ವೆಸ್ಟ್ ಇಂಡೀಸ್ ವೇಗಿ ಶಮಾರ್ ಜೋಸೆಫ್ ಅವರ ಮೇಲೆ 11 ಮಹಿಳೆಯರ ಮೇಲೆ ಬಲಾತ್ಕಾರ & ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಈ ಆರೋಪಗಳು ಇನ್ನೂ ಸಾಬೀತಾಗಿಲ್ಲವಾದರೂ, ಗಯಾನಾದ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಯುವತಿಯೊಬ್ಬರು ಜೋಸೆಫ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. 

ಬೆಂಗಳೂರು: ವೆಸ್ಟ್ ಇಂಡೀಸ್ ಸ್ಟಾರ್ ವೇಗಿ ಶಮಾರ್ ಜೋಸೆಫ್ ಸದ್ಯ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಶಮಾರ್ ಜೋಸೆಫ್ ಎರಡು ಇನ್ನಿಂಗ್ಸ್‌ಗಳಿಂದ 9 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಇದೆಲ್ಲದರ ಹೊರತಾಗಿಯೂ ನೀಳಕಾಯದ ಯುವ ವೇಗಿಯ ಮೇಲೆ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಶಮಾರ್ ಜೋಸೆಫ್ ಅವರು 11 ಮಹಿಳೆಯ ಮೇಲೆ ಬಲಾತ್ಕಾರ ಹಾಗೂ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಒಂದು ಮಾಧ್ಯಮದ ವರದಿಯ ಪ್ರಕಾರ ಅಪ್ರಾಪ್ತ ಬಾಲಕಿ ಸೇರಿದಂತೆ 11 ಮಹಿಳೆಯರ ಮೇಲೆ ಶಮಾರ್ ಜೋಸೆಫ್ ಬಲಾತ್ಕಾರ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಗಯಾನಾದ ಒಂದು ಪ್ರಖ್ಯಾತ ಸುದ್ದಿಸಂಸ್ಥೆಯ ವರದಿಯ ಪ್ರಕಾರ, 2023ರ ಮಾರ್ಚ್‌ 03ರಂದು ನ್ಯೂ ಆಮಸ್ಟರ್‌ಡ್ಯಾಂನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು 18 ವರ್ಷದ ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಸಾಮಾಜಿಕ ಸಂಪರ್ಕದ ನೆಪದಲ್ಲಿ ತನ್ನೊಂದಿಗೆ ಬರುವಂತೆ ಯುವತಿಯನ್ನು ಜೋಸೆಫ್ ಪುಸಲಾಯಿಸಿದ್ದ. ಇದಾದ ಬಳಿಕ ಕೋಣೆಯಲ್ಲಿ ತಮ್ಮನ್ನು ಬಲಾತ್ಕಾರ ಮಾಡಿದ್ದಾಗಿ ಆ ಯುವತಿ ಆರೋಪಿಸಿದ್ದಾರೆ. ಇದಷ್ಟೇ ಅಲ್ಲದೇ ಲಂಚ ನೀಡಿ ಈ ಪ್ರಕರಣವನ್ನು ಶಮಾರ್ ಜೋಸೆಫ್ ಮುಚ್ಚಿಹಾಕಲು ಪ್ರಯತ್ನಿಸಿದ್ದರು ಎನ್ನುವ ಆರೋಪ ಮಾಡಲಾಗಿದೆ.

ಇದಾದ ಕೆಲವೇ ಸಮಯದ ಬಳಿಕ ಮತ್ತೋರ್ವ ಮಹಿಳೆ ಕೂಡಾ, ವಿಡಿಯೋ ಕಾಲ್‌ ಸ್ಕ್ರೀನ್‌ಶಾಟ್, ವಾಯ್ಸ್‌ ನೋಟ್, ಮೆಡಿಕಲ್ ರಿಪೋರ್ಟ್ ಹಾಗೂ ಚಾಟಿಂಗ್ ಮೆಸೇಜ್‌ಗಳ ಸಾಕ್ಷಿಗಳನ್ನು ಇಟ್ಟುಕೊಂಡು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಇನ್ನೋರ್ವ ಸಂತ್ರಸ್ಥ ಮಹಿಳೆ ಹಣ ತೆಗೆದುಕೊಂಡು ಸುಮ್ಮನೇ ಇದ್ದು ಬಿಡಿ ಎಂದು ಜೋಸೆಫ್ ಆಮೀಷವೊಡ್ಡಿದ್ದರು ಎಂದು ಆರೋಪಿಸಿದ್ದಾರೆ. ಅಂದಹಾಗೆ ಇದುವರೆಗೂ ಶಮಾರ್ ಜೋಸೆಫ್ ಅವರ ಮೇಲಿನ ಯಾವೊಂದು ಆರೋಪವೂ ಇದುವರೆಗೂ ಸಾಬೀತಾಗಿಲ್ಲ. ಶಮಾರ್ ಜೋಸೆಫ್ ಅವರ ಮೇಲೆ 2023ರಲ್ಲಿ ಮೊದಲ ಸಲ ಪ್ರಕರಣ ದಾಖಲಾಗಿದೆ ಎಂದು ವಕೀಲರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಈ ಪ್ರಕರಣದ ಕುರಿತಂತೆ ಗಯಾನಾ ಪೊಲೀಸ್ ಪಡೆಯಾಗಲಿ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಾಗಲಿ ಶಮಾರ್ ಜೋಸೆಫ್ ಅವರ ಮೇಲಿನ ಆರೋಪದ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಶಮಾರ್ ಜೋಸೆಫ್ ಕೂಡಾ ಈ ಕುರಿತಂತೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.