ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಬಹುದು ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಈ ಇಬ್ಬರು ಆಟಗಾರರು ಇದೀಗ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಶ್ರೀಲಂಕಾ ವಿರುದ್ದದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಹೀಗಿದೆ ನೋಡಿ:

ಕ್ವಿಂಟನ್ ಡಿಕಾಕ್(ನಾಯಕ), ತೆಂಬಾ ಬವುಮಾ, ಏಯ್ಡನ್ ಮಾರ್ಕ್‌ರಮ್, ಫಾಫ್‌ ಡುಪ್ಲೆಸಿಸ್, ಬ್ಯುರನ್ ಹೆಂಡ್ರಿಕ್ಸ್‌, ಡೀನ್ ಏಲ್ಗರ್, ಕೇಶವ್ ಮಹರಾಜ್, ಲುಂಗಿ ಎಂಗಿಡಿ, ರಾಸ್ಸಿ ವ್ಯಾನ್ ಡರ್ ಡುಸೆನ್, ಸರೇಲ್ ಎರ್ವಿ, ಏನ್ರಿಚ್ ನೊಕಿಯೇ, ಗ್ಲೆಂಟನ್ ಸ್ಟರ್ಮನ್, ವಿಯಾನ್ ಮುಲ್ಡರ್, ಕೀಗಾನ್ ಪೀಟರ್ಸನ್, ಕೈಲ್ ವೆರ್ನೇನೆ.