ವೆಲ್ಲಿಂಗ್ಟನ್(ಡಿ.12): ನ್ಯೂಜಿಲೆಂಡ್‌ನ ಹೆನ್ರಿ ನಿಕೋಲಸ್ ಅತ್ಯಾಕರ್ಷಕ(174) ಬ್ಯಾಟಿಂಗ್ ಹಾಗೂ ಯುವ ವೇಗಿ ಕೈಲ್ ಜ್ಯಾಮಿಸ್ಸನ್ ಮಾರಕ ದಾಳಿಗೆ ತತ್ತರಿಸಿರುವ ವೆಸ್ಟ್‌ ಇಂಡೀಸ್ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮತ್ತೊಮ್ಮೆ ಭಾರೀ ಅಂತರದ ಸೋಲು ಅನುಭವಿಸುವ ಭೀತಿಗೆ ಸಿಲುಕಿದೆ. ಎರಡನೇ ದಿನದಾಟದಂತ್ಯಕ್ಕೆ ವೆಸ್ಟ್‌ ಇಂಡೀಸ್ 8 ವಿಕೆಟ್‌ ಕಳೆದುಕೊಂಡು ಕೇವಲ 124 ರನ್ ಬಾರಿಸಿದ್ದು, ಇನ್ನೂ 336 ರನ್‌ಗಳ ಹಿನ್ನಡೆಯಲ್ಲಿದೆ.

ಹೌದು, ಎರಡನೇ ದಿನದಾಟದ ಆರಂಭದಲ್ಲಿ ಆತಿಥೇಯ ನ್ಯೂಜಿಲೆಂಡ್ ತನ್ನ ಖಾತೆಗೆ ಮತ್ತೆ 166 ರನ್ ಸೇರಿಸುವ ಮೂಲಕ 460 ಬಾರಿಸಿ ಆಲೌಟ್ ಆಯಿತು. ಮೊದಲ ದಿನವೇ ಶತಕ ಚಚ್ಚಿದ್ದ ಹೆನ್ರಿ ನಿಕೋಲಸ್ ಅಂತಿಮವಾಗಿ 280 ಎಸೆತಗಳನ್ನು ಎದುರಿಸಿ 21 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 174 ರನ್ ಬಾರಿಸಿ ರೋಸ್ಟನ್ ಚೇಸ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಇನ್ನು ಕೊನೆಯಲ್ಲಿ ನೀಲ್‌ ವ್ಯಾಗ್ನರ್ ಕೇವಲ 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 66 ರನ್‌ ಬಾರಿಸುವುದರ ಜತೆಗೆ ತಂಡದ ಮೊತ್ತವನ್ನು 450ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 

ಇನ್ನು ನ್ಯೂಜಿಲೆಂಡ್‌ ನೀಡಿದ್ದ ಬೃಹತ್ ರನ್ ಬೆನ್ನಟ್ಟಲು ಹೊರಟ ವೆಸ್ಟ್‌ ಇಂಡೀಸ್ ತಂಡ ಎಂದಿನಂತೆ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕೆರಿಬಿಯನ್‌ ಪಡೆ 29 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಜೆರ್ಮೈನ್ ಬ್ಲಾಕ್‌ವುಡ್(69) ನ್ಯೂಜಿಲೆಂಡ್ ಬೌಲರ್‌ಗಳ ಎದುರು ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಕಿವೀಸ್‌ ಬೌಲಿಂಗ್‌ ಪಡೆಯೆದುರು ನೆಲಕಚ್ಚಿ ಆಡುವ ಪ್ರಯತ್ನ ಮಾಡಲಿಲ್ಲ. ವೆಸ್ಟ್‌ ಇಂಡೀಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಜಾನ್ ಕ್ಯಾಂಪ್‌ಬೆಲ್(14), ಸಮರ್ಥ್ ಬ್ರೂಕ್ಸ್(14) ಹಾಗೂ ಜೆರ್ಮೈನ್‌ ಬ್ಲಾಕ್‌ವುಡ್(69) ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.

ಹೆನ್ರಿ ನಿಕೋಲಸ್ ಶತಕ: ಕಿವೀಸ್‌ಗೆ ಮೊದಲ ದಿನದ ಮುನ್ನಡೆ

ನ್ಯೂಜಿಲೆಂಡ್ ಯುವ ವೇಗಿ ಕೈಲ್ ಜ್ಯಾಮಿಸ್ಸನ್ 34 ರನ್ ನೀಡಿ 5 ವಿಕೆಟ್‌ ಪಡೆದರೆ, ಟಿಮ್ ಸೌಥಿ 3 ವಿಕೆಟ್‌ ಕಬಳಿಸುವ ಮೂಲಕ ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳು ಪರದಾಡುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 460/10
ಹೆನ್ರಿ ನಿಕೋಲಸ್: 174
ಶೆನಾನ್ ಗ್ಯಾಬ್ರಿಯೆಲ್: 93/3

ವೆಸ್ಟ್‌ ಇಂಡೀಸ್: 124/8
ಜೆರ್ಮೈನ್‌ ಬ್ಲಾಕ್‌ವುಡ್: 69
ಕೈಲ್ ಜ್ಯಾಮಿಸ್ಸನ್: 34/5