ಮುಲ್ಲಾನ್‌ಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಅದರ ಅಜೇಯ ಓಟಕ್ಕೆ ಅಂತ್ಯ ಹಾಡಿದೆ. ಪಂಜಾಬ್ ನೀಡಿದ 223 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ಯಶಸ್ವಿಯಾಗಿ ಬೆನ್ನಟ್ಟಿದ್ದು, ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ವೇಗದ 400 ರನ್‌ಗಳ ದಾಖಲೆ ನಿರ್ಮಿಸಿದರು.
ಮುಲ್ಲಾನ್‌ಪುರ: ಈ ಬಾರಿ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಮೊದಲ ಸೋಲು ಅನುಭವಿಸಿದೆ. 6 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿದ್ದ ಪಂಜಾಬ್ ಮಂಗಳವಾರ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್‌ನಿಂದ ಪರಾಭವಗೊಂಡಿತು. ರಾಯಲ್ಸ್‌ಗೆ ಇದು 9 ಪಂದ್ಯಗಳಲ್ಲಿ 6ನೇ ಗೆಲುವು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ 4 ವಿಕೆಟ್ ನಷ್ಟದಲ್ಲಿ 222 ರನ್ ಕಲೆಹಾಕಿತು. ಎಂದಿನಂತೆ ಪಂಜಾಬ್ ಈ ಪಂದ್ಯದಲ್ಲೂ ಸ್ಫೋಟಕ ಆರಂಭ ಪಡೆಯಿತು. ಪ್ರಿಯಾನ್ಶ್ ಆರ್ಯ 11 ಎಸೆತಕ್ಕೆ 29 ರನ್ ಗಳಿಸಿದರೆ, ಕೂಪರ್ ಕೊನೊಲಿ 14 ಎಸೆತಕ್ಕೆ 30 ರನ್ ಬಾರಿಸಿದರು. ಪ್ರಭ್‌ಸಿಮ್ರನ್ 44 ಎಸೆತಕ್ಕೆ 59, ಶ್ರೇಯಸ್ ಅಯ್ಯರ್ 27 ಎಸೆತಕ್ಕೆ 30 ರನ್ ಗಳಿಸಿದರು. ಮಧ್ಯಮ ಓವರ್‌ಗಳಲ್ಲಿ ತಂಡದ ರನ್ ವೇಗಕ್ಕೆ ಕಡಿವಾಣ ಬಿದ್ದರೂ ಕೊನೆಯಲ್ಲಿ ಆರ್ಭಟಿಸಿದ ಸ್ಟೋಯ್ನಿಸ್, ಕೇವಲ 22 ಎಸೆತಗಳಲ್ಲಿ ಔಟಾಗದೆ 62 ರನ್ ಸಿಡಿಸಿದರು.
ರಾಜಸ್ಥಾನ ರಾಯಲ್ಸ್ ಸ್ಫೋಟಕ ಆರಂಭ:
ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ರಾಯಲ್ಸ್‌ಗೆ ನೆರವಾಯಿತು. ಈ ಜೋಡಿ 3.2 ಓವರ್‌ಗಳಲ್ಲಿ 51 ರನ್ ಸೇರಿಸಿತು. ವೈಭವ್ 16 ಎಸೆತಕ್ಕೆ 43 ರನ್ ಸಿಡಿಸಿ ಔಟಾದರೆ, ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 51 ರನ್ ಬಾರಿಸಿದರು. ಬಳಿಕ ಡೊನೊವನ್ ಫೆರಿಯೆರಾ 25 ಎಸೆತಕ್ಕೆ ಔಟಾಗದೆ 52 ಹಾಗೂ ಶುಭಮ್ ದುಬೆ 12 ಎಸೆತಕ್ಕೆ ಔಟಾಗದೆ 31 ರನ್ ಗಳಿಸಿ ತಂಡವನ್ನು 19.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.
ಸ್ಕೋರ್: ಪಂಜಾಬ್ 20 ಓವರಲ್ಲಿ 222/4 (ಸ್ಟೋಯ್ನಿಸ್ 62, ಪ್ರಭ್‌ಸಿಮ್ರನ್ 59, ಯಶ್‌ರಾಜ್ 2-41), ರಾಜಸ್ಥಾನ 19.2 ಓವರಲ್ಲಿ 228/4 (ಫೆರಿಯೆರಾ ಔಟಾಗದೆ 52, ಜೈಸ್ವಾಲ್ 51, ವೈಭವ್ 43, ಚಹಲ್ 3-36)
167 ಎಸೆತಗಳಲ್ಲಿ 400 ರನ್: ವೈಭವ್ ದಾಖಲೆ
ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ವೇಗವಾಗಿ 400 ರನ್ ಕಲೆಹಾಕಿದ ಆಟಗಾರ ಎಂಬ ಖ್ಯಾತಿಗೆ ವೈಭವ್ ಸೂರ್ಯವಂಶಿ ತ್ರರಾಗಿದ್ದಾರೆ. ಅವರು ಈ ಬಾರಿ 400 ರನ್ ಗಳಿಸಲು ಕೇವಲ 167 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ 2019ರಲ್ಲಿ ಆ್ಯಂಡ್ರೆ ರಸೆಲ್ ನಿರ್ಮಿಸಿದ್ದ ದಾಖಲೆ(188 ಎಸೆತ) ಮುರಿದರು. 2024ರಲ್ಲಿ ಅಭಿಷೇಕ್ ಶರ್ಮಾ 195 ಎಸೆತ, 2025ರಲ್ಲಿ ನಿಕೋಲಸ್ ಪೂರನ್ 197 ಎಸೆತ ಹಾಗೂ 2014ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 200 ಎಸೆತಗಳಲ್ಲಿ 400 ರನ್ ಮೈಲುಗಲ್ಲು ಸಾಧಿಸಿದ್ದರು.


