ವೆಲ್ಲಿಂಗ್ಟನ್(ಡಿ.13): ನ್ಯೂಜಿಲೆಂಡ್‌ ವೇಗಿಗಳಾದ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಮಾರಕ ದಾಳಿಗೆ ತತ್ತರಿಸಿರುವ ವೆಸ್ಟ್‌ ಇಂಡೀಸ್ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಹೀನಾಯ ಸೋಲಿನತ್ತ ಮುಖ ಮಾಡಿದೆ. ಮೂರನೇ ದಿನದಾಟದಂತ್ಯಕ್ಕೆ ಫಾಲೋ ಆನ್‌ಗೆ ಒಳಗಾಗಿ 6 ವಿಕೆಟ್‌ ಕಳೆದುಕೊಂಡು 244 ರನ್ ಬಾರಿಸಿದ್ದು, ಇನಿಂಗ್ಸ್‌ ಸೋಲಿನಿಂದ ಪಾರಾಗಲು ಕೆರಿಬಿಯನ್ ಪಡೆ ಇನ್ನೂ 85 ರನ್ ಬಾರಿಸಬೇಕಿದೆ.

ಎರಡನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 124 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ತಂಡ ಇಂದು ಮುಂಜಾನೆ ತನ್ನ ಖಾತೆಗೆ ಮತ್ತೆ 7 ರನ್ ಕಲೆಹಾಕುವಷ್ಟರಲ್ಲಿ ಮತ್ತೆರಡು ವಿಕೆಟ್‌ ಕಳೆದುಕೊಂಡು ಫಾಲೋ ಆನ್‌ಗೆ ಸಿಲುಕಿತು. ನ್ಯೂಜಿಲೆಂಡ್ ಪರ ಟಿಮ್‌ ಸೌಥಿ ಹಾಗೂ ಕೈಲ್ ಜ್ಯಾಮಿಸನ್ ತಲಾ 5 ವಿಕೆಟ್ ಪಡೆದು ಕೆರಿಬಿಯನ್ನರ ಪತನಕ್ಕೆ ಕಾರಣರಾದರು.

ಇನ್ನು 329 ರನ್‌ಗಳ ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ವೆಸ್ಟ್‌ ಇಂಡೀಸ್ ತಂಡಕ್ಕೆ ಉತ್ತಮ ಆರಂಭ ಪಡೆಯಲು ಮತ್ತೆ ವಿಫಲವಾಯಿತು. ತಂಡ 42 ರನ್ ಕಲೆಹಾಕುವಷ್ಟರಲ್ಲಿ  ಕ್ರೆಗ್‌ ಬ್ರಾಥ್‌ವೈಟ್‌(24) ಹಾಗೂ ಡ್ಯಾರನ್ ಬ್ರಾವೋ(4) ಟ್ರೆಂಟ್‌ ಬೌಲ್ಟ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ಜಾನ್‌ ಕ್ಯಾಂಬೆಲ್(68), ಸಮರ್ಥ್ ಬ್ರೂಕ್ಸ್‌(36) ಜೆರ್ಮೈನ್ ಬ್ಲಾಕ್‌ವುಡ್(25) ಕೆಲಕಾಲ ಕಿವೀಸ್ ಪಡೆ ಎದುರು ಪ್ರತಿರೋಧ ತೋರಿದರು.

2ನೇ ಟೆಸ್ಟ್‌: ಕಿವೀಸ್ ಬಿಗಿ ಹಿಡಿತದಲ್ಲಿ ವಿಂಡೀಸ್..!

ಸೋಲು ತಪ್ಪಿಸ್ತಾರಾ ನಾಯಕ ಹೋಲ್ಡರ್: ಒಂದು ಹಂತದಲ್ಲಿ 170 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಮತ್ತೊಂದು ಇನಿಂಗ್ಸ್‌ ಸೋಲಿನತ್ತ ಮುಖ ಮಾಡಿದ್ದ ವೆಸ್ಟ್‌ ಇಂಡೀಸ್ ತಂಡಕ್ಕೆ ನಾಯಕ ಜೇಸನ್ ಹೋಲ್ಡರ್(60) ಹಾಗೂ ಜೆಸುವಾ ಡಿಸಿಲ್ವಾ(25) ಏಳನೇ ವಿಕೆಟ್‌ಗೆ ಮುರಿಯದ 74 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಅಜೇಯ ಅರ್ಧಶತಕ ಬಾರಿಸಿರುವ ನಾಯಕ ಜೇಸನ್ ಹೋಲ್ಡರ್ ಕಿವೀಸ್ ಎದುರು ತಂಡವನ್ನು ಸೋಲಿನಿಂದ ಪಾರು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಪರ ವೇಗಿ ಟ್ರೆಂಟ್ ಬೌಲ್ಟ್ 3 ವಿಕೆಟ್‌ ಪಡೆದರೆ, ಕೈಲ್ ಜ್ಯಾಮಿಸನ್ 2 ಹಾಗೂ ನೀಲ್‌ ವ್ಯಾಗ್ನರ್ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 460/10
ಹೆನ್ರಿ ನಿಕೋಲಸ್: 174
ಶೆನಾನ್ ಗೇಬ್ರಿಯಲ್:93/3

ವೆಸ್ಟ್ ಇಂಡೀಸ್‌ ಮೊದಲ ಇನಿಂಗ್ಸ್‌: 131/10
ಬ್ಲಾಕ್‌ವುಡ್:69
ಟಿಮ್ ಸೌಥಿ: 32/5

ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್‌: 244/6
ಜಾನ್‌ ಕ್ಯಾಂಬೆಲ್‌: 68
ಟ್ರೆಂಟ್ ಬೌಲ್ಟ್: 75/3

(* ಮೂರನೇ ದಿನದಾಟ ಮುಕ್ತಾಯದ ವೇಳೆಗೆ)