ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಫೋಟಕ ಶತಕ ಸಿಡಿಸಿ ದಾಖಲೆ ಬರೆದಿದ್ದ ಬಿಹಾರದ 14 ವರ್ಷದ ವೈಭವ್ ಸೂರ್ಯವಂಶಿ, ಮಣಿಪುರದ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಸ್ವೀಕರಿಸಲು ದೆಹಲಿಗೆ ತೆರಳಿದ್ದು, ಬಳಿಕ ಅವರು ಅಂಡರ್-19 ವಿಶ್ವಕಪ್ ಶಿಬಿರಕ್ಕೆ ಸೇರಲಿದ್ದಾರೆ.
ಪಾಟ್ನಾ: ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದ ಬಿಹಾರದ 14 ವರ್ಷದ ವೈಭವ್ ಸೂರ್ಯವಂಶಿ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಬಿಹಾರ ತಂಡದಿಂದ ಹೊರಗುಳಿದಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಪ್ಲೇಟ್ ಲೀಗ್ ಪಂದ್ಯದಲ್ಲಿ ಮಣಿಪುರದ ವಿರುದ್ಧದ ಇಂದಿನ ಪಂದ್ಯದಲ್ಲಿ ಬಿಹಾರದ ಪ್ಲೇಯಿಂಗ್ XIನಲ್ಲಿ ವೈಭವ್ ಇರಲಿಲ್ಲ.
ಮಣಿಪುರ ಎದುರಿನ ಪಂದ್ಯದಿಂದ ವೈಭವ್ ಸೂರ್ಯವಂಶಿ ಹೊರಗುಳಿದಿದ್ದೇಕೆ?
ವಿಜಯ್ ಹಜಾರೆ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಸ್ಪೋಟಕ ಶತಕ ಸಿಡಿಸಿ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ ಇಂದು ನಡೆಯುತ್ತಿರುವ ಮಣಿಪುರ ಎದುರಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ನಮ್ಮ ದೇಶದಲ್ಲಿ ಮಕ್ಕಳಿಗೆ ನೀಡುವ ಅತಿದೊಡ್ಡ ಪ್ರಶಸ್ತಿಯಾದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಸ್ವೀಕರಿಸಲು ದೆಹಲಿಗೆ ಹೋಗಿದ್ದರಿಂದ ವೈಭವ್‌ಗೆ ಇಂದು ಮಣಿಪುರದ ವಿರುದ್ಧದ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು ಎಂದು ವೈಭವ್ ಅವರ ಕೋಚ್ ಮನೀಶ್ ಓಜಾ ಹೇಳಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ಪ್ರಶಸ್ತಿ ವಿಜೇತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಶೌರ್ಯ, ಕಲೆ, ಸಂಸ್ಕೃತಿ, ಪರಿಸರ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 5-18 ವರ್ಷ ವಯಸ್ಸಿನ ಮಕ್ಕಳಿಗೆ ದೇಶವು ನೀಡುವ ಅತ್ಯುನ್ನತ ಗೌರವವೇ ಪ್ರಧಾನಮಂತ್ರಿ ಬಾಲ ಪುರಸ್ಕಾರ.
ಅಂಡರ್-19 ಭಾರತ ತಂಡ ಕೂಡಿಕೊಳ್ಳಲಿರುವ ವೈಭವ್ ಸೂರ್ಯವಂಶಿ:
ಪ್ರಶಸ್ತಿ ಸ್ವೀಕರಿಸಿ ಮರಳಿದ ನಂತರ ವೈಭವ್ ಅಂಡರ್-19 ಟಿ20 ವಿಶ್ವಕಪ್‌ಗಾಗಿ ಭಾರತೀಯ ತಂಡದ ಶಿಬಿರಕ್ಕೆ ತೆರಳಲಿದ್ದಾರೆ. ಮುಂದಿನ ವರ್ಷ ಜನವರಿ 15 ರಿಂದ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಅಂಡರ್-19 ಟಿ20 ವಿಶ್ವಕಪ್ ನಡೆಯಲಿದೆ. ಅರುಣಾಚಲ ಪ್ರದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ವೈಭವ್ ಕೇವಲ 84 ಎಸೆತಗಳಲ್ಲಿ 190 ರನ್ ಗಳಿಸಿ ದಾಖಲೆ ಬರೆದಿದ್ದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವ ದಾಖಲೆ ಮತ್ತು ವೇಗವಾಗಿ 150 ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡಿದ್ದಾರೆ. ವಿಜಯ್ ಹಜಾರೆಗೂ ಮುನ್ನ ನಡೆದ ಅಂಡರ್-19 ಏಷ್ಯಾ ಕಪ್‌ನಲ್ಲಿ ವೈಭವ್ ಯುಎಇ ವಿರುದ್ಧ 171 ರನ್ ಗಳಿಸಿದ್ದರು.


