15 ವರ್ಷದ ಯುವ ಆಟಗಾರ ವೈಭವ್‌ ಸೂರ್ಯವಂಶಿಯ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್‌, ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆರ್‌ಸಿಬಿ ನೀಡಿದ್ದ 202 ರನ್‌ಗಳ ಗುರಿಯನ್ನು ವೈಭವ್ (78) ಮತ್ತು ಧ್ರುವ್ ಜುರೆಲ್ (81*) ಅವರ ಸ್ಫೋಟಕ ಆಟದಿಂದಾಗಿ ರಾಯಲ್ಸ್ 18 ಓವರ್‌ಗಳಲ್ಲೇ ತಲುಪಿ, ಸತತ 4ನೇ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿತು.

ಗುವಾಹಟಿ: ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆಯಂತೆಯೇ 15 ವರ್ಷದ ವೈಭವ್‌ ಸೂರ್ಯವಂಶಿಯ ಬ್ಯಾಟ್‌ ಮತ್ತೆ ಸದ್ದು ಮಾಡಿದೆ. ತಮ್ಮ ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಈ ಸಲ ವೈಭವ್‌ ಕಾಡಿದ್ದು ಆರ್‌ಸಿಬಿಯನ್ನು. ತನ್ನ ಆರಂಭಿಕ 2 ಪಂದ್ಯಗಳಲ್ಲೂ ಅಬ್ಬರಿಸಿ ಬೊಬ್ಬಿರಿದಿದ್ದ ತಂಡವನ್ನು ಗುವಾಹಟಿಯಲ್ಲಿ ಶುಕ್ರವಾರ ವೈಭವ್‌ರ ನೆರವಿನಿಂದ ಕಟ್ಟಿಹಾಕಲು ರಾಜಸ್ಥಾನ ರಾಯಲ್ಸ್‌ ಯಶಸ್ವಿಯಾಗಿದೆ. 6 ವಿಕೆಟ್‌ನಿಂದ ಗೆದ್ದ ರಾಯಲ್ಸ್‌, ಸತತ 4ನೇ ಗೆಲುವಿನೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು.

Add Asianetnews Kannada as a Preferred SourcegooglePreferred

ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್‌ ಸಿಕ್ಕಿತು. ಮಧ್ಯಮ ಓವರ್‌ಗಳಲ್ಲಿ ಕುಸಿತದ ಹೊರತಾಗಿಯೂ ತಂಡ 8 ವಿಕೆಟ್‌ಗೆ 201 ರನ್‌ ಗಳಿಸಿತು. ಆದರೆ ವೈಭವ್‌, ಧ್ರುವ್‌ ಜುರೆಲ್‌ ಆರ್ಭಟದ ಮುಂದೆ ರಾಯಲ್ಸ್‌ಗೆ ಈ ಮೊತ್ತ ಸವಾಲಾಗಲೇ ಇಲ್ಲ. ತಂಡ 18 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು.

ಆರ್‌ಸಿಬಿ ಅಬ್ಬರದ ಆರಂಭ:

ಮೊದಲ ಎಸೆತಕ್ಕೇ ಫಿಲ್‌ ಸಾಲ್ಟ್‌ ಔಟಾದರೂ ಆರ್‌ಸಿಬಿ ಸ್ಫೋಟಕ ಆರಂಭ ಪಡೆಯಿತು. 4 ಎಸೆತಕ್ಕೆ 55 ರನ್‌ ಹರಿದುಬಂತು. ಆದರೆ 5ನೇ ಓವರ್‌ನಲ್ಲಿ ವಿರಾಟ್‌ ಕೊಹ್ಲಿ(16 ಎಸೆತಕ್ಕೆ 32) ಔಟಾದ ಬಳಿಕ ರನ್‌ ವೇಗಕ್ಕೆ ಬ್ರೇಕ್‌ ಬಿತ್ತು. 11 ಓವರ್‌ ವೇಳೆಗೆ ತಂಡದ ಸ್ಕೋರ್‌ 6 ವಿಕೆಟ್‌ಗೆ 94 ಆಗಿತ್ತು. 5-11ರ ನಡುವೆ 7 ಓವರ್‌ಗಳಲ್ಲಿ ತಂಡ ಗಳಿಸಿದ್ದು ಕೇವಲ 39 ರನ್‌. 4 ವಿಕೆಟ್‌ ಕೂಡಾ ಕಳೆದುಕೊಂಡಿತು.

ರಜತ್‌-ವೆಂಕಿ ಆಸರೆ:

100ಕ್ಕೂ ಮೊದಲು 6 ವಿಕೆಟ್‌ ಕಳೆದುಕೊಂಡ ತಂಡವನ್ನು ಮೇಲೆತ್ತಿದ್ದು ರಜತ್‌ ಪಾಟೀದಾರ್‌. 18ನೇ ಓವರ್‌ವರೆಗೂ ಕ್ರೀಸ್‌ನಲ್ಲಿದ್ದ ಅವರು 40 ಎಸೆತಕ್ಕೆ 63 ರನ್‌ ಸಿಡಿಸಿದರು. ವೆಂಕಟೇಶ್‌ ಅಯ್ಯರ್‌ 15 ಎಸೆತಕ್ಕೆ 29, ಶೆಫರ್ಡ್ 22 ರನ್‌ ಕೊಡುಗೆ ನೀಡಿದರು.

