ಗಾಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸಂಕಷ್ಟದಲ್ಲಿದೆ. ಆಸೀಸ್ 445 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಭಾರತ 7 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದ್ದು, ಫಾಲೋಆನ್ ತಪ್ಪಿಸಲು ಇನ್ನೂ 45 ರನ್‌ಗಳ ಅವಶ್ಯಕತೆಯಿದೆ. 13 ವರ್ಷಗಳ ಬಳಿಕ ಭಾರತ ಫಾಲೋಆನ್ ಭೀತಿ ಎದುರಿಸುತ್ತಿದೆ.

ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಗಾಬಾ ಮೈದಾನ ಆತಿಥ್ಯ ವಹಿಸಿದೆ. ಈ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಬಿಗಿ ಹಿಡಿತ ಸಾಧಿಸಿದೆ. ಇದೇ ವೇಳೆ ಟೀಂ ಇಂಡಿಯಾ ಬರೋಬ್ಬರಿ 13 ವರ್ಷಗಳ ಬಳಿಕ ಫಾಲೋ ಆನ್‌ಗೆ ಒಳಗಾಗುವ ಭೀತಿಗೆ ಸಿಲುಕಿದೆ. 

ಗಾಬಾ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ಆಸ್ಟ್ರೇಲಿಯಾ ತಂಡವು ಟ್ರ್ಯಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಅವರ ಆಕರ್ಷಕ ಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಇನ್ನು ಪಂದ್ಯಕ್ಕೆ ಎರಡನೇ ದಿನದಾಟಕ್ಕೆ ಮಳೆರಾಯ ಅಡ್ಡಿಪಡಿಸಿತ್ತು. ಇನ್ನು ಮೂರನೇ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾದ ಅಗ್ರಕ್ರಮಾಂಕದ ಬ್ಯಾಟರ್‌ಗಳು ದಯನೀಯ ಬ್ಯಾಟಿಂಗ್ ವೈಪಲ್ಯ ಅನುಭವಿಸಿದರು. ಪರಿಣಾಮ 74 ರನ್ ಗಳಿಸುವಷ್ಟರಲ್ಲಿ ಭಾರತದ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಇನ್ನು ಇದಾದ ಬಳಿಕ ಜಡೇಜಾ ಹಾಗೂ ಕೆ ಎಲ್ ರಾಹುಲ್ ಸಮಯೋಚಿತ ಜತೆಯಾಟವಾಡುವ ಮೂಲಕ ತಂಡಕ್ಕೆ ಕೊಂಚ ಆಸರೆಯಾದರು. ಹೀಗಿದ್ದೂ ಕೆ ಎಲ್ ರಾಹುಲ್ 139 ಎಸೆತಗಳನ್ನು ಎದುರಿಸಿ 84 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಮತ್ತೊಂದು ತುದಿಯಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಅಜೇಯ 65 ರನ್ ಸಿಡಿಸುವ ಮೂಲಕ ತಂಡವನ್ನು ಫಾಲೋ ಆನ್ ಭೀತಿಯಿಂದ ಪಾರುಮಾಡಲು ಹೋರಾಡುತ್ತಿದ್ದಾರೆ. ಟೀಂ ಇಂಡಿಯಾ ಸದ್ಯ ನಾಲ್ಕನೇ ದಿನದಾಟದ ಚಹಾ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡು 201 ರನ್ ಬಾರಿಸಿದ್ದು, ಫಾಲೋ ಆನ್‌ನಿಂದ ಬಚಾವಾಗಲು ಇನ್ನೂ 45 ರನ್ ಬಾರಿಸಬೇಕಿದೆ.

ರಿಂಕು ಸಿಂಗ್‌ಗೆ ಒಲಿದ ನಾಯಕ ಪಟ್ಟ, ಸ್ಪೋಟಕ ಬ್ಯಾಟರ್ ಹೆಗಲೇರಿದ ಮಹತ್ವದ ಜವಾಬ್ದಾರಿ!

ಅಷ್ಟಕ್ಕೂ ಟೆಸ್ಟ್ ಕ್ರಿಕೆಟ್‌ನಲ್ಲಿ ಫಾಲೋ ಆನ್ ಅಂದ್ರೆ ಏನು? 

ಫಾಲೋ ಆನ್ ರೂಲ್ಸ್‌ ಅನ್ನು ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೆಸ್ಟ್‌ ಮಾದರಿಯಲ್ಲಿ ಹಾಗೆ ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ದರ್ಜೆ(ಉದಾಹರಣೆಗೆ ರಣಜಿ ಟ್ರೋಫಿ)ಯಲ್ಲಿ ಫಾಲೋ ಆನ್ ಬಳಸಲಾಗುತ್ತದೆ. ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದು ತಂಡವು ಎರಡು ಬಾರಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಅಂದರೆ ಎರಡು ತಂಡಗಳಿಂದ 4 ಇನ್ನಿಂಗ್ಸ್‌ಗಳ ಆಟ ನೋಡಲು ಸಿಗುತ್ತದೆ. ಆದರೆ ಫಾಲೋ ಆನ್ ಹೇರಿದರೆ ಬಹುತೇಕ ಮೂರು ಇನ್ನಿಂಗ್ಸ್‌ಗಳಲ್ಲೇ ಪಂದ್ಯ ಮುಕ್ತಾಯವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಯಾವಾಗ ಫಾಲೋ ಆನ್ ಹೇರಬಹುದು?

