ಐಪಿಎಲ್ ತಾರೆ ವೈಭವ್ ಸೂರ್ಯವಂಶಿ ಅವರ 10 ವರ್ಷದ ಸಹೋದರ ಆಶೀರ್ವಾದ್ ಸೂರ್ಯವಂಶಿ, ಸ್ಥಳೀಯ ಅಭ್ಯಾಸ ಪಂದ್ಯವೊಂದರಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಣ್ಣನ ಯಶಸ್ಸಿನ ಬೆನ್ನಲ್ಲೇ ತಮ್ಮನೂ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದು, ವೈಭವ್ ತಮ್ಮನ ಸಾಧನೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

Vaibhav Suryavanshi Celebrates Brother’s Maiden Century| ಕೇವಲ 15 ವರ್ಷ ವಯಸ್ಸಿಗೆ ಐಪಿಎಲ್‌ನಲ್ಲಿ ಧೂಳೇಬ್ಬಿಸಿ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಒಂದು ಕಡೆಯಾದರೆ, ಇದೀಗ ಕೇವಲ 10 ವರ್ಷದ ವೈಭವ್ ಸೂರ್ಯವಂಶಿ ಸಹೋದರ ಆಶೀರ್ವಾದ್ ಸೂರ್ಯವಂಶಿ, ಇದೀಗ ಸ್ಥಳೀಯ ಪಂದ್ಯವೊಂದರಲ್ಲಿ ಶತಕ ಸಿಡಿಸಿ ಕ್ರಿಕೆಟ್ ಜಗತ್ತಿನ ಗಮನ ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಹಾರದ ತಾಜ್‌ಪುರದ ಕ್ರಿಕೆಟ್ ಅಕಾಡೆಮಿಯಲ್ಲಿನ ಪ್ರಾಕ್ಟೀಸ್ ಮ್ಯಾಚ್‌ನಲ್ಲಿ ಆಶೀರ್ವಾದ್ ಸೂರ್ಯವಂಶಿ ಕೇವಲ 87 ಎಸೆತಗಳಲ್ಲಿ 103 ರನ್ ಸಿಡಿಸಿ ಮಿಂಚಿದ್ದಾರೆ. ಆಶೀರ್ವಾದ್ ಸೂರ್ಯವಂಶಿಯವರ ಈ ಸೊಗಸಾದ ಇನ್ನಿಂಗ್ಸ್‌ನಲ್ಲಿ ಒಂದು ಸಿಕ್ಸರ್ ಹಾಗೂ 20 ಬೌಂಡರಿಗಳು ಸೇರಿವೆ. ಇದೀಗ ಆಶೀರ್ವಾದ್ ಚೊಚ್ಚಲ ಶತಕ ಸಿಡಿಸಿದ ಬೆನ್ನಲ್ಲೇ ಅವರ ಅಣ್ಣ ವೈಭವ್ ಸೂರ್ಯವಂಶಿ, ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಸ್ಟೋರಿ ಪೋಸ್ಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ವೈಭವ್ ಸೂರ್ಯವಂಶಿ ಭಾವನಾತ್ಮಕ ಪೋಸ್ಟ್

ವೈಭವ್ ಸೂರ್ಯವಂಶಿ, ತಮ್ಮನ ಕ್ರಿಕೆಟ್ ಮ್ಯಾಚ್ ಸ್ಕೋರ್ ಕಾರ್ಡ್‌ ಹಾಗೂ ಫೋಟೋ ಜತೆಗೆ 'ಅಭಿನಂದನೆಗಳು ಆಶೀರ್ವಾದ್' ಎಂದು ಎರಡು ಹಾರ್ಟ್‌ ಎಮೋಜಿಯನ್ನು ಭಾವನಾತ್ಮಕವಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನು ವೈಭವ್ ಸೂರ್ಯವಂಶಿ ವಿಚಾರಕ್ಕೆ ಬರುವುದಾದರೇ, 19ನೇ ಸೀಸನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದರು. ಈ ಮೂಲಕ ಆರೆಂಜ್ ಕ್ಯಾಪ್ ಜಯಿಸುವಲ್ಲಿ ಯಶಸ್ವಿಯಾದರು. 2026ರ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಪರ 16 ಇನ್ನಿಂಗ್ಸ್‌ಗಳನ್ನಾಡಿ 237.31ರ ಸ್ಟ್ರೈಕ್‌ರೇಟ್‌ನಲ್ಲಿ 776 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದರು.

ಇನ್ನು ಇದಷ್ಟೇ ಅಲ್ಲದೇ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ 72 ಸಿಕ್ಸರ್ ಸಿಡಿಸುವ ಮೂಲಕ, ಐಪಿಎಲ್‌ ಸೀಸನ್‌ವೊಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಬ್ಯಾಟರ್ ಎನ್ನುವ ಹಿರಿಮೆಗೆ 15 ವರ್ಷದ ವೈಭವ್ ಪಾತ್ರರಾದರು. ಈ ಮೊದಲು ಕ್ರಿಸ್ ಗೇಲ್ 2012ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 59 ಸಿಕ್ಸರ್ ಸಿಡಿಸಿದ್ದು ದಾಖಲೆಯಾಗಿತ್ತು. ಆ ರೆಕಾರ್ಡ್‌ ಇದೀಗ ವೈಭವ್ ಆರ್ಭಟಕ್ಕೆ ನುಚ್ಚುನೂರಾಗಿದೆ.

ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ವೈಭವ್ ಸೂರ್ಯವಂಶಿ:

2026ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ ಇದೀಗ ಬಿಸಿಸಿಐ ಆಯ್ಕೆ ಸಮಿತಿಯು, 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಆಯ್ಕೆ ಮಾಡಿದೆ. ಇನ್ನು ಇದಷ್ಟೇ ಅಲ್ಲದೇ 2026ರ ಏಷ್ಯನ್ ಗೇಮ್ಸ್‌ಗೂ 15 ಮಂದಿ ಆಟಗಾರರನ್ನೊಳಗೊಂಡ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.