IPL 2022: ಸನ್‌ರೈಸರ್ಸ್ vs ಕೆಕೆಆರ್ ನಡುವಿನ ಪಂದ್ಯ ಗೆಲ್ಲೋರು ಯಾರು..?
* ಸನ್‌ರೈಸರ್ಸ್ ಹೈದರಾಬಾದ್-ಕೋಲ್ಕತಾ ನೈಟ್ ರೈಡರ್ಸ್ ಪಂದ್ಯಕ್ಕೆ ಕ್ಷಣಗಣನೆ
* ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಬ್ರೆಬೋರ್ನ್ ಮೈದಾನ ಆತಿಥ್ಯ
* ಶುಕ್ರವಾರದ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭ
ಮುಂಬೈ(ಏ.14): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಆಘಾತಕಾರಿ ಸೋಲು ಕಂಡಿದ್ದ ಕೇನ್ ವಿಲಿಯಮ್ಸನ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಆ ಬಳಿಕ ಭರ್ಜರಿ ಕಮ್‌ಬ್ಯಾಕ್ ಮಾಡುವ ಮೂಲಕ ಸತತ ಎರಡು ಗೆಲುವು ದಾಖಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಕಳೆದೆರಡು ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ನೂತನ ತಂಡ ಗುಜರಾತ್ ಟೈಟಾನ್ಸ್ ಎದುರು ಭರ್ಜರಿ ಗೆಲುವು ಸಾಧಿಸಿದೆ.
ಆದರೆ ಈ ಪಂದ್ಯಕ್ಕೂ ಮುನ್ನ ಆರೆಂಜ್ ಆರ್ಮಿ ಪಾಳಯದಲ್ಲಿ ಕೊಂಚ ಆತಂಕ ಮನೆ ಮಾಡಿದ್ದು, ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದು, ಕೆಲ ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಹೀಗಾಗಿ ಎಡಗೈ ಸ್ಪಿನ್ನರ್ ಹಾಗೂ ಕನ್ನಡಿಗ ಜಗದೀಶ ಸುಚಿತ್ ಇಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇನ್ನು ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ಹೊಂದಿದ್ದು, ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡವು ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆಘಾತಕಾರಿ ಸೋಲು ಕಂಡಿತ್ತು. ಕಳೆದ ಪಂದ್ಯದಲ್ಲಿ ಕೆಕೆಆರ್ ಮುಗ್ಗರಿಸಿದ್ದರೂ ಸಹಾ, ಅದೇ ಆಡುವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯುವ ಸಾದ್ಯತೆಯಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲೇನೂ ತಪ್ಪಿಲ್ಲ, ತಪ್ಪೆಲ್ಲಾ ಬೌಲರ್‌ಗಳದ್ದೇ ಎಂದ ಇಂಗ್ಲೆಂಡ್ ಕ್ರಿಕೆಟಿಗ..!
ಪಿಚ್ ರಿಪೋರ್ಟ್: ಬ್ರೆಬೋರ್ನ್ ಮೈದಾನವು ಈ ಹಿಂದಿನ ಕೆಲವು ಪಂದ್ಯಗಳಲ್ಲಿ ಹೈಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿತ್ತು. ಇದರ ಹೊರತಾಗಿಯೂ ವೇಗಿಗಳು ಆರಂಭದಲ್ಲಿ ಸ್ವಿಂಗ್ ಮಾಡಲು ನೆರವು ನೀಡಿತ್ತು. ಈ ಪಂದ್ಯದ ವೇಳೆಯೂ ಇಬ್ಬನಿ ಬೀಳುವ ಸಾಧ್ಯತೆಯಿರುವುದರಿಂದ ಟಾಸ್ ಗೆದ್ದ ತಂಡದ ನಾಯಕ ಮೊದಲು ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು.
ಇಂದಿನ ಪಂದ್ಯವನ್ನು ಗೆಲ್ಲೋರು ಯಾರು: ಪಿಚ್ ರಿಪೋರ್ಟ್ ಹಾಗೂ ಈ ಹಿಂದಿನ ಫಲಿತಾಂಶಗಳನ್ನು ಗಮನಿಸಿದರೆ, ಇಂದು ಟಾಸ್ ಗೆದ್ದು ಚೇಸಿಂಗ್ ಮಾಡುವಂತಹ ತಂಡ ಗೆಲುವು ಸಾಧಿಸುವ ಸಾಧ್ಯತೆ ದಟ್ಟವಾಗಿದೆ.
ಸಂಭಾವ್ಯ ತಂಡಗಳು ಹೀಗಿವೆ ನೋಡಿ
ಸನ್‌ರೈಸರ್ಸ್ ಹೈದರಾಬಾದ್
ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ನಾಯಕ), ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್‌ರಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಯಾನ್ಸೆನ್, ಉಮ್ರಾನ್ ಮಲಿಕ್
ಕೋಲ್ಕತಾ ನೈಟ್ ರೈಡರ್ಸ್
ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಉಮೇಶ್ ಯಾದವ್, ರಶೀಕ್ ಸಲಾಮ್, ವರುಣ್ ಚಕ್ರವರ್ತಿ
ಸ್ಥಳ: ಮುಂಬೈ, ಬ್ರೆಬೋರ್ನ್ ಮೈದಾನ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್