ಟೀಂ ಇಂಡಿಯಾಗೆ ಶಾಕ್; 2ನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ವಿಂಡೀಸ್!
ಟೀಂ ಇಂಡಿಯಾ ಲೆಕ್ಕಾಚಾರವನ್ನು ವೆಸ್ಟ್ ಇಂಡೀಸ್ ಉಲ್ಟಾ ಮಾಡಿದೆ. ಸುಲಭವಾಗಿ ಸರಣಿ ಗೆಲ್ಲೋ ಭಾರತದ ಪ್ಲಾನ್ ಗೆ ಬ್ರೇಕ್ ಬಿದ್ದಿದೆ. 2ನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೈನ್ಯ ಮುಗ್ಗರಿಸೋ ಮೂಲಕ ನಿರಾಸೆ ಅನುಭವಿಸಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
"
ತಿರುವನಂತಪುರಂ(ಡಿ.08): ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯ ಗೆದ್ದು ಸರಣಿ ಕೈವಶ ಮಾಡೋ ತವಕದಲ್ಲಿದ್ದ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ತಿರುವನಂತಪುರಂ ಚುಟುಕು ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಗೊಂಡಿದ್ದು, ಇದೀಗ ಡಿಸೆಂಬರ್ 11 ರಂದು ನಡೆಯಲಿರುವ 3ನೇ ಹಾಗೂ ಅಂತಿಮ ಟಿ20 ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.
ಗೆಲುವಿಗೆ 171 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಿತು. ಲಿಂಡ್ಲ ಸಿಮೋನ್ಸ್ ಹಾಗೂ ಇವಿನ್ ಲಿವಿಸ್ ಮೊದಲ ವಿಕೆಟ್‌ಗೆ 73 ರನ್ ಜೊತೆಯಾಟ ನೀಡಿದರು. 35 ಎಸೆತದಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ ಲಿವಿಸ್ 40 ರನ್ ಸಿಡಿಸಿ ಔಟಾದರು. ಆದರೆ ಸಿಮೋನ್ಸ್ ಅಬ್ಬರ ಮುಂದುವರಿಯಿತು.
ಶಿಮ್ರೋನ್ ಹೆಟ್ಮೆಯರ್ 14 ಎಸೆತದಲ್ಲಿ 3 ಭರ್ಜರಿ ಸಿಕ್ಸರ್ ಮೂಲಕ 23 ರನ್ ಕಾಣಿಕ ನೀಡಿದರು. ಇತ್ತ ಸಿಮೋನ್ಸ್ ಹಾಫ್ ಸೆಂಚುರಿ ಸಿಡಿಸಿ ತಂಡಕ್ಕೆ ಆಸರೆಯಾದರು. ಸಿಮೋನ್ಸ್‌ಗೆ ನಿಕೋಲಸ್ ಪೂರನ್ ಉತ್ತಮ ಸಾಥ್ ನೀಡಿದರು. ಸಿಮೋನ್ಸ್ ಅಜೇಯ 67 ರನ್ ಹಾಗೂ ಪೂರನ್ ಅಜೇಯ 38 ರನ್ ಸಿಡಿಸಿದರು. ಈ ಮೂಲಕ ವಿಂಡೀಸ್ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು. 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ವಿಂಡೀಸ್ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿತು.