ಮೊದಲ ಎರಡು ಟಿ20 ಪಂದ್ಯಗಳಲ್ಲಿ ಎರಡೂ ತಂಡಗಳು ಸಿಹಿ ಕಹಿ ಫಲಿತಾಂಶ ಕಂಡಿವೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುನ್ನಡೆ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರವಾಸಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ತಂಡಗಳು ಇಂದು ಸೇಂಟ್‌ ಕಿಟ್ಸ್‌ನ ಬಾಸೆಟೆರೆಯ ವಾರ್ನರ್‌ ಪಾರ್ಕ್‌ನಲ್ಲಿ ಮುಖಾಮುಖಿಯಾಗಲಿವೆ. 

ಬಾಸೆಟೆರೆ (ಆ.2): ಆತಿಥೇಯ ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಮುನ್ನಡೆ ಕಾಣಲೇಬೇಕು ಎನ್ನುವ ಹಂಬಲದಲ್ಲಿರುವ ಪ್ರವಾಸಿ ಭಾರತ ತಂಡ ಮೂರನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದಿದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಕಂಡಿದ್ದರೆ, 2ನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತ್ತು. ಸೋಮವಾರ ಪಂದ್ಯ ನಡೆದ ಪಿಚ್‌ನಲ್ಲಿಯೇ 3ನೇ ಟಿ20 ಪಂದ್ಯ ನಡೆಯಲಿದೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯ ಗೆದ್ದುಕೊಂಡಿವೆ. ಸೋಮವಾರ ನಡೆದ 2ನೇ ಟಿ20 ಪಂದ್ಯದ 2ನೇ ಇನ್ನಿಂಗ್ಸ್‌ ವೇಳೆ ವಿಕೆಟ್‌ ಸ್ವಲ್ಪ ನಿಧಾನಗತಿಯಾಗಿತ್ತು. ಹಾಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ನಾವು ದೊಡ್ಡ ಮೊತ್ತವನ್ನು ಪೇರಿಸಲು ಬಯಸುತ್ತೇವೆ. ನಾವು ಚೆಂಡಿನೊಂದಿಗೆ ಈಗಾಗಲೇ ಪರಿಸ್ಥಿತಿಗಳನ್ನು ಚೆನ್ನಾಗಿ ಬಳಸಿಕೊಂಡಿದ್ದೇವೆ. ನಾವು ನಿರಂತರವಾಗಿ ವಿಕೆಟ್‌ಗಳಿಗಾಗಿ ಎದುರು ನೋಡುತ್ತಿದ್ದೆವು ಮತ್ತು ಕೆಲವು ವಿಷಯಗಳು ನಮ್ಮ ಯೋಜನೆಯಂತೆ ಸಾಗಿದವು ಎಂದು ವೆಸ್ಟ್‌ ಇಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌ ಪಂದ್ಯದ ಟಾಸ್‌ ವೇಳೆ ಹೇಳಿದ್ದಾರೆ. ಪಂದ್ಯಕ್ಕಾಗಿ ಭಾರತ ಒಂದು ಪ್ರಮುಖ ಬದಲಾವಣೆ ಮಾಡಿದೆ.

ಇಲ್ಲಿನ ಪರಿಸ್ಥಿತಿಗಳ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಪವರ್‌ ಪ್ಲೇ ಅವಧಿಯನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎನ್ನುವುದು ನಮ್ಮ ಆಸೆಯೂ ಹೌದು. ಇದು ಚಿಕ್ಕ ಮೈದಾನ, ಸಿಕ್ಸರ್‌ಗಳನ್ನು ಸುಲಭವಾಗಿ ಸಿಡಿಸಬಹುದು. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಲ್ಲಿನ ಸರಾಸರಿ ಸ್ಕೋರ್‌ ತುಂಬಾ ಜಾಸ್ತಿ ಇಲ್ಲ. ಅಪಾಯಕಾರಿ ಶಾಟ್‌ಗಳನ್ನು ಬಾರಿಸುವ ವೇಳೆ ಎದುರಿಸುವ ಸಮಸ್ಯೆಗಳ ಬಗ್ಗೆಯೂ ಆಟಗಾರರು ಮಾತನಾಡಿದ್ದಾರೆ. ಎಡಗೈ ವೇಗಿಗಳ ಎದುರು ತಂಡ ಪರದಾಡುತ್ತಿದೆ ಎನ್ನುವುದನ್ನು ನಾನು ಒಪ್ಪೋದಿಲ್ಲ. ಪಂದ್ಯದ ಎಲ್ಲಾ ವಿಭಾಗದಲ್ಲಿ ನಾವು ಉತ್ತಮವಾಗಿ ಅಡಬೇಕು.ಕಳೆದ ಎರಡು ಸರಣಿಗಳಲ್ಲಿ ನಮ್ಮ ಎಡಗೈ ವೇಗಿಗಳು ಉತ್ತಮವಾಗಿ ದಾಳಿ ನಡೆಸಿದ್ದಾರೆ. ಪಂದ್ಯಕ್ಕಾಗಿ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ರವೀಂದ್ರ ಜಡೇಜಾಗೆ ಸ್ವಲ್ಪ ವಿಶ್ರಾಂತಿ ನೀಡಿದ್ದು, ಅವರ ಬದಲು ದೀಪಕ್‌ ಹೂಡಾ ಸ್ಥಾನ ಪಡೆದಿದ್ದಾರೆ ಎಂದು ರೋಹಿತ್ ಶರ್ಮ ಟಾಸ್‌ ವೇಳೆ ಹೇಳಿದ್ದಾರೆ.

ಪಂದ್ಯಕ್ಕಾಗಿ ವೆಸ್ಟ್‌ ಇಂಡೀಸ್‌ ತಂಡವೂ ಒಂದು ಬದಲಾವಣೆ ಮಾಡಿದ್ದು, ಡೊಮಿನಿಕ್ ಡ್ರೇಕ್ಸ್ ಬದಲು ಓಡಿಯನ್ ಸ್ಮಿತ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತ ಪ್ಲೇಯಿಂಗ್ ಇಲೆವೆನ್‌: ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಆರ್ಶ್ ದೀಪ್‌ ಸಿಂಗ್‌

ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಸಿ), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿ.ಕೀ), ರೋವ್‌ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್