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದಾಗ ಎದುರಾಳಿ ತಂಡದ ಮೇಲೆ ಬ್ಯಾಟಿಂಗ್ ಮಾಡಿದ ತಂಡದ ನಾಯಕ ಫಾಲೋ ಆನ್ ಹೇರಲು ಅವಕಾಶವಿದೆ. ಕ್ರಿಕೆಟ್ ಕಾನೂನಿನ ಲಾ 14.2 ಪ್ರಕಾರ ಮೊದಲು ಫಾಲೋ ಆನ್ ಹೇರುವ ಮುನ್ನ ಆ ತಂಡದ ನಾಯಕ ಎದುರಾಳಿ ತಂಡದ ನಾಯಕ ಹಾಗೂ ಅಂಪೈರ್‌ಗೆ ತಾವು ಫಾಲೋ ಆನ್ ಹೇರುತ್ತಿರುವುದಾಗಿ ತಿಳಿಸಬೇಕು. ಒಮ್ಮೆ ಫಾಲೋ ಆನ್ ಹೇರಿದ ಬಳಿಕ ಯಾವುದೇ ಕಾರಣಕ್ಕೂ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ.

ಆಸ್ಟ್ರೇಲಿಯಾದಲ್ಲಿ 50 ವಿಕೆಟ್‌: ಟೆಸ್ಟ್‌ನಲ್ಲಿ ಭಾರತೀಯ ವೇಗಿ ಬುಮ್ರಾ ಹೊಸ ದಾಖಲೆ!

ಫಾಲೋ ಆನ್ ಹೇರಲು ಎಷ್ಟು ರನ್ ಲೀಡ್ ಬೇಕು?

ಫಾಲೋ ಆನ್ ಹೇರಲು ಕನಿಷ್ಠ ಎಷ್ಟು ರನ್ ಲೀಡ್ ಇರಬೇಕು ಎನ್ನುವುದು ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಾದ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡದ ನಾಯಕ ಎದುರಾಳಿ ತಂಡದ ಮೇಲೆ ಫಾಲೋ ಆನ್ ಹೇರಬೇಕೆಂದರೆ ಕನಿಷ್ಠ ಮೊದಲ ಇನ್ನಿಂಗ್ಸ್‌ನಲ್ಲಿ 200 ರನ್‌ಗಳ ಲೀಡ್ ಹೊಂದಿರಬೇಕಾಗುತ್ತದೆ. ಇನ್ನು ದೇಶಿಯ ಕ್ರಿಕೆಟ್‌ನಲ್ಲಿ ಅಂದರೆ ರಣಜಿ ಟ್ರೋಫಿ ಟೂರ್ನಿಯಲ್ಲಿ ಫಾಲೋ ಆನ್ ಹೇರಬೇಕಿದ್ದರೇ ಕನಿಷ್ಠ 150 ರನ್‌ಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಕಾಯ್ದುಕೊಂಡಿರಬೇಕಾಗುತ್ತದೆ.

ಒಂದು ಉದಾಹರಣೆಯ ಮೂಲಕ ನೋಡುವುದಾದರೇ, ಇದೇ ಗಾಬಾ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಆಸೀಸ್ 445 ರನ್ ಬಾರಿಸಿದೆ. ಇದೀಗ ಭಾರತ ತಂಡದ ಮೇಲೆ ಪ್ಯಾಟ್ ಕಮಿನ್ಸ್ ಫಾಲೋ ಆನ್ ಹೇರಬೇಕಿದ್ದರೇ, ಟೀಂ ಇಂಡಿಯಾವನ್ನು 245 ರನ್‌ಗಳೊಳಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಮಾಡಬೇಕಿದೆ. 

ಭಾರತ ಕ್ರಿಕೆಟ್ ತಂಡವು 2011ರಲ್ಲಿ ಕೊನೆಯ ಬಾರಿಗೆ ಫಾಲೋ ಆನ್‌ಗೆ ಸಿಲುಕಿತ್ತು. ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಫಾಲೋ ಆನ್‌ಗೆ ಒಳಗಾಗಿತ್ತು. ಇದಾದ ಬಳಿಕ ಟೀಂ ಇಂಡಿಯಾ ಕಳೆದ 13 ವರ್ಷಗಳಿಂದ ಫಾಲೋ ಆನ್‌ಗೆ ಒಳಗಾಗಿಲ್ಲ.