ವೈಭವ್‌ ಸೂರ್ಯವಂಶಿ ಸಿಡಿಲಬ್ಬರ:

3ನೇ ಎಸೆತದಲ್ಲೇ ದೊಡ್ಡ ಹೊಡೆತಕ್ಕೆ ಕೈಹಾಕಿದ ವೈಭವ್‌, ಆ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಹೇಜಲ್‌ವುಡ್‌ರ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ವೈಭವ್‌, ಆ ಓವರ್‌ನಲ್ಲಿ 18 ರನ್‌ ದೋಚಿದರು. 15 ಎಸೆತಕ್ಕೆ ಅರ್ಧಶತಕ ಪೂರ್ತಿಗೊಳಿಸಿದರು. 6 ಓವರ್‌ನಲ್ಲಿ ತಂಡದ ಸ್ಕೋರ್‌ 1 ವಿಕೆಟ್‌ಗೆ 97. ಬೌಂಡರಿ, ಸಿಕ್ಸರ್‌ ಮೂಲಕವೇ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ವೈಭವ್, 26 ಎಸೆತಕ್ಕೆ 78 ರನ್‌ ಸಿಡಿಸಿದರು. 8.1ನೇ ಓವರ್‌ನಲ್ಲಿ ವೈಭವ್‌ ಔಟಾದಾಗಲೇ ರಾಯಲ್ಸ್‌ ಗೆಲುವು ಖಚಿತವಾಗಿತ್ತು. ಮತ್ತೊಂದು ಕಡೆ ಅಬ್ಬರಿಸುತ್ತಿದ್ದ ಧ್ರುವ್‌ ಜುರೆಲ್‌(43 ಎಸೆತಕ್ಕೆ ಔಟಾಗದೆ 81) ಕೊನೆವರೆಗೂ ಕ್ರೀಸ್‌ನಲ್ಲಿದ್ದು ತಂಡವನ್ನು ಗೆಲ್ಲಿಸಿದರು.

ಸ್ಕೋರ್: ಆರ್‌ಸಿಬಿ 20 ಓವರ್‌ನಲ್ಲಿ 201/8 (ರಜತ್‌ 63, ಕೊಹ್ಲಿ 32, ರವಿ ಬಿಷ್ಣೋಯ್‌ 2-32), ರಾಜಸ್ಥಾನ 18 ಓವರ್‌ನಲ್ಲಿ 202/4 (ವೈಭವ್‌ 78, ಜುರೆಲ್‌ ಔಟಾಗದೆ 81, ಕೃನಾಲ್‌ 2-30)

ಪಂದ್ಯಶ್ರೇಷ್ಠ: ವೈಭವ್‌ ಸೂರ್ಯವಂಶಿ

ಟರ್ನಿಂಗ್ ಪಾಯಿಂಟ್‌

ವೈಭವ್‌ ಕ್ರೀಸ್‌ನಲ್ಲಿದ್ದಾಗಲೇ ಪಂದ್ಯವನ್ನು ಆರ್‌ಸಿಬಿ ಕೈಯಿಂದ ಕಿತ್ತು, ರಾಯಲ್ಸ್‌ನತ್ತ ತಿರುಗಿಸಿದರು. ಅವರು ಔಟಾದಾಗ ತಂಡದ ಸ್ಕೋರ್‌ 129. ಆಗ ರಾಯಲ್ಸ್‌ಗೆ ಬೇಕಿದ್ದಿದ್ದು 72 ಎಸೆತಕ್ಕೆ ಕೇವಲ 73. ಇದಾದ ಬಳಿಕ ಚೇತರಿಸಿಕೊಳ್ಳಲು ಆರ್‌ಸಿಬಿಗೆ ಅವಕಾಶವೇ ಇರಲಿಲ್ಲ.

97 ರನ್‌: ಪವರ್‌ಪ್ಲೇನಲ್ಲೇ ರಾಜಸ್ಥಾನ 97 ರನ್‌ ಗಳಿಸಿತು. ಇದು ತಂಡದ ಗರಿಷ್ಠ. ಕಳೆದ ವರ್ಷ ಪಂಜಾಬ್‌ ವಿರುದ್ಧ 1 ವಿಕೆಟ್‌ಗೆ 89 ರನ್‌ ಸಿಡಿಸಿತ್ತು.

4 ಪಂದ್ಯದಲ್ಲಿ 2 ಸಲ15 ಎಸೆತಗಳಲ್ಲಿ 50!

ಈ ಬಾರಿ ಐಪಿಎಲ್‌ನಲ್ಲಿ ವೈಭವ್‌ ಆಡಿದ 4 ಪಂದ್ಯಗಳ ಪೈಕಿ 2ರಲ್ಲಿ ತಲಾ 15 ಎಸೆತಕ್ಕೆ ಅರ್ಧಶತಕ ಬಾರಿಸಿದ್ದಾರೆ. ಇತ್ತೀಚೆಗೆ ಚೆನ್ನೈ ವಿರುದ್ಧ 15 ಎಸೆತಕ್ಕೆ 50 ರನ್‌ ಪೂರೈಸಿದ್ದರು. ಒಟ್ಟಾರೆ ಐಪಿಎಲ್‌ನಲ್ಲಿ ವೈಭವ್‌ 3 ಬಾರಿ 17 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. 2025ರಲ್ಲಿ ಗುಜರಾತ್‌ ವಿರುದ್ಧ 17 ಎಸೆತಕ್ಕೆ ಫಿಫ್ಟಿ ಸಿಡಿಸಿದ್ದರು.