ಆಸೀಸ್ ಯುವ ಆಟಗಾರರ ಕನಸಿಗೆ ಟೀಂ ಇಂಡಿಯಾ ವೇಗಿಗಳಿಂದ ತಣ್ಣೀರು..!
ಟೀಂ ಇಂಡಿಯಾ ಎದುರು ಟೆಸ್ಟ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಕನಸಿನಲ್ಲಿದ್ದ ಆಸ್ಟ್ರೇಲಿಯಾದ ಯುವ ಆಟಗಾರರ ಕನಸಿಗೆ ಭಾರತ ತಂಡದ ವೇಗಿಗಳು ತಣ್ಣೀರೆರಚಿದ್ದಾರೆ. ಯಾಕೆ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಸಿಡ್ನಿ(ಡಿ.12): ಭಾರತ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ವಿಶ್ವಾಸದಲ್ಲಿದ್ದ ಆಸ್ಪ್ರೇಲಿಯಾದ ಇಬ್ಬರು ಯುವ ಆಟಗಾರರಿಗೆ ಭಾರತೀಯ ವೇಗಿಗಳು ಆಘಾತ ನೀಡಿದ್ದಾರೆ.
ಮೊದಲ ಅಭ್ಯಾಸ ಪಂದ್ಯದಲ್ಲಿ ಯುವ ವೇಗಿ ಕಾರ್ತಿಕ್ ತ್ಯಾಗಿ ಎಸೆದ ಬೌನ್ಸರ್ ಹೆಲ್ಮೆಟ್‌ಗೆ ಬಡಿದ ಕಾರಣ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಪುಕೊವ್ಸಿಕ್ 2ನೇ ಪಂದ್ಯದಿಂದ ಹೊರಬಿದ್ದಿದ್ದರು. ಡೇವಿಡ್ ವಾರ್ನರ್ ಮೊದಲ ಟೆಸ್ಟ್‌ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಪುಕೊವ್ಸಿಕ್‌ಗೆ ಅವಕಾಶ ಸಿಗುವುದು ಖಚಿತವಾಗಿತ್ತು. ಆದರೆ ಐಸಿಸಿ ನಿಯಮದ ಪ್ರಕಾರ ಕನ್‌ಕಷನ್‌ಗೆ ಒಳಗಾದ ಆಟಗಾರ ಕನಿಷ್ಠ 10ರಿಂದ 14 ದಿನಗಳ ಕಾಲ ವಿಶ್ರಾಂತಿಯಲ್ಲಿರಬೇಕು. ಹೀಗಾಗಿ ಪುಕೊವ್ಸಿಕ್ ಟೆಸ್ಟ್‌ಗೆ ಪಾದಾರ್ಪಣೆ ಮಾಡಲು ಮತ್ತಷ್ಟು ಸಮಯ ಕಾಯಬೇಕಿದೆ.
ಬುಮ್ರಾ ಆಕರ್ಷಕ ಅರ್ಧಶತಕ; ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾರತ ಮೇಲುಗೈ..!
ಇದೇ ವೇಳೆ ಶುಕ್ರವಾರ ಆರಂಭಗೊಂಡ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಆಲ್ರೌಂಡರ್ ಕೆಮರೂನ್ ಗ್ರೀನ್ ಗಾಯಗೊಂಡು ಪಂದ್ಯದಿಂದ ಹೊರಬಿದ್ದರು. ಬ್ಯಾಟಿಂಗ್ ವೇಳೆ ಜಸ್ಪ್ರೀತ್ ಬುಮ್ರಾ ಬಾರಿಸಿದ ಚೆಂಡು ಗ್ರೀನ್ ತಲೆಗೆ ಬಡಿಯಿತು. ಅವರು ಮೊದಲ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳುವುದು ಅನುಮಾನವಾಗಿದೆ.