ಒಂದು ಕಾಲದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ವಿಮಾನ ಟಿಕೆಟ್‌ಗೂ ಹಣವಿಲ್ಲದೆ ತೀವ್ರ ಸಂಕಷ್ಟದಲ್ಲಿತ್ತು. ಆ ಸಮಯದಲ್ಲಿ, ಬಿಸಿಸಿಐ ಬೆಂಬಲವಿಲ್ಲದಿದ್ದಾಗ, ಬಾಲಿವುಡ್ ತಾರೆ ಮಂದಿರಾ ಬೇಡಿ ತಮ್ಮ ಪ್ರಭಾವ ಬಳಸಿ ಮತ್ತು ಸ್ವಂತ ಹಣ ನೀಡಿ ತಂಡಕ್ಕೆ 'ಅದೃಶ್ಯ ಪ್ರಾಯೋಜಕಿ'ಯಾಗಿ ನೆರವಾಗಿದ್ದರು.
ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದಾಗ, ಬಿಸಿಸಿಐ ಮತ್ತು ರಾಜ್ಯ ಸರ್ಕಾರಗಳು ಆಟಗಾರ್ತಿಯರಿಗೆ ಕೋಟ್ಯಂತರ ರೂಪಾಯಿ ಬಹುಮಾನ ಘೋಷಿಸಿವೆ. ಆದರೆ ಈ ಅದ್ಭುತ ಗೆಲುವಿನ ನಡುವೆಯೂ, ಒಂದು ಕಾಲದಲ್ಲಿ ಭಾರತೀಯ ಮಹಿಳಾ ಆಟಗಾರ್ತಿಯರಿಗೆ ಸರಣಿಗಳಿಗೆ ಹೋಗಲು ವಿಮಾನ ಟಿಕೆಟ್‌ಗೂ ಹಣವಿಲ್ಲದ ಪರಿಸ್ಥಿತಿ ಇತ್ತು ಎಂಬುದು ಹೆಚ್ಚಿನ ಅಭಿಮಾನಿಗಳಿಗೆ ನೆನಪಿರಲಿಕ್ಕಿಲ್ಲ.
ಇದನ್ನೂ ತಿಳಿಯಲು ತುಂಬಾ ಹಿಂದೆ ಹೋಗಬೇಕಾಗಿಲ್ಲ. 2003-2005ರ ಸೀಸನ್‌ನಲ್ಲಿ, ಪ್ರಾಯೋಜಕರು ಅಥವಾ ಬಿಸಿಸಿಐ ಬೆಂಬಲವಿಲ್ಲದೆ ಭಾರತೀಯ ಕ್ರಿಕೆಟ್ ಆಟಗಾರ್ತಿಯರು ವಿಮಾನ ಟಿಕೆಟ್‌ಗೂ ಹಣವಿಲ್ಲದೆ ಕಷ್ಟಪಡುತ್ತಿದ್ದಾಗ, ಬಾಲಿವುಡ್ ತಾರೆ ಮತ್ತು ಕ್ರಿಕೆಟ್ ನಿರೂಪಕಿ ಮಂದಿರಾ ಬೇಡಿ ತಂಡಕ್ಕೆ ಸಹಾಯ ಮಾಡಿದ್ದರು ಎನ್ನುವುದು ಈ ತಲೆಮಾರಿನ ಬಹುತೇಕ ಕ್ರೀಡಾಭಿಮಾನಿಗಳಿಗೆ ಗೊತ್ತಿಲ್ಲ.
ಭಾರತೀಯ ಮಹಿಳಾ ತಂಡದ ಅದೃಶ್ಯ ಪ್ರಾಯೋಜಕಿ!
ಆಗ ಭಾರತೀಯ ಮಹಿಳಾ ತಂಡ ಬಿಸಿಸಿಐ ಅಡಿಯಲ್ಲಿರಲಿಲ್ಲ, ಬದಲಿಗೆ ಭಾರತೀಯ ಮಹಿಳಾ ಕ್ರಿಕೆಟ್ ಸಂಸ್ಥೆಯ ಅಡಿಯಲ್ಲಿ ಆಡುತ್ತಿತ್ತು. ಆಟಗಾರ್ತಿಯರಿಗೆ ಅಥವಾ ಪಂದ್ಯಗಳಿಗೆ ಹೆಚ್ಚು ಪ್ರೇಕ್ಷಕರು ಸಿಗದಿದ್ದ ಆ ಕಾಲದಲ್ಲಿ, ತಂಡಕ್ಕೆ ಖಾಯಂ ಪ್ರಾಯೋಜಕರೂ ಇರಲಿಲ್ಲ. ಆದರೆ ಆ ಸಮಯದಲ್ಲಿ ವಿಮಾನ ಟಿಕೆಟ್‌ಗಾಗಿ ತಂಡವು ಕಷ್ಟಪಡುತ್ತಿದ್ದಾಗ, ಮಂದಿರಾ ಬೇಡಿ ಸಹಾಯಕ್ಕೆ ಬಂದಿದ್ದರು. ಸಿನಿಮಾ ರಂಗದಲ್ಲಿನ ತಮ್ಮ ಪ್ರಭಾವವನ್ನು ಬಳಸಿ ಪ್ರಾಯೋಜಕರನ್ನು ಒಟ್ಟುಗೂಡಿಸಿ, ವಿದೇಶಿ ಸರಣಿಗಳಿಗಾಗಿ ವಿಮಾನ ಟಿಕೆಟ್‌ಗೆ ಹಣವನ್ನು ಹೊಂದಿಸಿ ಮಂದಿರಾ ಬೇಡಿ ಭಾರತೀಯ ತಂಡಕ್ಕೆ ಸಹಾಯ ಮಾಡಿದರು.
