* ಗುಜರಾತ್-ರಾಜಸ್ಥಾನ ನಡುವಿನ ಮೊದಲ ಕ್ವಾಲಿಫಯರ್ ಪಂದ್ಯಕ್ಕೆ ಕ್ಷಣಗಣನೆ* ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಗುಜರಾತ್ ಹಾಗೂ ರಾಜಸ್ಥಾನ ರಾಯಲ್ಸ್* ಇಂದು ಗೆಲುವು ಸಾಧಿಸುವ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿವೆ

ಬೆಂಗಳೂರು(ಮೇ.24): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟ ತಲುಪಿದ್ದು, ಪ್ಲೇ ಆಫ್‌ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿಂದು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಹಾಗೂ ನೂತನ ಐಪಿಎಲ್ ತಂಡವಾದ ಗುಜರಾತ್ ಟೈಟಾನ್ಸ್ ತಂಡಗಳು ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಸೆಣಸಾಡಲು ಸಜ್ಜಾಗಿವೆ. ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದು, ಈ ಪಂದ್ಯದಲ್ಲಿ ವಿಜೇತವಾಗುವ ತಂಡವು ನೇರವಾಗಿ ಫೈನಲ್‌ಗೆ ಲಗ್ಗೆಯಿಟ್ಟರೇ, ಸೋಲು ಕಂಡ ತಂಡಕ್ಕೆ ಫೈನಲ್ ಪ್ರವೇಶಿಸಲು ಇನ್ನೊಂದು ಅವಕಾಶ ಸಿಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಉಭಯ ತಂಡಗಳು ಸಾಕಷ್ಟು ಪೈಪೋಟಿ ನಡೆಸುವ ಸಾಧ್ಯತೆಯಿದೆ. 

ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ಕ್ವಾಲಿಫಯರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ. ಹೀಗಾಗಿ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಾಗುವ ಸಾಧ್ಯತೆಗಳು ಕಡಿಮೆ. ಇನ್ನೊಂದೆಡೆ ನೂತನ ಐಪಿಎಲ್ ತಂಡವಾದ ಗುಜರಾತ್ ಟೈಟಾನ್ಸ್, ಚೊಚ್ಚಲ ಆವೃತ್ತಿಯಲ್ಲಿಯೇ ಅಮೋಘ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‌ಗೆ ಅರ್ಹತೆಗಿಟ್ಟಿಸಿಕೊಂಡ ಮೊದಲ ತಂಡ ಎನಿಸಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಸಾಂಘಿಕ ಪ್ರದರ್ಶನದ ಮೂಲಕ ಗಮನ ಸೆಳೆದಿದೆ. ಹೀಗಿದ್ದೂ ಲೀಗ್‌ ಹಂತದಲ್ಲಿ ತನ್ನ ಪಾಲಿನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಆಘಾತಕಾರಿ ಸೋಲು ಕಂಡಿತ್ತು. ಇದೀಗ ಮಹತ್ವದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಫೈನಲ್‌ಗೇರುವ ಲೆಕ್ಕಾಚಾರದಲ್ಲಿದೆ ಗುಜರಾತ್ ಟೈಟಾನ್ಸ್. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಲಾಕಿ ಫರ್ಗ್ಯೂಸನ್‌ ಬದಲಿಗೆ ಕೆರಿಬಿಯನ್ ಮೂಲದ ವೇಗಿ ಅಲ್ಜೇರಿ ಜೋಸೆಫ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.

