ಆರ್‌ಸಿಬಿ-ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈಗಾಗಲೇ ಅಹಮ್ಮದಾಬಾದ್‌ನಲ್ಲಿ ಉತ್ತಮ ಮಳೆಯಾಗುತ್ತಿದೆ. ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ?

ಲಖನೌ(ಜೂ.02) ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಜೂನ್ 3ರಂದು ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಆದರೆ ಕಳೆದೆರಡು ದಿನದಿಂದ ಅಹಮ್ಮದಾಬಾದ್‌ನಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೇ ಕಾರಣದಿಂದ 2ನೇ ಕ್ವಾಲಿಫೈಯರ್ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಇದೀಗ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಉಭಯ ತಂಡಗಳು ಟ್ರೋಫಿಗಾಗಿ ಇಷ್ಟು ವರ್ಷ ಕಾದಿದೆ. ಆದರೆ ಇದೀಗ ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಕತೆ ಏನು ಅನ್ನೋ ಆತಂಕ ಶುರುವಾಗಿದೆ.

ಫೈನಲ್ ಪಂದ್ಯ ಮಳೆಗೆ ರದ್ದಾದರೆ ನಿಯಮವೇನು?

ಐಪಿಎಲ್ 2025ರ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಐಪಿಎಲ್ ನಿಯಮ ಏನು ಹೇಳುತ್ತೆ? ಮಳೆ ಬಂದು ನಿಂತರೆ ಸಮಸ್ಯೆ ಇರುವುದಿಲ್ಲ. ಕಾರಣ 120 ನಿಮಿಷ ಹೆಚ್ಚುವರಿ ಸಮಯ ಸೇರಿಸಲಾಗುತ್ತದೆ. ಹೀಗಾಗಿ ಮಳೆ ಅಡ್ಡಿಪಡಿಸಿದರೂ ಪಂದ್ಯ ವಿಳಂಬವಾಗಿ ಆರಂಭಗೊಳ್ಳಲಿದೆ. ಅತೀವ ಮಳೆ ಹಾಗೂ ಪಂದ್ಯ ಆಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ ಜೂನ್ 3ರ ಪಂದ್ಯ ರದ್ದಾಗಲಿದೆ. ಮೀಸಲು ದಿನಕ್ಕೆ ಫೈನಲ್ ಪಂದ್ಯ ಮುಂದೂಡಲಾಗುತ್ತದೆ.

ಮೀಸಲು ದಿನದಲ್ಲೂ ಮಳೆ ಬಂದರೆ ಫಲಿತಾಂಶ ಏನು?

ಜೂನ್ 3ರಂದು ಮಳೆಯಿಂದ ಪಂದ್ಯ ನಡೆಸುವುದು ಅಸಾಧ್ಯವಾದರೆ ಮೀಸಲು ದಿನವಾದ ಜೂನ್ 4 ರಂದು ಪಂದ್ಯ ನಡೆಯಲಿದೆ. ಆದರೆ ಜೂನ್ ನಾಲ್ಕರಂದು ಮಳೆಯಿಂದ ಪಂದ್ಯ ವಿಳಂಬಗೊಂಡರೆ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಈ ಮೂಲಕ ಓವರ್ ಕಡಿತಗೊಳ್ಳದಂತೆ ಪಂದ್ಯ ಆಯೋಜಿಸುವ ಪ್ರಯತ್ನ ಮಾಡಲಾಗುತ್ತದೆ. ಒಂದು ವೇಳೆ ಮೀಸಲು ದಿನದಲ್ಲೂ ಮಳೆಯಿಂದ ಪಂದ್ಯ ಆಯೋಜನೆ ಅಸಾಧ್ಯವಾದರೆ, ಪಂದ್ಯ ರದ್ದಾಗಲಿದೆ. ಅಂಕಪಟ್ಟಿ ಅಧಾರದ ಮೇಲೆ ಚಾಂಪಿಯನ್ ನಿರ್ಧರಿಸಲಾಗುತ್ತದೆ.

