19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಸತತ ಏಳನೇ ಬಾರಿಗೆ ಟಾಸ್ ಸೋತು, ಆರ್‌ಸಿಬಿ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದೆ. ನಾಯಕ ಇಶಾನ್ ಕಿಶನ್ ಕೂಡಾ ಐಪಿಎಲ್‌ನಲ್ಲಿ ಮೊದಲ ಏಳು ಪಂದ್ಯಗಳಲ್ಲಿ ಟಾಸ್ ಸೋತ ಮೊದಲ ನಾಯಕ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಹೈದರಾಬಾದ್: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮ್ಯಾಚ್ ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಇಶಾನ್ ಕಿಶನ್, ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನಿಸಲ್ಪಟ್ಟರು. ಇನ್ನು ಟಾಸ್ ಸೋಲುತ್ತಿದ್ದಂತೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಆರ್‌ಸಿಬಿ ಹೆಸರಿನಲ್ಲಿ ಹತ್ತು ವರ್ಷಗಳಿಂದ ಅಚ್ಚಳಿಯದೇ ಉಳಿದಿದ್ದ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಆರೆಂಜ್ ಆರ್ಮಿ ಯಶಸ್ವಿಯಾಗಿದೆ.

ಹೌದು, ಸನ್‌ರೈಸರ್ಸ್ ಹೈದರಾಬಾದ್ ತಂಡವು 19ನೇ ಸೀಸನ್ ಐಪಿಎಲ್‌ ಟೂರ್ನಿಯಲ್ಲಿ ಸತತ ಏಳನೇ ಬಾರಿಗೆ ಟಾಸ್ ಸೋಲು ಅನುಭವಿಸಿದೆ. ಇನ್ನೊಂದೆಡೆ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಈ ಆವೃತ್ತಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ತಂಡಗಳು ಈ ಪಂದ್ಯಕ್ಕೂ ಮುನ್ನ ತಲಾ ಮೂರು ಗೆಲುವುಗಳನ್ನು ದಾಖಲಿಸಿತ್ತು.

10 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಆರೆಂಜ್ ಆರ್ಮಿ!

ಹೌದು, ಸನ್‌ರೈಸರ್ಸ್ ಹೈದರಾಬಾದ್ ತಂಡವು ಇದೀಗ ಐಪಿಎಲ್ ಇತಿಹಾಸದಲ್ಲಿ ಮೊದಲ ಏಳು ಪಂದ್ಯಗಳಲ್ಲಿ ಟಾಸ್ ಸೋತು, ಮೊದಲು ಬ್ಯಾಟ್ ಮಾಡಿದ ತಂಡ ಎನ್ನುವ ಅಪರೂಪದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಐಪಿಎಲ್‌ ಸೀಸನ್‌ನ ಆರಂಭಿಕ ಪಂದ್ಯಗಳ ಪೈಕಿ ಯಾವ ತಂಡವೂ ಆರು ಸಲ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿಲ್ಲ. ಈ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2016ರಲ್ಲಿ ಒಮ್ಮೆ ಹಾಗೂ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಎರಡು ಬಾರಿ(2018 & 2021)ರಲ್ಲಿ ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಐದು ಸಲ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತ್ತು

ಕೆಟ್ಟ ದಾಖಲೆಗೆ ಪಾತ್ರರಾದ ಇಶಾನ್ ಕಿಶನ್:

2026ರ ಐಪಿಎಲ್ ಟೂರ್ನಿಯಲ್ಲಿ ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್, ನಾಯಕನಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಶಾನ್ ಕಿಶನ್ ಐಪಿಎಲ್ ನಾಯಕತ್ವದ ಇತಿಹಾಸದಲ್ಲಿ ಮೊದಲ ಏಳೂ ಐಪಿಎಲ್‌ ಪಂದ್ಯಗಳಲ್ಲಿ ಟಾಸ್ ಸೋತ ಮೊದಲ ಕ್ಯಾಪ್ಟನ್ ಎನ್ನುವ ಕುಖ್ಯಾತಿಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ. ಈ ಮೊದಲು ನಾಯಕನಾಗಿ ಅತಿಹೆಚ್ಚು ಟಾಸ್ ಸೋತ ಕುಖ್ಯಾತಿ ಸನ್‌ರೈಸರ್ಸ್ ಹೈದರಾಬಾದ್‌ನ ಮಾಜಿ ನಾಯಕ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು. ಡೇವಿಡ್ ವಾರ್ನರ್ ನಾಯಕನಾದ ಮೊದಲ ಐದು ಪಂದ್ಯಗಳಲ್ಲಿ ಟಾಸ್ ಸೋತಿದ್ದರು.

ಇನ್ನು ಐಪಿಎಲ್‌ ಸೀಸನ್‌ನ ಮೊದಲ ಏಳು ಪಂದ್ಯಗಳಲ್ಲಿ ಟಾಸ್ ಸೋತ ಎರಡನೇ ತಂಡ ಎನ್ನುವ ಕುಖ್ಯಾತಿಗೆ ಆರೆಂಜ್ ಆರ್ಮಿ ಪಾತ್ರವಾಗಿದೆ. ಈ ಮೊದಲು 2014ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್(ಈಗ ಡೆಲ್ಲಿ ಕ್ಯಾಪಿಟಲ್ಸ್) ಮೊದಲ ಏಳು ಪಂದ್ಯಗಳಲ್ಲಿ ಎರಡು ನಾಯಕರಿಂದ ಟಾಸ್ ಸೋತಿತ್ತು. 2014ರ ಮೊದಲ ಎರಡು ಪಂದ್ಯಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು ದಿನೇಶ್ ಕಾರ್ತಿಕ್ ನಾಯಕನಾಗಿ ಮುನ್ನೆಡೆಸಿದ್ದರು. ಇದಾದ ಬಳಿಕ ಗಾಯದಿಂದ ಚೇತರಿಸಿಕೊಂಡು ತಂಡ ಕೂಡಿಕೊಂಡ ಕೆವಿನ್ ಪೀಟರ್‌ಸನ್‌ ಮೂರನೇ ಪಂದ್ಯದಿಂದ ಡೆಲ್ಲಿ ತಂಡವನ್ನು ಮುನ್ನಡೆಸಿದರು.