ಕೆ.ಎಲ್. ರಾಹುಲ್ ಮತ್ತು ಡೇವಿಡ್ ಮಿಲ್ಲರ್ ಅವರ ಹೋರಾಟದ ಹೊರತಾಗಿಯೂ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಕೇವಲ 1 ರನ್‌ನಿಂದ ಸೋತಿದೆ. 211 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ, ಕೊನೆಯ ಓವರ್‌ನಲ್ಲಿ ಎಡವಿ 209 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ಡೆಲ್ಲಿ ಐಪಿಎಲ್‌ನಲ್ಲಿ ನಾಲ್ಕನೇ ಬಾರಿಗೆ 1 ರನ್ ಅಂತರದಲ್ಲಿ ಸೋತಂತಾಗಿದೆ.

ನವದೆಹಲಿ: ಕೆ.ಎಲ್‌.ರಾಹುಲ್‌, ಡೇವಿಡ್‌ ಮಿಲ್ಲರ್‌ ಹೋರಾಟದ ಹೊರತಾಗಿಯೂ ಕೊನೆ ಓವರ್‌ನಲ್ಲಿ ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬುಧವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಪಂದ್ಯದಲ್ಲಿ 1 ರನ್‌ ವೀರೋಚಿತ ಸೋಲನುಭವಿಸಿದೆ. ಸತತ 2ರಲ್ಲಿ ಗೆದ್ದಿದ್ದ ಡೆಲ್ಲಿಗಿದು ಮೊದಲ ಸೋಲು. ಗುಜರಾತ್‌ ಮೂರರಲ್ಲಿ ಮೊದಲ ಜಯ ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ 4 ವಿಕೆಟ್‌ಗೆ 210 ರನ್‌ ಗಳಿಸಿತು. ನಾಯಕ ಶುಭ್‌ಮನ್‌ ಗಿಲ್‌ 45 ಎಸೆತಕ್ಕೆ 70, ಜೋಸ್ ಬಟ್ಲರ್‌ 27 ಎಸೆತಕ್ಕೆ 52, ವಾಷಿಂಗ್ಟನ್‌ ಸುಂದರ್‌ 32 ಎಸೆತಗಳಲ್ಲಿ 55 ರನ್‌ ಸಿಡಿಸಿದರು. ಮುಕೇಶ್‌ 2 ವಿಕೆಟ್‌ ಕಿತ್ತರು.

ದೊಡ್ಡ ಗುರಿ ಬೆನ್ನತ್ತಿದ ಡೆಲ್ಲಿ 8 ವಿಕೆಟ್‌ ನಷ್ಟದಲ್ಲಿ 209 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರಂಭಿಕ 2 ಪಂದ್ಯದಲ್ಲಿ ವಿಫಲರಾಗಿದ್ದ ಕೆ.ಎಲ್‌.ರಾಹುಲ್‌ ಈ ಪಂದ್ಯದಲ್ಲಿ 52 ಎಸೆತಕ್ಕೆ 92 ರನ್‌ ಸಿಡಿಸಿದರು. ಇತರರು ಕೈಕೊಟ್ಟರೂ ಕೊನೆವರೆಗೂ ಕ್ರೀಸ್‌ನಲ್ಲಿದ್ದ ಡೇವಿಡ್‌ ಮಿಲ್ಲರ್‌ 20 ಎಸೆತಕ್ಕೆ 41 ರನ್‌ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ರಶೀದ್‌ 3 ವಿಕೆಟ್‌ ಕಿತ್ತರು.

ಸ್ಕೋರ್: ಗುಜರಾತ್‌ 210/4 (ಗಿಲ್‌ 70, ಸುಂದರ್‌ 55, ಬಟ್ಲರ್‌ 52, ಮುಕೇಶ್‌ 2-55), ಡೆಲ್ಲಿ 209/8 (ರಾಹುಲ್‌ 92, ಮಿಲ್ಲರ್‌ ಔಟಾಗದೆ 41, ರಶೀದ್‌ 3-17)

ಪಂದ್ಯಶ್ರೇಷ್ಠ:

2 ಎಸೆತಕ್ಕೆ 2 ರನ್‌ಗಳಿಸದೆ ಸೋಲು!

ಡೆಲ್ಲಿಗೆ ಕೊನೆ 2 ಓವರ್‌ನಲ್ಲಿ 36 ರನ್‌ ಬೇಕಿತ್ತು. ಸಿರಾಜ್‌ ಎಸೆದ 19ನೇ ಓವರ್‌ನಲ್ಲಿ ತಂಡ 23 ರನ್‌ ಸಿಡಿಸಿತು. ಮಿಲ್ಲರ್‌ 2 ಸಿಕ್ಸರ್‌, 1 ಬೌಂಡರಿ, ವಿಪ್ರಾಜ್‌ 1 ಬೌಂಡರಿ ಬಾರಿಸಿದರು. ಕೊನೆ ಓವರ್‌ನಲ್ಲಿ 13 ರನ್‌ ಅಗತ್ಯವಿತ್ತು. ಪ್ರಸಿದ್ಧ್‌ ದಾಳಿಗಿಳಿದರು. ವಿಪ್ರಾಜ್‌ ಮೊದಲ ಎಸೆತಕ್ಕೆ ಬೌಂಡರಿ, 2ನೇ ಎಸೆತಕ್ಕೆ ಔಟ್‌. 3ನೇ ಎಸೆತದಲ್ಲಿ ಕುಲ್ದೀಪ್‌ 1 ರನ್. 4ನೇ ಎಸೆತದಲ್ಲಿ ಮಿಲ್ಲರ್‌ ಸಿಕ್ಸರ್‌. 5ನೇ ಎಸೆತದಲ್ಲಿ ಸಿಂಗಲ್‌ ಪಡೆಯುವ ಅವಕಾಶವಿದ್ದರೂ ಮಿಲ್ಲರ್‌ ಓಡಲಿಲ್ಲ. ಕೊನೆ ಎಸೆತಕ್ಕೆ 2 ರನ್‌ ಬೇಕಿದ್ದಾಗ ಬೌನ್ಸರ್ ಬಾಲ್‌ ಡಾಟ್‌ ಆಗಿ, ಮಿಲ್ಲರ್‌ ರನೌಟ್‌ ಆದರು.

ಡೆಲ್ಲಿಗೆ 4ನೇ ಬಾರಿ 1 ರನ್‌ ಸೋಲು!

ಡೆಲ್ಲಿ ಐಪಿಎಲ್‌ನಲ್ಲಿ 4 ಬಾರಿ 1 ರನ್‌ ಅಂತರದಲ್ಲಿ ಸೋತಿದೆ. 2015ರಲ್ಲಿ ಸಿಎಸ್‌ಕೆ, 2016ರಲ್ಲಿ ಗುಜರಾತ್‌ ಲಯನ್ಸ್‌, 2021ರಲ್ಲಿ ಆರ್‌ಸಿಬಿ, 2026ರಲ್ಲಿ ಗುಜರಾತ್‌ ವಿರುದ್ಧ ವೀರೋಚಿತ ಸೋಲು ಕಂಡಿದೆ. ಇಷ್ಟು ಬಾರಿ 1 ರನ್‌ ಅಂತರದಲ್ಲಿ ಬೇರೆ ಯಾವುದೇ ತಂಡ ಸೋತಿಲ್ಲ.