ನವದೆಹಲಿ(ಮಾ.19): ಜಾಗತಿಕ ಪಿಡುಗು ಎನಿಸಿಕೊಂಡಿರುವ ಕೋವಿಡ್‌ 19 ಹೆಮ್ಮಾರಿಯ ವಿರುದ್ದ ಇಡೀ ಜಗತ್ತೇ ಹೋರಾಡುತ್ತಿದೆ. ಭಾರತ ತನ್ನ ದೇಶದ ಜನರನ್ನು ಕಾಪಾಡುವುದರ ಜತೆಗೆ ಸಂಕಷ್ಟದಲ್ಲಿರುವ ಇತರೆ ರಾಷ್ಟ್ರಗಳಿಗೂ ಕೋವಿಡ್‌ ಲಸಿಕೆ ನೀಡುವ ಮೂಲಕ ಮಾನವೀಯತೆ ಮರೆಯುತ್ತಿದೆ. 

ಕೆಲವು ದಿನಗಳ ಹಿಂದಷ್ಟೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆರಿಬಿಯನ್ನರಿಗೆ 50 ಸಾವಿರ ಕೋವಿಡ್‌ ಲಸಿಕೆಯನ್ನು ಕಳಿಸಿಕೊಟ್ಟಿತ್ತು. ಇದೀಗ ಜಮೈಕಾ ಕ್ರಿಕೆಟಿಗರು ಭಾರತ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

'ಹೀಗೆ ಇರೋಣ' ಸ್ನೇಹಿತ 10 ರಾಷ್ಟ್ರಗಳಿಗೆ ಮೋದಿ ಹೇಳಿದ್ದು ಒಂದೇ ಮಾತು

ಯೂನಿವರ್ಸಲ್‌ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್‌ ಈ ಬಗ್ಗೆ ಚಿಕ್ಕ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಕೊರೋನಾ ವಿರುದ್ದ ಹೋರಾಡಲು ಜಮೈಕಾದ ಜನತೆಗೆ ಕೋವಿಡ್‌ ಲಸಿಕೆಯನ್ನು ದೇಣಿಗೆಯಾಗಿ ನೀಡಿದ ಪ್ರಧಾನಿ ಮೋದಿ, ಭಾರತ ಸರ್ಕಾರ ಹಾಗೂ ಭಾರತದ ಜನತೆಗೆ ಧನ್ಯವಾದಗಳು. ನಾವಿದನ್ನು ಪ್ರಶಂಸಿಸುತ್ತೇವೆ ಎಂದು  ಟ್ವೀಟ್‌ ಮಾಡಿದ್ದಾರೆ.

ಇನ್ನು ವೆಸ್ಟ್ ಇಂಡೀಸ್‌ ಸ್ಟಾರ್ ಆಲ್ರೌಂಡರ್‌ ಆ್ಯಂಡ್ರೆ ರಸೆಲ್‌ ಕೂಡಾ ಜಮೈಕಾಗೆ ಕೋವಿಡ್‌ ಲಸಿಕೆ ಕಳಿಸಿಕೊಟ್ಟ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್‌ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.  ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ವಿದೇಶಾಂಗ ಸಚಿವಾಲಯಕ್ಕೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕೋವಿಡ್ ಲಸಿಕೆ ಇಲ್ಲಿಗೆ ತಲುಪಿದ್ದು, ನಾವೆಲ್ಲರೂ ಲಸಿಕೆ ಪಡೆಯಲು ಉತ್ಸುಕರಾಗಿದ್ದೇವೆ. ಇಡೀ ಜಗತ್ತೇ ಸಹಜ ಸ್ಥಿತಿಗೆ ಮರಳುವ ದಿನವನ್ನು ನಾನು ಎದುರು ನೋಡುತ್ತಿದ್ದೇನೆ. ಜಮೈಕಾದ ಜನರು ನಿಮ್ಮ ಈ ನೆರವನ್ನು ಎಂದಿಗೂ ಮರೆಯುವುದಿಲ್ಲ, ಈಗ ನಾವು ನಿಮಗೆ ಮತ್ತಷ್ಟು ಹತ್ತಿರವಾಗಿದ್ದು, ಭಾರತ ಹಾಗೂ ಜಮೈಕಾ ಈಗ ಸಹೋದರರಾದೆವು. ನಿಮ್ಮ ನೆರವನ್ನು ನಾವು ಪ್ರಶಂಸಿಸುತ್ತೇವೆ. ಎಲ್ಲರೂ ಆರೋಗ್ಯವಾಗಿರಿ ಎಂದು ರಸೆಲ್‌ ಭಾರತದ ನೆರವನ್ನು ಸ್ಮರಿಸಿದ್ದಾರೆ. 

ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌, ಮೇಡ್‌ ಇನ್‌ ಇಂಡಿಯಾ ಕೋವಿಡ್‌ ಲಸಿಕೆ ಜಮೈಕಾವನ್ನು ತಲುಪಿದೆ ಎಂದು ಟ್ವೀಟ್‌ ಮಾಡಿದ್ದರು.