ಪ್ಲೇ ಆಫ್ ಪಂದ್ಯಗಳು ಪರಿಗಣನೆಯಾಗುತ್ತಾ?

ಮೀಸಲು ದಿನದ ಫೈನಲ್ ಪಂದ್ಯ ರದ್ದಾದರೆ ಅಂಕಪಟ್ಟಿ ಆಧಾರದಲ್ಲಿ ಚಾಂಪಿಯನ್ ನಿರ್ಧರಿಸಲಾಗುತ್ತದೆ. ಅಂದರೆ ಲೀಗ್ ಹಂತದಲ್ಲಿನ ಅಂಕಪಟ್ಟಿಯಲ್ಲಿನ ಸ್ಥಾನ ಪರಿಗಣಿಸಿ ಚಾಂಪಿಯನ್ ನಿರ್ಧರಿಸಲಾಗುತ್ತದೆ. ಇಲ್ಲಿ ಪ್ಲೇ ಆಫ್ ಟೂರ್ನಿಯ ಪಂದ್ಯಗಳು ಪರಿಗಣನೆಯಾಗುವುದಿಲ್ಲ. ಹೀಗಾಗಿ ಎರಡೂ ದಿನ ಮಳೆಯಿಂದ ಪಂದ್ಯ ಸಂಪೂರ್ಣ ರದ್ದಾದರೆ ಪಂಜಾಬ್ ಕಿಂಗ್ಸ್ ಚಾಂಪಿಯನ್ ಕಿರೀಟ್ ಅಲಂಕರಿಸಲಿದೆ. ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿತ್ತು.

ಪಂದ್ಯ ಟೈ ಆದರೆ ಇಬ್ಬರಿಗೂ ಟ್ರೋಫಿ ಹಂಚಲಾಗುತ್ತಾ?

ಫೈನಲ್ ಪಂದ್ಯ ಟೈ ಆದರೆ ಟ್ರೋಫಿ ಹಂಚಲಾಗುವುದಿಲ್ಲ. ಪಂದ್ಯ ಟೈ ಆದರೆ, ಎಂದಿನಂತೆ ಸೂಪರ್ ಓವರ್ ಪಂದ್ಯ ನಡೆಯಲಾಗುತ್ತದೆ. ಈ ಸೂಪರ್ ಓವರ್ ಕೂಡ ಟೈ ಆದರೆ ಮತ್ತೊಂದು ಓವರ್ ನಡೆಸಲಾಗುತ್ತದೆ. ಗೆಲುವಿನ ವರೆಗೂ ಸೂಪರ್ ಓವರ್ ನಡೆಯಲಾಗುತ್ತದೆ.

ಪಂಜಾಬ್ ಮಣಿಸಿ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ

ಪ್ಲೇ ಆಫ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮಣಿಸಿ ಐಪಿಎಲ್ ಟೂರ್ನಿ ಫೈನಲ್ ಪ್ರವೇಶ ಮಾಡಿದೆ. ಪಂಜಾಬ್ ವಿರುದ್ಧ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು. ಪಂಜಾಬ್ ಕಿಂಗ್ಸ್ ತಂಡವನ್ನು 101 ರನ್‌ಗೆ ಆಲೌಟ್ ಮಾಡಿತ್ತು. ಈ ಟಾರ್ಗೆಟ್‌ನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಇತ್ತ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಬೃಹತ್ ಮೊತ್ತ ಚೇಸ್ ಮಾಡಿದೆ. ಮುಂಬೈ ಇಂಡಿಯನ್ಸ್ ನೀಡಿದ 203 ರನ್ ಗುರಿಯನ್ನು ಪಂಜಾಬ್ ಕಿಂಗ್ಸ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಈ ಮೂಲಕ ಫೈನಲ್ ಪ್ರವೇಶಿಸಿತ್ತು.