ಜಾಹೀರಾತಿನ ಸಂಪೂರ್ಣ ಹಣವನ್ನು ತಂಡಕ್ಕೆ ನೀಡಿದ್ದ ಮಂದಿರಾ
ಒಮ್ಮೆ ಒಂದು ಜ್ಯುವೆಲ್ಲರಿ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಸಿಕ್ಕ ಸಂಪೂರ್ಣ ಹಣವನ್ನು ಮಂದಿರಾ ಬೇಡಿ ಅವರು ತಂಡಕ್ಕೆ ನೀಡಿದ್ದರು ಎಂದು ಮಹಿಳಾ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ನೂತನ್ ಗವಾಸ್ಕರ್ ಹೇಳಿದ್ದಾರೆ. ಆ ಹಣವನ್ನು ಬಳಸಿ ಭಾರತೀಯ ಮಹಿಳಾ ತಂಡದ ಇಂಗ್ಲೆಂಡ್ ಪ್ರವಾಸಕ್ಕಾಗಿ ಆಟಗಾರ್ತಿಯರಿಗೆ ಟಿಕೆಟ್ ಖರೀದಿಸಲಾಗಿತ್ತು. 1973ರಲ್ಲಿ ಸ್ಥಾಪನೆಯಾದ ಮಹಿಳಾ ಕ್ರಿಕೆಟ್ ಸಂಸ್ಥೆ 2006ರವರೆಗೆ ಸ್ವತಂತ್ರ ಸಂಘಟನೆಯಾಗಿ ಕಾರ್ಯನಿರ್ವಹಿಸಿತು. 2006ರಲ್ಲಿ ಮಹಿಳಾ ಕ್ರಿಕೆಟ್ ಸಂಸ್ಥೆಯನ್ನು ಬಿಸಿಸಿಐ ಅಡಿಯಲ್ಲಿ ತರಲಾಯಿತು. ಭಾರತ ಮಹಿಳಾ ತಂಡವು ಇಂದು ಚಾಂಪಿಯನ್ ಆಗಿ ಮೆರೆದಾಡುತ್ತಿರಬಹುದು. ಆದರೆ ಆರಂಭದಲ್ಲಿ ಭಾರತ ತಂಡ ಬಲಿಷ್ಠವಾಗಿ ರೂಪುಗೊಳ್ಳಲು ಮಂದಿರಾ ಬೇಡಿ ಅವರಂತವರ ಸಹಕಾರವನ್ನು ಯಾರೂ ಮರೆಯಬಾರದು.
ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭವಾಗಿ ಕೇವಲ ಮೂರು ವರ್ಷದಲ್ಲೇ ಚೊಚ್ಚಲ ಐಸಿಸಿ ಟ್ರೋಫಿ ಗೆದ್ದ ಭಾರತ!
ಇನ್ನು ಇತ್ತೀಚಿಗಿನ ವರ್ಷಗಳಲ್ಲಿ ಮಹಿಳಾ ಐಪಿಎಲ್ ಎಂದೇ ಖ್ಯಾತಿ ಗಳಿಸಿರುವ ವುಮೆನ್ಸ್ ಪ್ರೀಮಿಯರ್ ಲೀಗ್ ಕೂಡಾ ಭಾರತದ ಈ ಅದ್ಭುತ ಸಾಧನೆ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು. 2023ರಲ್ಲಿ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭವಾಯಿತು. ಇದರ ಮೂಲಕ ಹಲವು ಪ್ರತಿಭಾನ್ವಿತ ಆಟಗಾರ್ತಿಯರು ಬೆಳಕಿಗೆ ಬಂದರು. ಇನ್ನು ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡ 15 ಆಟಗಾರ್ತಿಯರ ಪೈಕಿ 10 ಆಟಗಾರ್ತಿಯರಿಗೆ ಇದು ಚೊಚ್ಚಲ ವಿಶ್ವಕಪ್ ಆಗಿದೆ. ಇನ್ನು ಡಬ್ಲ್ಯೂಪಿಎಲ್ ಆರಂಭವಾಗಿ ಕೇವಲ ಮೂರನೇ ವರ್ಷದಲ್ಲಿ ಭಾರತ ಮಹಿಳಾ ತಂಡ ಐಸಿಸಿ ಟ್ರೋಫಿ ಜಯಿಸಿದೆ. ಇನ್ನೂ ಕಾಕತಾಳೀಯ ಸಂಗತಿಯೆಂದರೇ 2008ರಲ್ಲಿ ಐಪಿಎಲ್ ಆರಂಭವಾಗಿತ್ತು. ಇದಾಗಿ ಮೂರು ವರ್ಷದಲ್ಲಿ ಅಂದರೆ 2011ರಲ್ಲಿ ಭಾರತ ಪುರುಷರ ತಂಡವು ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು.