ಪಿಚ್ ರಿಪೋರ್ಟ್‌: ಸಾಮಾನ್ಯವಾಗಿ ಕೋಲ್ಕತಾದ ಈಡನ್ ಗಾರ್ಡನ್ಸ್‌ ಪಿಚ್‌ ಹೆಚ್ಚಾಗಿ ಸ್ಪಿನ್ ಬೌಲರ್‌ಗಳಿಗೆ ನೆರವಾಗಿದ್ದನ್ನು ಈ ಹಿಂದೆ ಕಂಡಿದ್ದೇವೆ. ಎರಡೂ ತಂಡದಲ್ಲೂ ತಜ್ಞ ಟಿ20 ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಿರುವುದರಿಂದ ಪೈಪೋಟಿಯುತವಾದ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಈ ಪಂದ್ಯಕ್ಕೆ ಮಳೆಯ ಭೀತಿ ಕೂಡಾ ಇರುವುದರಿಂದಾಗಿ ಟಾಸ್ ಗೆದ್ದಂತಹ ನಾಯಕ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಬ್ಯಾಟಿಂಗ್ ಆಯ್ದುಕೊಂಡು ಬೃಹತ್ ಮೊತ್ತ ಗಳಿಸುವ ಮೂಲಕ ಎದುರಾಳಿ ತಂಡದ ಮೇಲೆ ಮಹತ್ವದ ಪಂದ್ಯದಲ್ಲಿ ಒತ್ತಡ ಹೇರುವ ರಣತಂತ್ರವನ್ನು ಟಾಸ್ ಗೆಲ್ಲುವ ನಾಯಕ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ.

IPL 2022 Playoffs: ಗುಜರಾತ್ vs ರಾಜಸ್ಥಾನ ಪ್ಲೇ ಅಫ್‌ ಪಂದ್ಯದ ಮೇಲೆ ವರುಣನ ವಕ್ರದೃಷ್ಠಿ..!

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌ ಟೈಟಾನ್ಸ್: ವೃದ್ದಿಮಾನ್ ಸಾಹ, ಶುಭ್‌ಮನ್‌ ಗಿಲ್‌, ಮ್ಯಾಥ್ಯೂ ವೇಡ್‌, ಹಾರ್ದಿಕ್ ಪಾಂಡ್ಯ‌(ನಾಯಕ), ಡೇವಿಡ್ ಮಿಲ್ಲರ್‌, ರಾಹುಲ್ ತೆವಾಟಿಯಾ, ರಶೀದ್ ಖಾನ್‌, ಸಾಯಿಕಿಶೋರ್‌, ಅಲ್ಜೇರಿ ಜೋಸೆಫ್‌, ಯಶ್‌ ದಯಾಳ್‌, ಮೊಹಮ್ಮದ್ ಶಮಿ.

ರಾಜಸ್ಥಾನ ರಾಯಲ್ಸ್‌: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌(ನಾಯಕ), ಡೇವಿಡ್ ಪಡಿಕ್ಕಲ್‌, ರವಿಚಂದ್ರನ್ ಅಶ್ವಿನ್‌, ಶಿಮ್ರೊನ್‌ ಹೆಟ್ಮೇಯರ್‌, ರಯಾನ್‌ ಪರಾಗ್‌, ಟ್ರೆಂಟ್ ಬೌಲ್ಟ್‌, ರಾಹುಲ್ ಚಹಲ್‌, ಪ್ರಸಿದ್ಧ್ ಕೃಷ್ಣ, ಒಬೆಡ್‌ ಮೆಕಾಯ್‌.

ಇಂದಿನ ಪಂದ್ಯವನ್ನು ಗೆಲ್ಲೋರು ಯಾರು..?

ಎರಡೂ ತಂಡಗಳು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್‌ ಹಂತದ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿವೆ. ರಾಜಸ್ಥಾನ ರಾಯಲ್ಸ್ ತಂಡವು ಹೆಚ್ಚಾಗಿ ಜೋಸ್ ಬಟ್ಲರ್ ಹಾಗೂ ಯುಜುವೇಂದ್ರ ಚಹಲ್ ಅವರನ್ನು ನೆಚ್ಚಿಕೊಂಡಿದೆ. ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ತಂಡವು ಹಾರ್ದಿಕ್‌ ಪಾಂಡ್ಯ, ರಶೀದ್ ಖಾನ್, ಡೇವಿಡ್ ಮಿಲ್ಲರ್, ವೃದ್ದಿಮಾನ್ ಸಾಹ, ರಾಹುಲ್ ತೆವಾಟಿಯಾ, ಶುಭ್‌ಮನ್ ಗಿಲ್ ಸೇರಿದಂತೆ ಎಲ್ಲಾ ಆಟಗಾರರು ಸಂಘಟಿತ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಗುಜರಾತ್ ಟೈಟಾನ್ಸ್ ತಂಡವು ಗೆಲ್ಲುವ ಸಾಧ್ಯತೆ ಹೆಚ್ಚು.